ಯುಎಇ: ಮುಂದಿನ 50 ವರ್ಷಕ್ಕೆ ಅನ್ವಯಿಸುವ 10 ಸೂತ್ರಗಳ ಅಂಗೀಕಾರದ ಬಗ್ಗೆ ಆದೇಶ ಜಾರಿ
ಅಬುಧಾಬಿ, ಅ.9: ಮುಂದಿನ 50 ವರ್ಷಕ್ಕೆ ಅನ್ವಯಿಸುವ 10 ಸೂತ್ರಗಳನ್ನು ಅಂಗೀಕರಿಸುವ ರಾಜಾಜ್ಞೆಯನ್ನು ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಜಾರಿಗೊಳಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಎಲ್ಲಾ ಸಚಿವರು, ಫೆಡರಲ್ ಮತ್ತು ಸ್ಥಳೀಯ ಸರಕಾರಿ ಪ್ರಾಧಿಕಾರಗಳು, ಮತ್ತು ದೇಶದ ಸಂಸ್ಥೆಗಳು ಈ ಸೂತ್ರಕ್ಕೆ ಬದ್ಧರಾಗಿರಬೇಕು ಮತ್ತು ತಮ್ಮ ಎಲ್ಲಾ ನಿರ್ದೇಶನ ಮತ್ತು ನಿರ್ಧಾರಗಳಲ್ಲಿ ಇವನ್ನು ಮಾರ್ಗಸೂಚಿಯಂತೆ ಬಳಸಬೇಕು ಹಾಗೂ ತಮ್ಮ ಯೋಜನೆ ಮತ್ತು ಕಾರ್ಯತಂತ್ರದ ಮೂಲಕ ಈ ಸೂತ್ರಗಳ ಅನುಷ್ಟಾನಕ್ಕೆ ಕಾರ್ಯನಿರ್ವಹಿಸಬೇಕು ಎಂದು ‘ಡಿಕ್ರೀ (ರಾಜಾಜ್ಞೆ) ನಂ.15 ಫಾರ್ 2021’ರಲ್ಲಿ ಸೂಚಿಸಲಾಗಿದೆ.
ಈ ಸೂತ್ರಗಳನ್ನು ಯುಎಇ ಮುಖಂಡರು ಕಳೆದ ತಿಂಗಳು ಘೋಷಿಸಿದ್ದರು. ಮುಂದಿನ 50 ವರ್ಷಗಳಲ್ಲಿ ದೇಶದ ಆಡಳಿತ ನಿರ್ವಹಣೆಯ ಮೂಲಾಧಾರ ಎಂದು ಇದನ್ನು ವಿಶ್ಲೇಷಿಸಲಾಗಿದೆ. ಒಕ್ಕೂಟದ ಬಲವರ್ಧನೆ, ಸುಸ್ಥಿರ ಆರ್ಥಿಕತೆಯ ನಿರ್ಮಾಣ, ಸಮೃದ್ಧ ಸಮಾಜ ನಿರ್ಮಾಣಕ್ಕೆ ಸಾಧ್ಯವಿರುವ ಸಂಪನ್ಮೂಲಗಳ ಕ್ರೋಢೀಕರಣ, ರಾಷ್ಟ್ರೀಯ ಗುರಿಯನ್ನು ಸಾಧಿಸಲು ರಚನಾತ್ಮಕ ಪ್ರಾದೇಶಿಕ ಮತ್ತು ಜಾಗತಿಕ ಸಂಬಂಧಕ್ಕೆ ಪ್ರೋತ್ಸಾಹ ವಿಶ್ವದಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ನೆರವಾಗಲು ಮೂಲ ಮಾರ್ಗಸೂಚಿ ಇದಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.