ಕುನಾಲ್ ಕಾಮ್ರಾ ವಿರುದ್ಧ ಕ್ರಿಮಿನಲ್ ದೂರು ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಎತ್ತಿ ಹಿಡಿದ ನ್ಯಾಯಾಲಯ

Update: 2021-10-01 12:01 GMT
Photo: Scroll.in

 ಹೊಸದಿಲ್ಲಿ: ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಟ್ವೀಟ್ ಮಾಡಿದ ಚಿತ್ರವೊಂದು ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸಿದೆ ಎಂದು ಆರೋಪಿಸಿ ಅವರ ವಿರುದ್ಧ  ತಾನು ನೀಡಿದ್ದ ದೂರನ್ನು ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸ್ಥಳೀಯ ವಕೀಲರೊಬ್ಬರು ಸಲ್ಲಿಸಿದ್ದ ಅಪೀಲನ್ನು ವಾರಣಾಸಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್ ಕಟ್ಟಡದಲ್ಲಿರುವ ರಾಷ್ಟ್ರಧ್ವಜದ ಸ್ಥಾನದಲ್ಲಿ ಬಿಜೆಪಿ ಧ್ವಜ ಕಾಣಿಸುವಂತೆ ಒಂದು ಚಿತ್ರವನ್ನು ಕುನಾಲ್ ಕಾಮ್ರಾ ಆವರು ಟ್ವೀಟ್ ಮಾಡಿದ್ದನ್ನು  ವಿರೋಧಿಸಿ ವಕೀಲ ಸೌರಭ್ ತಿವಾರಿ ಎಂಬವರು ದಾಖಲಿಸಿದ್ದ ದೂರು ತಮ್ಮ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಹೇಳಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಜಾಗೊಳಿಸಿತ್ತು.

ನಂತರ ಅವರು ವಾರಣಾಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಆದರೆ ಇತ್ತಂಡಗಳ ವಾದ ಆಲಿಸಿದ ಈ ನ್ಯಾಯಾಲಯ ಕೂಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಕಾಮ್ರಾ ವಿರುದ್ಧ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವಿರುವುದರಿಂದ ಅದರ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಯಾವುದೇ ಉದ್ದೇಶ ಈಡೇರಿಸಿದಂತಾಗುವುದಿಲ್ಲ ಎಂದು ವಾರಣಾಸಿ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News