ಸೌದಿ-ಇರಾನ್ ಮಾತುಕತೆ ಇನ್ನೂ ವಿಶ್ಲೇಷಣಾತ್ಮಕ ಹಂತದಲ್ಲಿದೆ: ಸೌದಿ ಅರೇಬಿಯಾ

Update: 2021-10-04 16:04 GMT

ರಿಯಾದ್, ಅ.4: ಸೌದಿ ಅರೆಬಿಯಾ ಮತ್ತು ಇರಾನ್ ನಡುವಿನ ಮಾತುಕತೆ ಈಗಿನ್ನೂ ಆರಂಭಿಕ ಹಂತದಲ್ಲಿದ್ದರೂ, ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನಹರಿಸಲು ಮೂಲಾಧಾರವಾಗಿದೆ ಎಂದು ಸೌದಿ ಅರೆಬಿಯಾದ ವಿದೇಶ ವ್ಯವಹಾರ ಸಚಿವ, ಯುವರಾಜ ಫೈಸಲ್ಬಿನ್ ಫರ್ಹಾನ್ ರವಿವಾರ ಹೇಳಿದ್ದಾರೆ.

‌ಉಭಯ ದೇಶಗಳ ನಡುವೆ ಸೆಪ್ಟಂಬರ್ 21ರಂದು ನಡೆದ ಮಾತುಕತೆಯ ಸಂದರ್ಭ ಪರಮಾಣು ಶಕ್ತಿ ಅಭಿವೃದ್ಧಿಯ ವಿಷಯದಲ್ಲಿ ಇರಾನ್ ಅಂತರಾಷ್ಟ್ರೀಯ ನಿಯಮ ಉಲ್ಲಂಘಿಸಿರುವುದನ್ನು ನಾವು ಪ್ರಸ್ತಾವಿಸಿದ್ದೇವೆ. ಮಾತುಕತೆಗಳು ಇನ್ನೂ ವಿಶ್ಲೇಷಣಾತ್ಮಕ ಹಂತದಲ್ಲಿದೆ. ಉಭಯ ದೇಶಗಳ ನಡುವಿನ ಬಗೆಹರಿಯದ ವಿಷಯಗಳ ಬಗ್ಗೆ ಗಮನ ಹರಿಸಲು ಅವರು ಆಧಾರ ಒದಗಿಸಿದರೆ ನಾವು ಅದನ್ನು ಅರಿತುಕೊಳ್ಳಲು ಶ್ರಮಿಸುತ್ತೇವೆ ಎಂದು ಯುವರಾಜ ಫೈಸಲ್ ಬಿನ್ ಫರ್ಹಾನ್ ರಿಯಾದ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ನ ವಿದೇಶ ವ್ಯವಹಾರಗಳ ಉನ್ನತ ಪ್ರತಿನಿಧಿ ಜೋಸೆಫ್ ಬೊರೆಲ್ ಈ ಸಂದರ್ಭ ಉಪಸ್ಥಿತರಿದ್ದರು.

ಯೆಮನ್ನಲ್ಲಿನ ಬಿಕ್ಕಟ್ಟಿನ ಬಗ್ಗೆ ಫರ್ಹಾನ್ ಮತ್ತು ಬೊರೆಲ್ ಚರ್ಚೆ ನಡೆಸಿದ್ದು, ಯೆಮೆನ್ನ ಹೌದಿ ಬಂಡುಗೋರರಿಗೆ ಇರಾನ್ ನೀಡುತ್ತಿರುವ ಬೆಂಬಲ ಮತ್ತು ಹೌದಿ ಬಂಡುಗೋರರು ಸೌದಿ ಅರೆಬಿಯಾದ ಜನವಸತಿ ಪ್ರದೇಶ ಮತ್ತು ಇಂಧನ ಮೂಲಸೌಕರ್ಯ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದ್ರೋಣ್ ದಾಳಿಯ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಯೆಮೆನ್ನಲ್ಲಿ ಭೀಕರ ದುರಂತ ಪರಿಸ್ಥಿತಿಯಿದ್ದು ಹೌದಿಗಳು ಸೌದಿ ಅರೆಬಿಯಾದ ಮೇಲೆ ನಡೆಸುತ್ತಿರುವ ದಾಳಿ ಖಂಡನೀಯ ಎಂದು ಬೊರೆಲ್ ಹೇಳಿದ್ದು, ಯೆಮನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ರೂಪಿಸುವ ಉಪಕ್ರಮವನ್ನು ಯುರೋಪಿಯನ್ ಯೂನಿಯನ್ ಬೆಂಬಲಿಸಲಿದೆ. ಯೆಮನ್ನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಮತ್ತು ತನ್ನ ಪ್ರದೇಶದ ಭದ್ರತೆಗೆ ಸೌದಿ ಅರೆಬಿಯಾ ಶ್ಲಾಘನಿೀಯ ಕ್ರಮ ಕೈಗೊಂಡಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News