ಕೋವಿಡ್ ವಿರುದ್ಧ ಗೆಲುವು: ಯುಎಇ ಘೋಷಣೆ

Update: 2021-10-08 17:27 GMT

ಅಬುದಾಭಿ,ಅ.6: ಈ ವರ್ಷದ ಬೇಸಿಗೆಯಿಂದೀಚೆಗೆ ಯುಎಇನಲ್ಲಿ ಬುಧವಾರ ಅತ್ಯಂತ ಕನಿಷ್ಠ ಸಂಖ್ಯೆಯ ಕೊರೋನ ಪ್ರಕರಣ ವರದಿಯಾಗಿದ್ದು, ಕೋವಿಡ್ ಸಾಂಕ್ರಾಮಿಕದ ವಿರುದ್ಧ ಗೆಲುವು ಸಾಧಿಸಿರುವುದಾಗಿ ಅಲ್ಲಿನ ಆಡಳಿತ ಬುಧವಾರ ಘೋಷಿಸಿದೆ.


‘‘ ನಮ್ಮೆಲ್ಲರ ಬದುಕುಗಳು ಸಹಜತೆಯತ್ತ ಮರಳುತ್ತಿದೆಯೆಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ’’ ಎಂದು ಅಬುದಾಭಿಯ ಯುವರಾಜ ಮುಹಮ್ಮದ್ ಬಿನ್ ಝಾಯೆದ್ ಅವರು ಅಧಿಕೃತ ಸುದ್ದಿಸಂಸ್ಥೆ ಡಬ್ಲುಎಎಂ ಸುದ್ದಿ ಏಜೆನ್ಸಿ ಪ್ರಸಾರ ಮಾಡಿರುವ ವಿಡಿಯೋ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ನಾವು ಕೆಲಸ ಮಾಡುವ ರೀತಿಯಲ್ಲಿ, ನಮ್ಮ ಕುಟುಂಬದ ಸದಸ್ಯರ ಅಧ್ಯಯನಗಳಲ್ಲಿ ಅಥವಾ ನಮ್ಮ ವೈಯಕ್ತಿಕ ಬದುಕಿನಲ್ಲ ಕೆಲವೊಂದು ಬದಲಾವಣೆಗಳಾಗಿವೆ. ಆದರೆ ಪ್ರತಿಯೊಂದಕ್ಕೂ ನಾವು ದೇವರಿಗೆ ಕೃತಜ್ಞತೆ ಹೇಳುತ್ತೇವೆ’’ ಎಂದವರು ತಿಳಿಸಿದ್ದಾರೆ.


‘‘ ಅನುಭವದೊದಿಗೆ ಉತ್ತಮ ಆರೋಗ್ಯಪಾಲನೆಯ ಮೂಲಕ ಸುರಕ್ಷಿತವಾಗಿ ಈ ಬಿಕ್ಕಟ್ಟನ್ನು ಜಯಿಸಿರುವುದಕ್ಕಾಗಿಯೂ ನಾವು ದೇವರಿಗೆ ಕೃತಜ್ಞತೆ ಅರ್ಪಿಸುತ್ತೇವೆ. ಇದರಿಂದಾಗಿ ನಾವು ಭಾರೀ ಬೆಲೆಯನ್ನು ತೆತ್ತಿದ್ದೇವೆಯಾದರೂ, ನಾವು ಬಹಳಷ್ಟನ್ನು ಕಲಿತಿದ್ದೇವೆ ಎಂದು ಮುಹಮ್ಮದ್ ಬಿನ್ ಝಾಯೆದ್ ತಿಳಿಸಿದರು.


ಯುಎಇನ ಏಳು ಏಮರೇಟ್ಗಳಲ್ಲಿ ಈ ತಿಂಗಳು ಒಟ್ಟು 200ಕ್ಕೂ ಕಡಿಮೆ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದೀಚೆಗೆ ಅತ್ಯಂತ ಕನಿಷ್ಠವಾದುದಾಗಿದೆ.


ಯುಎಇನಲ್ಲಿ ಇತ್ತೀಚಿನ ದಿನಗಳಲ್ಲಿ ಜನಜೀವನ ಬಹುತೇಕವಾಗಿ ಸಹಜತೆಯೆಡೆಗೆ ಮರಳಿದೆ. ಆದರೆ ಮಾಸ್ಕ್ ಧಾರಣೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆಯ ಕುರಿತಾದ ತನ್ನ ಕಟ್ಟುನಿಟ್ಟಿನ ನಿಯಮಗಳನ್ನು ಮುಂದುವರಿಸಿದೆ.


ಒಂದು ವರ್ಷದ ವಿಳಂಬದ ಬಳಿಕ ದುಬೈನಲ್ಲಿ ಅಕ್ಟೋಬರ್ 1ರಿಂದ ದುಬೈ ಎಕ್ಸ್ಪೋ ಆರಂಭಗೊಂಡಿದೆ. ಜಗತ್ತಿನಾದ್ಯಂತದ ಲಕ್ಷಾಂತರ ಜನರು ದುಬೈ ಎಕ್ಸ್ಪೋ ಜಗತ್ತಿನಾದ್ಯಂತದ ಲಕ್ಷಾಂತರ ಜನರನ್ನು ಸೆಳೆಯಲಿದ್ದು, ಕೊರೋನ ಸೋಂಕಿನ ಹಾವಳಿಯಿಂದ ಬಾಧಿತವಾದ ಯುಎಇನ ಅರ್ಥಿಕತೆಗೆ ಉತ್ತೇಜನ ದೊರೆಯಲಿದೆಯೆಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News