ಖತರ್ ನಲ್ಲಿ ಅಮೆರಿಕ-ತಾಲಿಬಾನ್ ಮಾತುಕತೆ
ದೋಹ, ಅ.9: ಅಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳನ್ನು ತೆರವುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ-ತಾಲಿಬಾನ್ ಮಧ್ಯೆ ಮಾತುಕತೆಗೆ ಖತರ್ನಲ್ಲಿ ವೇದಿಕೆ ಸಜ್ಜುಗೊಂಡಿದ್ದು ಶನಿವಾರ ಮತ್ತು ರವಿವಾರ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ವಿದೇಶೀಯರ ತೆರವು ಕಾರ್ಯಾಚರಣೆ ಹಾಗೂ ಆ ದೇಶದಲ್ಲಿ ಉಗ್ರವಾದಿಗಳ ಕೃತ್ಯಗಳ ನಿಯಂತ್ರಣ ಮಾತುಕತೆಯ ಪ್ರಮುಖ ವಿಷಯವಾಗಲಿದೆ. ಅಫ್ಘಾನಿಸ್ತಾನದ ಮುಖಂಡರಾಗಿ ತಾಲಿಬಾನ್ ಗೆ ಮಾನ್ಯತೆ ನೀಡುವ ವಿಷಯ ಮಾತುಕತೆಯ ಅಜೆಂಡಾದಲ್ಲಿಲ್ಲ, ಆದರೆ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವ್ಯವಹಾರಿಕ ಮಾತುಕತೆಯ ಮುಂದುವರಿದ ಭಾಗ ಇದಾಗಲಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರು ಶುಕ್ರವಾರ ಹೇಳಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನ್ಗಳ ನಿಯಂತ್ರಣಕ್ಕೆ ಬಂದಂದಿನಿಂದ ಅಲ್ಲಿನ ಖೊರಾಸನ್ ಪ್ರಾಂತದಲ್ಲಿ ಐಸಿಸ್ ಉಗ್ರರು ತಾಲಿಬಾನ್ ಪಡೆಯ ಮೇಲಷ್ಟೇ ಅಲ್ಲ, ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಸಮುದಾಯದವರ ಮೇಲೆ ಪದೇಪದೇ ದಾಳಿ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪ್ರಜೆಗಳ ಸಹಿತ ವಿದೇಶಿ ನಾಗರಿಕರು, ಅಫ್ಘಾನೀಯರು ಸುರಕ್ಷಿತವಾಗಿ ದೇಶದಿಂದ ಹೊರತೆರಳಲು ಅವಕಾಶ ಮಾಡಿಕೊಡುವುದು, ಮಹಿಳೆಯರು ಹಾಗೂ ಬಾಲಕಿಯರ ಸಹಿತ ಎಲ್ಲಾ ವ್ಯಕ್ತಿಗಳ ಹಕ್ಕನ್ನೂ ಗೌರವಿಸುವಂತೆ ತಾಲಿಬಾನ್ಗಳನ್ನು ಆಗ್ರಹಿಸುವುದು, ಎಲ್ಲಾ ವರ್ಗಗಳ ಪ್ರಾತಿನಿಧ್ಯ ಹೊಂದಿದ ಸರಕಾರ ರಚನೆ - ಈ ವಿಷಯಗಳಿಗೆ ಮಾತುಕತೆಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ.
ಈ ಹೇಳಿಕೆಯನ್ನು ದೃಢೀಕರಿಸಿರುವ ದೋಹದಲ್ಲಿನ ತಾಲಿಬಾನ್ ಪ್ರತಿನಿಧಿ ಸುಹೈಲ್ ಶಹೀನ್ ‘ಹೌದು, ಮಾತುಕತೆ ನಡೆಯಲಿದೆ. ದ್ವಿಪಕ್ಷೀಯ ಸಂಬಂಧ ಮತ್ತು ದೋಹ ಒಪ್ಪಂದ ಜಾರಿ ಕುರಿತ ಮಾತುಕತೆ ಇದಾಗಿದ್ದು ಕಳೆದ ವರ್ಷ ಅಮೆರಿಕದ ಜತೆ ಸಹಿ ಹಾಕಿರುವ ಶಾಂತಿ ಒಪ್ಪಂದದ ಮರುಪರಿಶೀಲನೆ ಸೇರಿದಂತೆ ಇತರ ಹಲು ವಿಷಯಗಳೂ ಇರಲಿವೆ’ ಎಂದಿದ್ದಾರೆ.