ದುಬೈ: ಎಕ್ಸ್‌ಪೋ 2020ಕ್ಕೆ ಚಾಲನೆ
ದುಬೈ, ಅ.1: ದುಬೈಯಲ್ಲಿ ಗುರುವಾರ ಆರಂಭಗೊಂಡ ಎಕ್ಸ್‌ಪೋ 2020 ವಿಶ್ವ ಉದ್ಯಮಮೇಳವು ದುಬೈಯಲ್ಲಿ ಪೂರ್ವ ಮತ್ತು ಪಶ್ಚಿಮದ ಸಂಗಮಕ್ಕೆ ಸಾಕ್ಷಿಯಾಗಿದೆ ಎಂದು ಯುಎಇ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ದುಬೈಯಲ್ಲಿ ಆಯೋಜಿಸಲಾಗಿರುವ ಎಕ್ಸ್‌ಪೋ 2020ರ ಅಮೆರಿಕ ಮತ್ತು ಚೀನಾದ ಪ್ರರ್ದಶನ ವೇದಿಕೆಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ‘ ಉದ್ದೇಶದ ಹೊಸ ಅರ್ಥದೊಂದಿಗಿನ ತನ್ನ ಪ್ರಯಾಣದ ಮತ್ತೊಂದು ಅಧ್ಯಾಯವನ್ನು ಯುಎಇ ಈದಿನ ಆರಂಭಿಸಿದೆ. ಅತ್ಯಾಕರ್ಷಕ ಸಾಧ್ಯತೆಗಳು ತುಂಬಿರುವ ಈ ಪ್ರಯಾಣದಲ್ಲಿ ಹೊಸ ಕನಸು ಮತ್ತು ಮಹಾತ್ವಾಕಾಂಕ್ಷೆಗಳು ಸಾಕಾರ ರೂಪ ಪಡೆಯಲಿದೆ. ತಾನು ಯಾವತ್ತೂ ಸವಾಲನ್ನು ಅಪ್ಪಿಕೊಳ್ಳಲು ಸಿದ್ಧ ಮತ್ತು ಪ್ರಗತಿ ಮತ್ತು ಅಭಿವೃದ್ಧಿಗೆ ಪೂರಕವಾದ ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಯಾವುದೇ ಬಿಕ್ಕಟ್ಟನ್ನೂ ಎದುರಿಸಲು ಶಕ್ತ ಎಂಬುದನ್ನು ಯುಎಇ ಮತ್ತೊಮ್ಮೆ ಜಗತ್ತಿಗೆ ತೋರಿಸಿಕೊಟ್ಟಿದೆ’ ಎಂದರು.
ಎಕ್ಸ್‌ಪೋ 2020 ಮಾನವನ ಸಾಧನೆ ಮತ್ತು ಶ್ರೇಷ್ಟತೆಯ ಪ್ರದರ್ಶನಕ್ಕೆ ವೇದಿಕೆಯಾಗಿದೆ. ವಿಶ್ವದೆಲ್ಲೆಡೆಯ ಮನಸ್ಸುಗಳನ್ನು ಬೆಸೆಯುವ , ದೇಶಗಳನ್ನು , ಸಂಸ್ಕತಿಗಳನ್ನು ಮತ್ತು ಸಂಸ್ಥೆಗಳನ್ನು ಒಂದೆಡೆ ಸೇರಿಸುವ , ತಮ್ಮ ನೂತನ ಮಹೋನ್ನತ ಪರಿಕಲ್ಪನೆಗಳನ್ನು ಪರಸ್ಪರ ಹಂಚಿಕೊಳ್ಳುವ ಮತ್ತು ತಿಳುವಳಿಕೆಯ ಸೇತುವೆ ನಿರ್ಮಿಸುವ , ಮನುಕುಲದ ಭವಿಷ್ಯವನ್ನು ಮತ್ತಷ್ಟು ಸುಸ್ಥಿರ ಮತ್ತು ಸಮೃದ್ಧಗೊಳಿಸುವ ಜಾಗತಿಕ ಪ್ರಯತ್ನಗಳನ್ನು ಒಗ್ಗೂಡಿಸುವ ವೇದಿಕೆಯಾಗಿದೆ ಎಂದವರು ಶ್ಲಾಸಿದರು.