ಶಹೀನ್ ಚಂಡಮಾರುತ: ಯುಎಇ, ಸೌದಿ ಅರೆಬಿಯಾದಲ್ಲಿ ಮುನ್ನೆಚ್ಚರಿಕೆ
ಅಬುಧಾಬಿ, ಅ.4: ನೆರೆರಾಷ್ಟ್ರ ಒಮಾನ್ ನಲ್ಲಿ ಶಹೀನ್ ಚಂಡಮಾರುತದ ಅಬ್ಬರಕ್ಕೆ ಸಿಲುಕಿ 12 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಯುಇಎ ಮತ್ತು ಸೌದಿ ಅರೆಬಿಯಾದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಹೀನ್ ಚಂಡಮಾರುತ ಯುಎಇಯತ್ತ ಮುಂದುವರಿಯುತ್ತಿದ್ದು ಬಿರುಗಾಳಿಯ ಸಹಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ದೃಢಪಡಿಸಿದ ಬಳಿಕ ಬೀಚ್ಗಳಲ್ಲಿ ಪೊಲೀಸರ ಗಸ್ತುಕಾರ್ಯ ಬಿಗುಗೊಳಿಸಲಾಗಿದೆ. ಒಮನ್ನ ಗಡಿಯಲ್ಲಿರುವ ಅಲ್-ಇನ್ ಪ್ಯಾಂತ್ಯದ ಸರಕಾರಿ ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿಗಳಿಗೆ ಸೋಮವಾರ ಮನೆಯಲ್ಲಿಯೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ತುರ್ತು ಅಗತ್ಯದ ಕೆಲಸಕ್ಕೆ ಮಾತ್ರ ಮನೆಯಿಂದ ಹೊರತೆರಳುವಂತೆ ನಿವಾಸಿಗಳಿಗೆ ಸಲಹೆ ನೀಡಲಾಗಿದೆ . ಚಂಡಮಾರುತದ ಪ್ರಭಾವಕ್ಕೆ ಒಳಗಾಗುವ ಪ್ರದೇಶಗಳಲ್ಲಿರುವ ಮನೆಗಳ ಸುರಕ್ಷತೆಯನ್ನು ಪರಿಶೀಲಿಸಲಾಗಿದ್ದು, ಹಲವು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೆಬಿಯಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಹಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಮನ್ಗೆ ರವಿವಾರ ಅಪ್ಪಳಿಸಿದ ಶಹೀನ್ ಚಂಡಮಾರುತದಿಂದ ಹಲವೆಡೆ ಧಾರಾಕಾರ ಮಳೆಯಾಗಿದ್ದು ರಸ್ತೆಗಳು ಜಲಾವೃತಗೊಂಡಿವೆ. ಗಂಟೆಗೆ 120ರಿಂದ 150 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ ಕಾರಣ ಸಮುದ್ರದಲ್ಲಿ 10 ಮೀಟರ್ಗೂ ಎತ್ತರದ ಅಲೆಗಳು ಕಾಣಿಸಿಕೊಂಡಿವೆ.
ಚಂಡಮಾರುತದಿಂದಾದ ಉಂಟಾದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದ್ದು 2,700ಕ್ಕೂ ಅಧಿಕ ಮಂದಿಯನ್ನು ತುರ್ತು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಒಮನ್ ಸರಕಾರದ ಮೂಲಗಳು ಹೇಳಿವೆ.
ಇರಾನ್ನಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಚಂಡಮಾರುತದ ಪ್ರಭಾವದಿಂದ ಸಮುದ್ರದಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ 6 ಮಂದಿಯಲ್ಲಿ ಒಬ್ಬನ ಮೃತದೇಹ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.