500 ದಶಲಕ್ಷ ರೂ. ಬೆಲೆಬಾಳುವ ಮಾದಕದ್ರವ್ಯ ದಾಸ್ತಾನನ್ನು ವಶಪಡಿಸಿಕೊಂಡ ದುಬೈ ಪೊಲೀಸರು
ದುಬೈ,ಅ.9: 500 ಕೆ.ಜಿ.ಗೂ ಅಧಿಕ ಪ್ರಮಾಣದ ಕೊಕೈನ್ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡುವ ಅಂತಾರಾಷ್ಟ್ರೀಯ ಜಾಲವೊಂದರ ಪ್ರಯತ್ನವನ್ನು ದುಬೈ ಪೊಲೀಸರು ವಿಫಲಗೊಳಿಸಿದ್ದಾರೆ. ‘ಆಪರೇಷನ್ ಸ್ಕಾರ್ಪಿಯನ್’ ಎಂಬ ಸಂಕೇತನಾಮದೊಂದಿಗೆ ಕಾರ್ಯಾಚರಣೆ ನಡೆಸಿದ ದುಬೈ ಪೊಲೀಸರು ಕಾಳಸಂತೆಯಲ್ಲಿ 500 ದಶಲಕ್ಷ ರೂ. ಬೆಲೆಬಾಳುವ ಮಾದಕದ್ರವ್ಯ ದಾಸ್ತಾನನ್ನು ವಶಪಡಿಸಿಕೊಂಡಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಇಷ್ಟೊಂದು ಬೃಹತ್ ಪ್ರಮಾಣದ ಮಾದಕದ್ರವ್ಯ ದಾಸ್ತಾನನ್ನು ವಶಪಡಿಸಿಕೊಂಡಿರುವುದು ಗಲ್ಫ್ ಪ್ರಾಂತದಲ್ಲಿ ಇದೇ ಮೊದಲು ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾದಕದ್ರವ್ಯ ಜಾಲದ ದಲ್ಲಾಳಿಯಾಗಿ ಕಾರ್ಯನಿರ್ವಹಿಸುತ್ತಿದ್ದನೆಂದು ಶಂಕಿಸಲಾದ ಮಧ್ಯಏಶ್ಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಪ್ರಮಾಣದ ಕೊಕೇನ್ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡುವ ಪ್ರಯತ್ನ ನಡೆಯುತ್ತಿದೆಯೆಂದು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದುಬೈ ಪೊಲೀಸರು ಶಂಕಿತನ ಮೇಲೆ ಸತತವಾಗಿ ಕಣ್ಗಾವಲಿರಿಸಿದ್ದರು. ‘‘ ಮಾದಕದ್ರವ್ಯ ಕಳ್ಳಸಾಗಣೆ ಬಗ್ಗೆ ದೊರೆತ ಮಾಹಿತಿಯನ್ನು ದೃಢಪಡಿಸಲು ತನಿಖಾ ತಂಡವೊಂದನ್ನು ತಕ್ಷಣವೇ ರಚಿಸಲಾಗಿತ್ತು. ಈ ತಂಡವು ಶಂಕಿತನು ನಿರೀಕ್ಷಿತ ಮಾದಕದ್ರವ್ಯದ ಸರಕನ್ನು ಪಡೆಯುವವರೆಗೂ ಆತನ ಮೇಲೆ ಕಣ್ಗಾವಲಿರಿಸಿತ್ತು ಎಂದು ಮೂಲಗಳು ತಿಳಿಸಿವೆ.
‘ಒಮ್ಮೆ ಅಕ್ರಮ ಸರಕು ಆಗಮಿಸುತ್ತಿದ್ದಂತೆಯೇ, ಶಂಕಿತನು ಅಕ್ರಮ ಮಾದಕದ್ರವ್ಯವವನ್ನು ಇನ್ನೊಂದು ಎಮಿರೇಟ್ಗೆ ಸಾಗಿಸಿದ್ದನು ಹಾಗೂ ಅದನ್ನು ಮಾರಾಟ ಮಾಡುವುದಕ್ಕಾಗಿ ಅದನ್ನು ಗೋದಾಮೊಂದರಲ್ಲಿ ಶೇಖರಿಸಿಟ್ಟಿದ್ದನು ಎಂದು ಬ್ರಿಗೇಡಿಯರ್ ಹರೇಬ್ ತಿಳಿಸಿದ್ದಾರೆ.