‘ಸಂಸಾರಗಳನ್ನು ಸಮಸ್ಯೆಯ ಸುಳಿಗೆ ಸಿಲುಕಿಸಿದ ಪಾಪ ಪ್ರಜ್ಞೆ ಕಾಡುತ್ತಿದೆ’

Update: 2021-09-30 06:44 GMT

ಬೆಂಗಳೂರು, ಸೆ.30: ‘ಮೂವತ್ತು ಮಂದಿ ಕೆಲಸಗಾರರು, ಕೈ ತುಂಬ ಕೆಲಸ. ತಿಂಗಳಿಗೆ ಆರು ಲಕ್ಷ ರೂ.ಸಂಬಳ ಕೊಡ್ತಿದ್ದೆ. ವಹಿವಾಟೂ ಜೋರಾಗಿತ್ತು, ಹಣವೂ ಹರಿದಾಡುತ್ತಿತ್ತು. ಇವತ್ತು ಮೂವತ್ತು ಜನರಿದ್ದ ಜಾಗದಲ್ಲಿ ಆರು ಜನರಿದ್ದಾರೆ. ಅವರಿಗೂ ಸಂಬಳ ಕೊಡಲು ಆಗುತ್ತಿಲ್ಲ. ಅಂದು ಆ ಮೂವತ್ತು ಮಂದಿಯ ಸಂಸಾರಗಳನ್ನು ಸಾಕಿದ ಸಂತೃಪ್ತಿ ಇತ್ತು. ಇಂದು ಆ ಸಂಸಾರಗಳನ್ನು ಸಮಸ್ಯೆಯ ಸುಳಿಗೆ ಸಿಲುಕಿಸಿದ ಪಾಪ ಪ್ರಜ್ಞೆ ಕಾಡುತ್ತಿದೆ.

ಬೆಂಗಳೂರಿನ ಸಾರಕ್ಕಿ ತರಕಾರಿ ಮಾರುಕಟ್ಟೆಯಿಂದ ಕೂಗಳತೆಯ ದೂರದಲ್ಲಿರುವ ಗಣೇಶ್ ಆಫ್ ಸೆಟ್ ಪ್ರಿಂಟರ್ಸ್‌ನ ಮಾಲಕ ಶ್ರೀಧರ್ ಅವರ ಮನದಾಳದ ಮಾತುಗಳಿವು. ಕೊರೋನ ವೈರಸ್ ಜನರನ್ನು ಕಾಡಿದ್ದು, ನಿಯಂತ್ರಿಸಲು ಸರಕಾರ ಲಾಕ್‌ಡೌನ್ ಹೇರಿದ್ದು, ಅದರಿಂದ ಜನ ಸಮಸ್ಯೆಯ ಸುಳಿಗೆ ಸಿಲುಕಿದ್ದು- ಎಲ್ಲವನ್ನು ಪ್ರಿಂಟಿಂಗ್ ಪ್ರೆಸ್ ಮಾಲಕ ಶ್ರೀಧರ್ ಅವರ ಮಾತುಗಳಲ್ಲಿ ಅನುರಣಿಸುತ್ತಿದ್ದವು.

ಹೌದು, ಸರಕಾರವೇನೋ ಇದ್ದಕ್ಕಿದ್ದಂತೆ ಎದುರಾದ ಕೊರೋನ ಸಂಕಷ್ಟದಿಂದ ಪಾರಾಗಲು ಲಾಕ್‌ಡೌನ್ ಹೇರಿತು. ಕೊರೋನ ರೋಗಾಣು ಹರಡುವುದನ್ನು, ರೋಗಕ್ಕೆ ತುತ್ತಾಗಿ ಸಾವು-ನೋವಿಗೆ ಬಲಿಯಾಗುವುದನ್ನೂ ನಿಯಂತ್ರಣಕ್ಕೆ ತಂದಿತು. ಆದರೆ ಸರಕಾರ ಹೇರಿದ ಲಾಕ್‌ಡೌನ್‌ನಿಂದ ಹತ್ತು ಹಲವು ಕ್ಷೇತ್ರಗಳ ವಾಣಿಜ್ಯ-ವ್ಯಾಪಾರ-ವಹಿವಾಟು ಸ್ಥಗಿತವಾಯಿತು. ದುಡಿದು ಉಣ್ಣುವವರ ಬದುಕು ಅತಂತ್ರವಾಯಿತು. ಕಾರ್ಮಿಕರಿಗೆ ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಹಲವು ಸಂಸಾರಗಳು ಬೀದಿಗೆ ಬೀಳುವಂತಾಯಿತು.

ಹಾಗೆ ತೊಂದರೆಗೆ ಸಿಲುಕಿದ ಉದ್ಯಮಗಳಲ್ಲಿ, ಸಣ್ಣ ಕೈಗಾರಿಕೆಗಳ ವ್ಯಾಪ್ತಿಗೆ ಬರುವ ಪ್ರಿಂಟಿಂಗ್ ಪ್ರೆಸ್ ಉದ್ಯಮ ಕೂಡ ಒಂದು. ಸಾಮಾನ್ಯವಾಗಿ ಪ್ರಿಂಟಿಂಗ್ ಪ್ರೆಸ್‌ಗೆ ನಿರಂತರವಾಗಿ ಕೆಲಸವಿರಬೇಕಾಗುತ್ತದೆ. ಪ್ರೆಸ್‌ಗೆ ಪೂರಕವಾದ ಪೇಪರ್, ಬೋರ್ಡ್, ಇಂಕ್ ಉದ್ದಿಮೆಗಳು ಪ್ರೆಸ್‌ಗಳನ್ನು ಅವಲಂಬಿಸಿರುತ್ತವೆ. ಉತ್ಪಾದನಾ ಸ್ಥಳದಿಂದ ಗೋದಾಮಿಗೆ, ಅಂಗಡಿಗಳಿಗೆ, ಅಲ್ಲಿಂದ ಪ್ರೆಸ್‌ಗೆ ಸರಕು ಸಾಗಣೆ ಟೆಂಪೋ, ಆಟೊಗಳು ಬಾಡಿಗೆ ನೆಚ್ಚಿಕೊಂಡಿರುತ್ತವೆ. ಪ್ರೆಸ್‌ನಲ್ಲಿ ಪ್ರಿಂಟರ್, ಪ್ಲೇಟ್ ಮೇಕರ್, ಕಟಿಂಗ್, ಪೇಸ್ಟಪ್, ಬೈಂಡರ್ಸ್‌- ಇವರನ್ನೆಲ್ಲ ಅವಲಂಬಿಸಿರುವ ಲಕ್ಷಾಂತರ ರೂಪಾಯಿ ಬಂಡವಾಳದ ಪ್ರಿಂಟಿಂಗ್ ಪ್ರೆಸ್ ಅರ್ಧ ದಿನ ನಿಂತರೂ, ಮಾಲಕನನ್ನು ಸಾಲ-ಬಡ್ಡಿಗಳ ನೇಣಿಗೇರಿಸುತ್ತದೆ. ಅಂಥಾದ್ದರಲ್ಲಿ ಆರಾರು ತಿಂಗಳು ಬೀಗ ಬಿದ್ದರೆ, ಪರಿಸ್ಥಿತಿ ಏನಾಗಬೇಡ?

‘ನಲವತ್ತು ವರ್ಷಗಳ ಹಿಂದೆ ರುಕ್ಮಿಣಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದಾಗ, ಮೊಳೆ ಜೋಡಿಸುವ ವ್ಯವಸ್ಥೆ ಇದ್ದು, ಫೋಟೊಗಳಿಗೆ ಬ್ಲಾಕ್ ಬಳಸಲಾಗುತ್ತಿತ್ತು. ಆಧುನಿಕ ತಂತ್ರಜ್ಞಾನದ ಫಲವಾಗಿ ಕಂಪ್ಯೂಟರ್ ಬಂದು, ಮೊಳೆ ಜೋಡಿಸುವವರ ಕೆಲಸ ಹೋಯಿತು. ಮೊಳೆ ತಯಾರಿಸುವ ಟೈಪ್ ಫೌಂಡ್ರಿಗಳು, ಮೊಳೆ ಮಾರುವ ಅಂಗಡಿಗಳು ಮುಚ್ಚಿದವು. ನಂತರ ಸಿಟಿಪಿ ಬಂದು ಪ್ಲೇಟ್ ಮೇಕಿಂಗ್ ನಿಂತುಹೋಯಿತು. ಬಟರ್ ಶೀಟ್, ಪ್ಲೇಟ್ ಮೇಕಿಂಗ್, ಎಕ್ಸ್‌ಪೋಸಿಂಗ್ ಮೆಷಿನ್ ತಯಾರಿಸುತ್ತಿದ್ದ ಉದ್ದಿಮೆ-ಅಂಗಡಿಗಳಿಗೆ ಬೀಗ ಬಿತ್ತು. ಹಾಗೆಯೇ ಪೇಸ್ಟಪ್ ಕಲಾವಿದರಿಗೆ ಹಾಗೂ ಬೈಂಡಿಂಗ್ ಕೆಲಸದಲ್ಲಿ ನಿರತರಾಗಿದ್ದ ಹಲವರ ಕೆಲಸ ಕಿತ್ತುಕೊಂಡಿತು.

‘ಇಷ್ಟಾದರೂ ನಮ್ಮ ಪ್ರೆಸ್ ಮುಚ್ಚಲಿಲ್ಲ. ಬದಲಾದ ಕಾಲಮಾನಕ್ಕೆ ತಕ್ಕಂತೆ, ರುಕ್ಮಿಣಿ ಪ್ರೆಸ್ಸನ್ನು ರೂಪಾ ಪ್ರೆಸ್ ಎಂದು ಬದಲಿಸಿಕೊಂಡೆವು. ನಂತರ ಹೊಸ ಕಾಲಕ್ಕೆ ತಕ್ಕಂತೆ ಗಣೇಶ್ ಆಫ್‌ಸೆಟ್ ಪ್ರಿಂಟಿಂಗ್ ಪ್ರೆಸ್ ಎಂದು ಮಾಡಿಕೊಂಡೆವು. ಪುಟ್ಟ ಪ್ರೆಸ್ ದೊಡ್ಡದಾಯಿತು. ನಾಲ್ವರಿದ್ದ ಕಡೆ ಮೂವತ್ತು ಜನ ಕೆಲಸ ಮಾಡುವ ಬಹುದೊಡ್ಡ ಉದ್ದಿಮೆಯನ್ನಾಗಿ ಬೆಳೆಸಿ, ನಾವೂ ಬೆಳೆದೆವು.

‘ಆದರೆ ಇದ್ದಕ್ಕಿದ್ದಂತೆ ಎದುರಾದ ಕೊರೋನ, ಲಾಕ್‌ಡೌನ್‌ನಿಂದ ಎಲ್ಲವನ್ನು ಕಳೆದುಕೊಂಡೆವು. ಮದುವೆಗಳಿಲ್ಲ, ಸಮಾರಂಭಗಳಿಲ್ಲ, ಕಾರ್ಯಕ್ರಮಗಳಿಲ್ಲ. ಅವುಗಳ ನೆಪದಲ್ಲಿ ಪ್ರಿಂಟಾಗುತ್ತಿದ್ದ ಆಹ್ವಾನ ಪತ್ರಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ, ವಾಟ್ಸ್‌ಆ್ಯಪ್‌ನಲ್ಲಿ ಅವರವರೇ ಮಾಡಿಕೊಂಡು, ಹಂಚಿಕೊಂಡು ನಮ್ಮ ಕೆಲಸವನ್ನು ಕಿತ್ತುಕೊಂಡಿದ್ದಾರೆ. ‘ಸ್ಕೂಲು-ಕಾಲೇಜುಗಳು ಮುಚ್ಚಿದ್ದು ಪಠ್ಯಪುಸ್ತಕಗಳು, ಬರೆಯಲು ಬಳಸುತ್ತಿದ್ದ ನೋಟ್ ಪುಸ್ತಕಗಳ ಜಾಗದಲ್ಲಿ ಆನ್‌ಲೈನ್ ಬಂದಿದೆ. ಅಂಗಡಿಗಳು, ಹೊಟೇಲ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ ಬಿಲ್ ಬುಕ್‌ಗಳ ಬದಲಿಗೆ ಡಿಜಿಟಲ್ ಬಂದಿದೆ, ಪೇಪರ್‌ಲೆಸ್ ಆಗಿದೆ. ಇಲ್ಲಿ ನಮಗೇನು ಕೆಲಸ?

‘ಲಾಕ್‌ಡೌನ್ ಸುಸ್ತು ಮಾಡಿರಬಹುದು, ಸಾಯಿಸಿಲ್ಲ. ಕಷ್ಟ ಕೊಟ್ಟಿರಬಹುದು ಕೆಲಸ ಬಿಟ್ಟಿಲ್ಲ. ಮೂವತ್ತು ಜನದ್ದ ಕಡೆ ಆರು ಜನರಿರಬಹುದು, ನೂರು ರೂಪಾಯಿ ಬರುವ ಕಡೆ, ಮೂವತ್ತು ರೂಪಾಯಿ ಬರುತ್ತಿರಬಹುದು, ಪ್ರೆಸ್‌ಗೆ ಬೀಗ ಹಾಕಿಲ್ಲ. ಏಕೆಂದರೆ, ನಮಗೆ ಪ್ರೆಸ್ ಕೆಲಸ ಬಿಟ್ಟರೆ ಬೇರೆಯದು ಗೊತ್ತಿಲ್ಲ. ಸರಕಾರವೇನೋ ಕಾರ್ಮಿಕರಿಗೆ ಕೋಟ್ಯಂತರ ರೂಪಾಯಿ ಕೋವಿಡ್ ಪರಿಹಾರ ಘೋಷಿಸಿತು. ಆದರೆ ನಮಗಂತೂ ನಯಾಪೈಸೆಯೂ ಸಿಗಲಿಲ್ಲ. ಇದು ನನ್ನದೊಂದೇ ಕತೆಯಲ್ಲ, ಪ್ರೆಸ್ ನಂಬಿ ಬದುಕುತ್ತಿರುವವರ ಎಲ್ಲರ ಕತೆ. ಕಷ್ಟದಲ್ಲಿಯೇ ಬಂದ ನಾವು ಹೇಗೋ ಬದುಕಿದ್ದೇವೆ, ಬದುಕುತ್ತೇವೆ ಎಂದು ಶ್ರೀಧರ್ ಆಶಾಭಾವನೆ ವ್ಯಕ್ತಪಡಿಸಿದರು.

ಕೊರೋನ ವೈರಾಣು ಮಾಡಿದ ಹೈರಾಣಿಗಿಂತ, ಸರಕಾರದ ನೀತಿ-ನಿರ್ಧಾರಗಳು ತಂದೊಡ್ಡಿದ ತೊಂದರೆಗಳು ಅಷ್ಟಿಷ್ಟಲ್ಲ. ಆರ್ಥಿಕ ಆಘಾತಗಳು ಅಳತೆಗೆ ಸಿಗುವುದಿಲ್ಲ. ಉಳ್ಳವರಿಗೆ ಇವಾವುದೂ ಅರ್ಥವಾಗುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ನಮ್ಮ ತಾತನ ಕಾಲದಿಂದಲೂ ನಮ್ಮದು ಪ್ರಿಂಟಿಂಗ್ ಪ್ರೆಸ್ ಕೆಲಸ. ನಲವತ್ತು ವರ್ಷಗಳ ಹಿಂದೆ ನಮ್ಮ ಅಜ್ಜಿಯ ಹೆಸರನ್ನೇ ‘ರುಕ್ಮ್ಮಿಣಿ ಪ್ರಿಂಟಿಂಗ್ ಪ್ರೆಸ್’ ಎಂದು ಇಟ್ಟು, ಸಾರಕ್ಕಿಯಲ್ಲಿ ಸಂಸಾರಕ್ಕೊಂದು ದುಡಿಮೆಯ ಮಾರ್ಗ ಕಂಡುಕೊಂಡಿದ್ದೆವು. ನಮ್ಮ ತಾತ, ನಮ್ಮ ತಂದೆ, ನಾನು, ನಮ್ಮ ಮಕ್ಕಳು- ನಾಲ್ಕು ತಲೆಮಾರಿನ ದೊಡ್ಡ ಕುಟುಂಬ ನಮ್ಮದು. ಈ ದೊಡ್ಡ ಕುಟುಂಬವನ್ನು ನಲವತ್ತು ವರ್ಷಗಳ ಕಾಲ ಸಮಸ್ಯೆಯಿಲ್ಲದೆ ಸರಿದೂಗಿಸಿಕೊಂಡು ಹೋಗಿದ್ದು, ಎಲ್ಲರ ಕೈಗೆ ಕೆಲಸ ಕೊಟ್ಟಿದ್ದು, ಆರ್ಥಿಕವಾಗಿ ಸಬಲರಾಗುವಂತೆ ನೋಡಿಕೊಂಡಿದ್ದು ಈ ಪ್ರೆಸ್. ಆದರೆ ಇವತ್ತು ಈ ಪ್ರೆಸ್ ನಮ್ಮ ಕತ್ತು ಹಿಸುಕುತ್ತಿದೆ.

 ಶ್ರೀಧರ್, ಮಾಲಕ, ಗಣೇಶ್ ಆಫ್ ಸೆಟ್ ಪ್ರಿಂಟರ್ಸ್

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News