ಶಹೀನ್ ಚಂಡಮಾರುತ: ಒಮನ್ ನಲ್ಲಿ ಮತ್ತೆ 7 ಮಂದಿ ಮೃತ್ಯು
Update: 2021-10-04 16:06 GMT
ದುಬೈ, ಅ.4: ಒಮನ್ ಗೆ ರವಿವಾರ ಅಪ್ಪಳಿಸಿರುವ ಶಹೀನ್ ಚಂಡಮಾರುತದ ಅಬ್ಬರ ಸೋಮವಾರವೂ ಮುಂದುವರಿದಿದ್ದು ಭಾರೀ ಗಾಳಿಯ ಜೊತೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿವೆ. ಚಂಡಮಾರುತದಿಂದ ನದಿನೀರು ಉಕ್ಕೇರಿ ಹರಿದಿದ್ದು ಚಂಡಮಾರುತದಿಂದ ಸೋಮವಾರ ಮತ್ತೆ 7 ಜನ ಸಾವನ್ನಪ್ಪಿದ್ದಾರೆ ಎಂದು ಒಮನ್ ನ ರಾಷ್ಟ್ರೀಯ ತುರ್ತು ನೆರವು ಸಮಿತಿ ಟ್ವೀಟ್ ಮಾಡಿದೆ. ಗಂಟೆಗೆ 120 ಕಿ.ಮೀ ವೇಗದ ಗಾಳಿಯೊಂದಿಗೆ ಅಪ್ಪಳಿಸಿದ ಚಂಡಮಾರುತದಿಂದ ಸಮುದ್ರದಲ್ಲಿ 12 ಮೀಟರ್ ಎತ್ತರದ ಅಲೆಗಳು ಎದ್ದವು. ಚಂಡಮಾರುತದಿಂದ ಉಂಟಾದ ನೆರೆನೀರಿನಲ್ಲಿ ಸಿಕ್ಕಿಬಿದ್ದಿದ್ದ 8 ಮಂದಿಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಒಮನ್ ನ್ಯೂಸ್ ಏಜೆನ್ಸಿ(ಒಎನ್ಎ) ವರದಿ ಮಾಡಿದೆ.
ಆಗ್ನೇಯ ಇರಾನ್ ನ ಕಡಲತೀರದಲ್ಲೂ ಶಾಹೀನ್ ಚಂಡಮಾರುತ ಪ್ರಭಾವ ಬೀರಿದ್ದು ಕನಿಷ್ಟ 6 ಮಂದಿ ಮೃತರಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.