ದುಬೈ ಎಕ್ಸ್‌ಪೋ ತಾಣ ನಿರ್ಮಾಣ ವೇಳೆ 3 ಕಾರ್ಮಿಕರು ಮೃತ್ಯು, 70 ಮಂದಿಗೆ ಗಾಯ

Update: 2021-10-03 04:00 GMT

ದುಬೈ: ದುಬೈ ಎಕ್ಸ್‌ಪೋ-2020 ತಾಣದ ನಿರ್ಮಾಣ ಕಾರ್ಯದಲ್ಲಿ ಮೂವರು ಕಾರ್ಮಿಕರು ಮೃತಪಟ್ಟು 70ಕ್ಕೂ ಅಧಿಕ ಮಂದಿ  ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಆದರೆ ಸುರಕ್ಷಾ ಗುಣಮಟ್ಟ ವಿಶ್ವದರ್ಜೆಯದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮಾನವ ಹಕ್ಕು ದಾಖಲೆಗಳು ಮತ್ತು ವಲಸೆ ಕಾರ್ಮಿಕರ ಬಗೆಗಿನ ಅಮಾನವೀಯ ನಡವಳಿಕೆ ಹಿನ್ನೆಲೆಯಲ್ಲಿ ಆರು ತಿಂಗಳ ವಿಶ್ವ ವಸ್ತುಪ್ರದರ್ಶನವನ್ನು ಬಹಿಷ್ಕರಿಸಲು ಯೂರೋಪಿಯನ್ ಸಂಸತ್ತು ಕರೆ ನೀಡಿದ ಬೆನ್ನಲ್ಲೇ ದುರಂತದ ವಿವಗಳನ್ನು ಬಿಡುಗಡೆ ಮಾಡಲಾಗಿದೆ.

ದುಬೈ ನಗರದ ಹೊರವಲಯದಲ್ಲಿ 20 ಸಾವಿರಕ್ಕೂ ಅಧಿಕ ಕಾರ್ಮಿಕರು ಬೃಹತ್ ವಸ್ತುಪ್ರದರ್ಶನ ತಾಣವನ್ನು ನಿರ್ಮಿಸಿದ್ದಾರೆ. ಮೊನಾಕೊ ಗಾತ್ರದ ಎರಡರಷ್ಟಿರುವ ವಸ್ತುಪ್ರದರ್ಶನ ಆವರಣದಲ್ಲಿ ನೂರಾರು ಪೆವಿಲಿಯನ್‌ಗಳು ಮತ್ತು ಸೌಲಭ್ಯಗಳಿವೆ.
ಯುಎಇ ಹಾಗೂ ಮುಂದಿನ ವರ್ಷದ ವಿಶ್ವಕಪ್ ಆತಿಥ್ಯ ವಹಿಸಲಿರುವ ಕತರ್ ಮೇಲೆ ಹಲವು ಚಳವಳಿಕಾರರ ಗುಂಪುಗಳು ಕೆಂಗಣ್ಣು ಬೀರಿದ್ದು, ಬಹುತೇಕ ದಕ್ಷಿಣ ಏಷ್ಯಾದಿಂದ ಆಗಮಿಸಿದ ಕಾರ್ಮಿಕರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಆಕ್ಷೇಪಗಳು ಕೇಳಿ ಬಂದಿದ್ದವು.

"ದುರಾದೃಷ್ಟವಶಾತ್ ಕಾಮಗಾರಿಯ ವೇಳೆ ಮೂವರು ಕಾರ್ಮಿಕರು ಮೃತಪಟ್ಟಿದ್ದು, 72 ಮಂದಿ ಗಾಯಗೊಂಡಿದ್ದಾರೆ" ಎಂದು ಸಂಯೋಜಕರು ಪ್ರಕಟಿಸಿದ್ದಾರೆ. ಆದರೆ ಕಾರ್ಮಿಕರ ಕಲ್ಯಾಣಕ್ಕೆ ಆದ್ಯತೆ ನೀಡಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. 247 ದಶಲಕ್ಷ ಮಾನವ ದಿನಗಳ ಕೆಲಸ ಇಲ್ಲಿ ನಡೆದಿದೆ. ಆದರೆ ಅವಘಡಗಳ ಪ್ರಮಾಣ ಬ್ರಿಟನ್‌ಗಿಂತ ಕಡಿಮೆ ಎಂದು ಹೇಳಿದ್ದಾರೆ.

ದುಬೈ ಎಕ್ಸ್‌ಪೋ- 2020ರಲ್ಲಿ ಸಂಬಂಧ ಪಟ್ಟ ಎಲ್ಲರ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣದ ದೃಷ್ಟಿಯಿಂದ ವಿಶ್ವದರ್ಜೆಯ ನೀತಿಗಳನ್ನು, ಮಾನದಂಡಗಳನ್ನು ಮತ್ತು ಪ್ರಕ್ರಿಯೆಗಳನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News