ಆರೋಪಗಳ ಆಧಾರದಲ್ಲಿ ಬಂಧನ ಅಸಾಧ್ಯ ಎಂದ ಯುಪಿ ಸಿಎಂ ಆದಿತ್ಯನಾಥ್

Update: 2021-10-09 04:21 GMT
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (Source: PTI)

ಗೋರಖ್‌ಪುರ, ಅ.9: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ; "ಆದರೆ ಪುರಾವೆ ಆಧಾರದಲ್ಲಿ ಬಂಧಿಸಲಾಗುತ್ತದೆಯೇ ವಿನಃ ಕೇವಲ ಆರೋಪಗಳ ಆಧಾರಗಳಲ್ಲಿ ಅಲ್ಲ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ.

ಟಿವಿ ವಾಹಿನಿಯೊಂದು ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, "ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡುತ್ತಿರುವ ವಿರೋಧ ಪಕ್ಷಗಳ ಮುಖಂಡರು ಕೇವಲ ಬಾಯಿಮಾತಿನ ಅನುಕಂಪ ಪ್ರದರ್ಶಿಸುತ್ತಿದ್ದಾರೆ. ಈ ಪೈಕಿ ಹಲವು ಮುಖಗಳು ಈ ಹಿಂಸಾಚಾರದ ಹಿಂದಿವೆ" ಎಂಬ ಗಂಭೀರ ಆರೋಪ ಮಾಡಿದರು.

"ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು. ಯಾವುದೇ ಪಕ್ಷಕ್ಕೆ ಸೇರಿದವರಾದರೂ ಅವರನ್ನು ಹೊರಗಿಡುವ ಪ್ರಶ್ನೆಯೇ ಇಲ್ಲ. ಆದಾಗ್ಯೂ ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ ನಾವು ಯಾರನ್ನೂ ಕೇವಲ ಆರೋಪದ ಆಧಾರದಲ್ಲಿ ಬಂಧಿಸುವಂತಿಲ್ಲ. ಲಿಖಿತ ದೂರು ಸಲ್ಲಿಕೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಕೇಂದ್ರ ಸಚಿವರ ಪುತ್ರ ಆಶೀಶ್ ಮಿಶ್ರಾನನ್ನು ಬಂಧಿಸಲಾಗುತ್ತದೆಯೇ ಮತ್ತು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಥೇಣಿ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.

"ಪ್ರತಿಯೊಂದೂ ಸ್ಪಷ್ಟವಾಗಿದೆ. ಯಾರಿಗೂ ಅನ್ಯಾಯ ಆಗಿಲ್ಲ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಆದರೆ ಒತ್ತಡಕ್ಕೆ ಮಣಿದು ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News