ಹವಾಮಾನ ವೈಪರೀತ್ಯ: ವಿಶ್ವನಾಯಕರು ಎಚ್ಚೆತ್ತುಕೊಳ್ಳುವರೇ?

Update: 2021-09-30 07:00 GMT

ಇದೇ ತಿಂಗಳು 24ರಂದು ಯುವಜನಾಂಗ ಪ್ರಪಂಚದಾದ್ಯಂತ ಬೀದಿಗಿಳಿದು ವಿನಾಶಕಾರಿ ಹವಾಮಾನ ವೈಪರೀತ್ಯವನ್ನು ಪ್ರತಿಭಟಿಸಿದೆ. ಮುಂದಿನ ತಿಂಗಳು ಕೋಪನ್‌ಹೇಗನ್‌ನಲ್ಲಿ ಯುಎನ್‌ನ 26ನೇ ಶೃಂಗಸಭೆ ನಡೆಯುಲಿದ್ದು ಇದರಲ್ಲಿ ‘ಹಸಿರುಮನೆ ಅನಿಲಗಳು’ ಹೊರಸೂಸುವಿಕೆಯಿಂದ ಭೂಗ್ರಹದ ತಾಪಮಾನ ಏರುತ್ತಿರುವುದರ ವಿರುದ್ಧ ವಿಶ್ವ ನಾಯಕರಿಂದ ಮಹತ್ವಾಕಾಂಕ್ಷೆಯ ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಪ್ರತಿಭಟನೆಯನ್ನು ಯುವಜನರು ಪ್ರಾರಂಭಿಸಿದ್ದಾರೆ.

ಆಕಾಶದಲ್ಲಿ ಇಂಗಾಲ ಡೈಆಕ್ಸೈಡ್ ಸಾಂದ್ರತೆ ಕನಿಷ್ಠ ಕಳೆದ 3 ದಶಲಕ್ಷ ವರ್ಷಗಳ ಕಾಲದಿಂದಲೂ ಹೆಚ್ಚಾಗಿರಲಿಲ್ಲ. ಆದರೆ ಕಳೆದ ಎರಡು ಮೂರು ಶತಮಾನಗಳಿಂದ ಅದು ಬದಲಾಗುತ್ತಾ ಬಂದಿದೆ ಎಂಬುದಾಗಿ ಸ್ವೀಡಿಷ್ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಪ್ರತಿಭಟನಾಕಾರರ ಮುಂದೆ ಹೇಳಿದ್ದಾರೆ. ಯಾವುದೇ ದೇಶ, ಯಾವುದೇ ರಾಜಕೀಯ ಪಕ್ಷ ಹವಾಮಾನ ವೈಪರೀತ್ಯದ ಬಗ್ಗೆ ಇದುವರೆಗೂ ಹೇಳಿದಂತೆ ನಡೆದುಕೊಂಡಿಲ್ಲ. ಪ್ರತಿಯೊಬ್ಬರೂ ಭರವಸೆಗಳನ್ನು ನೀಡುತ್ತಾರೆ, ಆದರೆ ಯಾರೊಬ್ಬರೂ ತಮ್ಮ ಮಾತುಗಳನ್ನು ಉಳಿಸಿಕೊಳ್ಳುತ್ತಿಲ್ಲ.

ಇವರ ವಿರುದ್ಧ 24ರಂದು ಜಗತ್ತಿನ ಅನೇಕ ದೇಶಗಳಲ್ಲಿ ಸಾವಿರಾರು ಕಡೆ ಭೂಮಿಯನ್ನು ಜಾಗತಿಕ ತಾಪಮಾನದಿಂದ ಪಾರು ಮಾಡಲು ಪ್ರತಿಭಟನೆಗಳು ನಡೆದವು. ಏಶ್ಯದಲ್ಲಿ ಫಿಲಿಪ್ಪೀನ್ಸ್ ಮತ್ತು ಬಾಂಗ್ಲಾದೇಶದಲ್ಲಿ ಸಣ್ಣದಾಗಿ ಪ್ರಾರಂಭಗೊಂಡು ಯುರೋಪಿಯನ್ ನಗರಗಳಲ್ಲಿ ದಿನವಿಡೀ ನಡೆಯಿತು. ಯಾವುದೇ ದೇಶ ಹೇಳಿದಂತೆ ಬದ್ಧತೆಯನ್ನು ತೋರಿಸುತ್ತಿಲ್ಲ, 2030ಕ್ಕೆ ಶೇ.45ರಷ್ಟು ಹಸಿರುಮನೆ ಅನಿಲಗಳು ಹೊರಸೂಸುವಿಕೆಯನ್ನು ತಡೆಗಟ್ಟಿದರೆ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಡಿತಗೊಳಿಸುವ ಸಾಧ್ಯತೆ ಇದೆ. ಇಲ್ಲವೆಂದರೆ ಈಗಾಗಲೇ ಸಂಭವಿಸುತ್ತಿರುವ ನೈಸರ್ಗಿಕ ವಿಕೋಪಗಳು ಇನ್ನಷ್ಟು ಹೆಚ್ಚಾಗುತ್ತವೆ ಎಂಬುದಾಗಿ ವಿಶ್ವಸಂಸ್ಥೆ ಹೇಳಿದೆ.

ಈಗಿನ ಪ್ರತಿಭಟನೆ 2019ರಲ್ಲಿ ಕೋವಿಡ್-19 ಹರಡುವುದಕ್ಕೆ ಮುಂಚೆ ಜಗತ್ತಿನಾದ್ಯಂತ ಆರಂಭವಾದ ಯುವ ಪ್ರತಿಭಟನೆಯನ್ನು ನೆನಪಿಸುತ್ತಿದ್ದು, ಆಗ 6 ದಶಲಕ್ಷಕ್ಕಿಂತ ಹೆಚ್ಚು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಕೊರೋನ ಸಾಂಕ್ರಾಮಿಕದ ನಡುವೆಯೂ ಹವಾಮಾನ ಬಿಕ್ಕಟ್ಟಿನ ತುರ್ತುಸ್ಥಿತಿಯನ್ನು ಒತ್ತಿ ಹೇಳುವ ಉದ್ದೇಶದಿಂದ ಜಗತ್ತಿನಾದ್ಯಂತ ಶಾಲಾವಿದ್ಯಾರ್ಥಿಗಳು, ಯುವ ಕಾರ್ಯಕರ್ತರು ಮತ್ತು ಜನಸಮುದಾಯಗಳು ಪಾಲ್ಗೊಂಡಿದ್ದವು. ಕೋವಿಡ್-19, ಪ್ರತಿಭಟನೆಯನ್ನು ತಗ್ಗಿಸಿದ ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ವಿಶ್ವನಾಯಕರ ಹವಾಮಾನ ಧೊೀರಣೆಗಳನ್ನು ವಿರೋಧಿಸಲಾಯಿತು.

ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಪ್ರತಿಭಟನಾಕಾರರು ರಾಜಕಾರಣಿಗಳಿಗೆ, ‘ನಮ್ಮ ಭವಿಷ್ಯಕ್ಕೆ ಹಣ ತೊಡಗಿಸಿ ಅನಿಲಕ್ಕಲ್ಲ’ ಎನ್ನುತ್ತ ಆಸ್ಟ್ರೇಲಿಯಾದಲ್ಲಿ ಹೊತ್ತಿ ಉರಿದ ಕಾಡ್ಗಿಚ್ಚನ್ನು ನೆನಪಿಸಿದರು. ಫಿಲಿಪ್ಪೀನ್ಸ್‌ನಲ್ಲಿಯೂ ಪ್ರತಿಭಟನೆ ನಡೆದು ಮಿಟ್ಟಿ ಜೊನೆಲ್ಲೆ ಟಾನ್ ಎಂಬ ಕಾರ್ಯಕರ್ತ, ‘‘ಹವಾಮಾನ ವೈಪರೀತ್ಯ ನಮ್ಮ ದೇಶದ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ಜಾಗತಿಕ ಹವಾಮಾನ ಅಪಾಯ ಸೂಚ್ಯಂಕದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೂ ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ನಮ್ಮ ದೇಶದ ಕೊಡುಗೆ ತುಂಬಾ ಕಡಿಮೆ. ಹವಾಮಾನ ಬಿಕ್ಕಟ್ಟಿಗೆ ಹೆಚ್ಚು ಕೊಡುಗೆ ನೀಡಿದವರ ಮೇಲೆ ಹವಾಮಾನ ವೈಪರೀತ್ಯ ಕಡಿಮೆ ಪರಿಣಾಮ ಬೀರುತ್ತಿದೆ- ಅವರು ಈಗ ಏನು ಮಾಡುತ್ತಿದ್ದಾರೆ?’’ (ಚೀನಾ (ಶೇ.28), ಅಮೆರಿಕ(ಶೇ.15), ಭಾರತ(ಶೇ.7), ರಶ್ಯ(ಶೇ.5) ಮತ್ತು ಜಪಾನ್(ಶೇ.3) ಮೊದಲ ಐದು ದೇಶಗಳು) ಎಂದು ಪ್ರಶ್ನಿಸಿದ. ಉಳಿದ ಜಗತ್ತಿನ ಎಲ್ಲಾ ದೇಶಗಳು ಶೇ. 42 ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತವೆ.

ಜಾಗತಿಕ ತಾಪಮಾನ ಹೆಚ್ಚುತ್ತಿರುವುದರ ಜೊತೆಗೆ ನೈಸರ್ಗಿಕ ವಿಪತ್ತುಗಳು ಶರವೇಗದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ಯುವಜನರು ಸಿಡಿದುನಿಂತು ವಿಶ್ವನಾಯಕರ ವಿರುದ್ಧ ಪ್ರತಿಭಟನೆಗಳನ್ನು ನೇರವಾಗಿ ಮತ್ತು ಅಂತರ್ಜಾಲದ ಮೂಲಕ ನಡೆಸಲು ಸಜ್ಜಾಗುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮುಂದಿನ ಪೀಳಿಗೆಗಳಿಗಾಗಿ ಪರಿಸರವನ್ನು ಉಳಿಸಿ ಎಂಬ ಘೋಷಣೆಗಳು ಕೇಳಿಬರುತ್ತಿದ್ದವು. ಆದರೆ ಈಗ ನಾವು ಭವಿಷ್ಯಕ್ಕಾಗಿ ಹೋರಾಡುತ್ತಿಲ್ಲ, ವರ್ತಮಾನಕ್ಕಾಗಿಯೇ ಹೋರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುಾಗಿ ಕಾರ್ಯಕರ್ತರು ಹೇಳುತ್ತಿದ್ದಾರೆ.

ಕೈಗಾರಿಕಾ ಕ್ರಾಂತಿ ಮೊದಲಿಗೆ 1600ರಲ್ಲಿ (ಜಾಗತಿಕ ತಾಪಮಾನವೂ) ಯುರೋಪ್, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಪ್ರಾರಂಭವಾದರೂ 1980ರಿಂದ ಅದು ತೀರಾ ವೇಗ ಪಡೆದುಕೊಂಡು ಶತಮಾನದಲ್ಲಿ ಕಂಡುಬರುವ ಬದಲಾವಣೆ ಕೇವಲ ಒಂದು ದಶಕದಲ್ಲಿ ಕಾಣಿಸಿಕೊಳ್ಳತೊಡಗಿತು. ಜಾಗತಿಕ ತಾಪಮಾನ ತೀರಾ ವೇಗ ಪಡೆದುಕೊಂಡಿದ್ದರ ಫಲಿತಾಂಶ ಕಳೆದ ಎರಡುಮೂರು ದಶಕಗಳಲ್ಲಿ ಜಗತ್ತಿನ ಮೂಲೆಮೂಲೆಯಲ್ಲೂ ಬರ, ಪ್ರವಾಹ, ಬಿಸಿಗಾಳಿ, ಭೂಕುಸಿತ, ಉಷ್ಣದ ಅಲೆಗಳು, ಚಂಡಮಾರುತ, ಸುನಾಮಿ, ಕಾಡ್ಗಿಚ್ಚು ಆವರಿಸಿಕೊಂಡು ಜನರು ತಿೀರಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಮೂರನೇ ಜಗತ್ತಿನ ದೇಶಗಳಂತೂ ಆಹಾರ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಮಾಲಿನ್ಯ, ವಾಯುಮಾಲಿನ್ಯ, ಬೆಳಕಿನಮಾಲಿನ್ಯ, ಶಬ್ದಮಾಲಿನ್ಯ, ಮಣ್ಣುಮಾಲಿನ್ಯ, ವಿಕಿರಣಮಾಲಿನ್ಯ, ಉಷ್ಣಮಾಲಿನ್ಯ, ದೃಶ್ಯಮಾಲಿನ್ಯ ಹೀಗೆ ಇಡೀ ಭೂಗ್ರಹವೇ ಮಾಲಿನ್ಯದಿಂದ ತತ್ತರಿಸಿಹೋಗಿದೆ. ಈ ಎಲ್ಲದರ ಕಾರಣದಿಂದ ಜನರು, ಜಾನುವಾರುಗಳು ಮತ್ತು ವನ್ಯಪ್ರಾಣಿಗಳಲ್ಲಿ ರೋಗರುಜಿನಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಸಮುದ್ರಮಟ್ಟ ಏರಿಕೆಯಿಂದ ದೇಶಕ್ಕೆ ಗಂಡಾಂತರ ಬಂದಿದೆ ಎಂದು ಎಚ್ಚರಿಸಿದರು. ಏಕೆಂದರೆ, ಅವರ ಮನೆಗಳು ಮತ್ತು ನೂರಾರು ಹಳ್ಳಿಗಳು ಈಗಾಗಲೇ ಜಲಾವೃತಗೊಂಡು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಸಾವಿರಾರು ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಹವಾಮಾನ ತುರ್ತುಪರಿಸ್ಥಿತಿ ಘೋಷಿಸಲು ಸರಕಾರವನ್ನು ಒತ್ತಾಯಿಸಿದರು. ಆಫ್ರಿಕಾದ ಇತರ ದೇಶಗಳಲ್ಲೂ ಪ್ರತಿಭಟನೆಗಳು ನಡೆದವು.

ನಾರ್ವೇಜಿಯನ್ ದ್ವೀಪಸಮೂಹದ ಸ್ವಾಲ್‌ಬಾರ್ಡ್‌ನ ಉತ್ತರದ ಆರ್ಕ್ಟಿಕ್ ಹಿಮದ ಅಂಚಿನಲ್ಲಿ 18 ವರ್ಷದ ಪಕ್ಷಿಶಾಸ್ತ್ರಜ್ಞೆ ‘ಪಕ್ಷಿಹುಡುಗಿ’ ಮಿಯಾ-ರೋಸ್ ಕ್ರೇಗ್, ಗ್ರೀನ್ ಪೀಸ್ ಹಡಗಿನಲ್ಲಿ ಧಾವಿಸಿ ಸೂರ್ಯೋದಯ ವೀಕ್ಷಿಸುತ್ತಿದ್ದಳು. ಆಕೆ, ‘‘ನಾನು ಇಲ್ಲಿರುವುದು ಏಕೆಂದರೆ ಭೂಗ್ರಹದ ಈ ನಿರ್ಣಾಯಕ ರಕ್ಷಕ, ಆರ್ಕ್ಟಿಕ್ ಸಾಗರ ಭಯಾನಕ ರೀತಿದಲ್ಲಿ ಕರಗುತ್ತಿರುವುದರಿಂದ ಎಷ್ಟು ಅಪಾಯದಲ್ಲಿದೆ ಎನ್ನುವುದನ್ನು ನೋಡಲು ಬಂದಿದ್ದೇನೆ’’ ಎಂದು ಹೇಳಿದಳು.

ಇದೇ ವಾರದ ಆರಂಭದಲ್ಲಿ ವಿಜ್ಞಾನಿಗಳು ‘‘ಆರ್ಕ್ಟಿಕ್ ಸಮುದ್ರದ ಐಸ್ ಕಳೆದ 4 ದಶಕಗಳ ಉದ್ದಕ್ಕೂ ನಿರಂತರವಾಗಿ ಕಡಿಮೆ ಬೀಳುತ್ತಿದ್ದು, ಈ ವರ್ಷ ಅತಿ ಕಡಿಮೆ ಐಸ್ ಬಿದ್ದ ವರ್ಷವಾಗಿದೆ’’ ಎಂದು ಹೇಳಿದರು. ನ್ಯೂಯಾರ್ಕ್ ನಲ್ಲಿ ನಡೆಯುವ ವಿಶ್ವಸಂಸ್ಥೆ ಸಭೆಯಲ್ಲಿ ವಿಶ್ವನಾಯಕರು ನೇರವಾಗಿ ಮತ್ತು ಆನ್‌ಲೈನ್‌ನಲ್ಲಿ ಇದೇ ವಿಷಯವನ್ನು ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. ಚೀನಾ 2060ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ತಟಸ್ಥ (ನ್ಯೂಟ್ರಲ್) ಮಾಡುವುದಾಗಿ ಘೋಷಿಸಿ ಎಲ್ಲರಲ್ಲೂ ಆಶ್ಚರ್ಯವ್ಯಕ್ತಪಡಿಸಿದೆ. ಇದಕ್ಕೆ ಮುಂಚೆ 2030ಕ್ಕೆ ಕಡಿಮೆ ಮಾಡುವುದಾಗಿ ಹೇಳಿತ್ತು.

ಯುರೋಪ್ ಯೂನಿಯನ್ ದೇಶಗಳು 2030ಕ್ಕೆ ಶೇ. 55 ಹಸಿರುಮನೆ ಅನಿಲಗಳನ್ನು ಕಡಿತಗೊಳಿಸುವುದಾಗಿ ಹೇಳಿದ್ದವು. ವಿಶ್ವದ ಎರಡನೇ ಅತಿದೊಡ್ಡ ಹಸಿರುಮನೆ ಅನಿಲಗಳ ಹೊರಸೂಸುವಿಕೆ ದೇಶ ಅಮೆರಿಕ, ಪ್ಯಾರಿಸ್ ಒಪ್ಪಂದದಿಂದ ಟ್ರಂಪ್ ಕಾಲದಲ್ಲಿ ಹಿಂದಕ್ಕೆ ಸರಿದಿದ್ದು, ಜೋ ಬೈಡನ್ ಮತ್ತೆ ಸೇರಿಕೊಳ್ಳುವ ಭರವಸೆ ನೀಡಿದ್ದಾರೆ. ಯು.ಕೆ. ಮುಂದಿನ ಹವಾಮಾನ ಶೃಂಗಸಭೆಯನ್ನು ನವೆಂಬರ್ 2021ಕ್ಕೆ ಆಯೋಜಿಸಲಿದ್ದು ಇದನ್ನು ‘ಕೋಪ್-26’ ಎಂದು ಹೆಸರಿಸಲಾಗಿದೆ. ಯು.ಕೆ. ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಇದೇ ಡಿಸೆಂಬರ್‌ನಲ್ಲಿ ಪ್ಯಾರಿಸ್ ಒಪ್ಪಂದದ ಐದನೇ ವಾರ್ಷಿಕೋತ್ಸವದ ಪ್ರಮುಖ ಆರ್ಥಿಕತೆಯ ವಿಶ್ವನಾಯಕರ ಮಧ್ಯಂತರ ಶೃಂಗಸಭೆಯನ್ನು ಕರೆಯಲಿದ್ದಾರೆ.

ಈ ಮಧ್ಯಂತರ ಸಭೆಯಲ್ಲಿ ಎಲ್ಲಾ ದೇಶಗಳು ತಮ್ಮತಮ್ಮ ಯೋಜನೆಗಳೊಂದಿಗೆ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳು ಅಥವಾ ಹಸಿರುಮನೆ ಅನಿಲಗಳನ್ನು ಕಡಿತಗೊಳಿಸುವ ಪ್ರಯತ್ನಗಳನ್ನು ಬಲಪಡಿಸುವ ಯೋಜನೆಗಳೊಂದಿಗೆ 2015ರ ಒಪ್ಪಂದದಂತೆ ಬರುತ್ತವೆ ಎಂಬ ನಿರೀಕ್ಷೆಯನ್ನು ಸಭೆ ಹೊಂದಿದೆ. ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಂದ ಶೇ. 3 ಇಂಗಾಲ ಬಿಡುಗಡೆಯಾಗುತ್ತಿದ್ದು ಜಗತ್ತಿನ ಎಲ್ಲಾ ಪ್ರದೇಶಗಳ ಮೇಲೂ ತೀವ್ರ ಹವಾಮಾನ ವೈಪರೀತ್ಯ ಉಂಟಾಗಲಿದೆ. ಈಗಾಗಲೇ ಅದು ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯುವ ಎರಡೂ ಶೃಂಗ ಸಭೆಗಳ ಮೇಲೆ ಒತ್ತಾಯ ಹೇರಲು ಈಗಾಗಲೇ ಯುವಜನರು ಜಗತ್ತಿನಾದ್ಯಂತ ಒಟ್ಟುಗೂಡುತ್ತಿದ್ದಾರೆ.

ಯುಎಸ್ ಪಶ್ಚಿಮದಿಂದ ಹಿಡಿದು ಸೈಬೀರಿಯನ್ ಆರ್ಕ್ಟಿಕ್‌ವರೆಗೂ ಅಸಹಜ ಶಾಖದ ಅಲೆಗಳು ಏಳುತ್ತಿದ್ದು ಚೀನಾದಲ್ಲಿ ಭೀಕರ ಪ್ರವಾಹಗಳು ಕಾಣಿಸಿಕೊಂಡಿವೆ. ಕ್ಯಾಲಿಫೋರ್ನಿಯಾ ಬೆಂಕಿಯಿಂದ ಉರಿಯುತ್ತಿದ್ದರೆ, ಆಫ್ರಿಕಾದ ಕೆಲವು ಭಾಗಗಳು ಮತ್ತು ಫಿಲಿಪ್ಪೀನ್ಸ್ ಪ್ರವಾಹದಲ್ಲಿ ಕೊಚ್ಚಿಹೋದವು. ಆಸ್ಟ್ರೇಲಿಯಾದ ಲಕ್ಷಾಂತರ ಚದರ ಕಿಲೋಮೀಟರುಗಳ ಅರಣ್ಯ ನೂರಾರು ಕೋಟಿ ವನ್ಯಪ್ರಾಣಿಗಳಿಂದ ಉರಿದು ಕರಕಲಾಯಿತು. ಎಲ್ಲಾ ಸಮುದ್ರಗಳಲ್ಲೂ ನಿರಂತರವಾಗಿ ಎದ್ದುಬರುವ ಚಂಡಮಾರುತಗಳು ಜನರ ಬದುಕನ್ನು ದಿಕ್ಕಾಪಾಲು ಮಾಡುತ್ತಿವೆ. ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಕೆಲವು ಕಾರ್ಯಕರ್ತರು ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಿದ ತಲೆಗವಸಗಳನ್ನು ಧರಿಸಿ ‘‘ಆಫ್ರಿಕಾ ಪ್ಲಾಸ್ಟಿಕ್ ಡಂಪ್ೈಟ್ ಅಲ್ಲ’’ ಎಂದು ಪ್ರತಿಭಟಿಸಿದರು.

ಇದನ್ನೆಲ್ಲ ಗಮನಿಸುತ್ತಿರುವ ಯುವಜನತೆ ಜಗತ್ತಿನಾದ್ಯಂತ ಮೊನ್ನೆ ಸೆಪ್ಟಂಬರ್ 24ರಂದು ಹವಾಮಾನ ವೈಫಲ್ಯದ ವಿರುದ್ಧ ತುರ್ತುಕ್ರಮಕ್ಕೆ ಕರೆ ನೀಡಲು ಪ್ರತಿಭಟನೆ ಪ್ರಾರಂಭಿಸಿದೆ. ಮುಂದೆ ಇವರ ಪ್ರತಿಭಟನೆ ಇಡೀ ವಿಶ್ವವನ್ನು ವ್ಯಾಪಿಸಿಕೊಳ್ಳಬಹುದು. ಆದರೆ ವಿಶ್ವನಾಯಕರು ಎಚ್ಚೆತ್ತುಕೊಳ್ಳುವರೇ ಕಾದುನೋಡಬೇಕಿದೆ.

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News