ಕಾನ್ಪುರ ಉದ್ಯಮಿ ಹತ್ಯೆ ಪ್ರಕರಣ: ಇನ್ನೂ ಇಬ್ಬರು ಪೊಲೀಸರ ಬಂಧನ

Update: 2021-10-12 17:55 GMT

 ಲಕ್ನೋ,ಅ.12: ಕಾನ್ಪುರದ ಉದ್ಯಮಿ ಮನೀಷ್ ಗುಪ್ತಾ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಇನ್ನೂ ಇಬ್ಬರು ಪೊಲೀಸರನ್ನು ಮಂಗಳವಾಗ ಗೋರಖ್‌ಪುರದಲ್ಲಿ ಬಂಧಿಸಲಾಗಿದೆ.

 ಸಬ್-ಇನ್ಸ್‌ಪೆಕ್ಟರ್ ರಾಹುಲ್ ದುಬೆ ಮತ್ತು ಕಾನ್‌ಸ್ಟೇಬಲ್ ಪ್ರಶಾಂತ ಕುಮಾರ ಅವರು ಗೋರಖ್‌ಪುರದ ನ್ಯಾಯಾಲಯದಲ್ಲಿ ಶರಣಾಗಲು ತೆರಳುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿಗಳಾದ ಜೆ.ಎನ್.ಸಿಂಗ್ ಮತ್ತು ಅಕ್ಷಯ ಕುಮಾರ ಅವರನ್ನು ರವಿವಾರ ಬಂಧಿಸಲಾಗಿತ್ತು.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಗುಪ್ತಾ (36)ಅವರನ್ನು ಕಳೆದ ತಿಂಗಳು ಗೋರಖ್‌ಪುರದ ಹೋಟೆಲ್‌ವೊಂದರಲ್ಲಿ ಪೊಲೀಸರು ಥಳಿಸಿದ್ದು,ಅವರ ಸಾವಿಗೆ ಕಾರಣವಾಗಿತ್ತು ಎನ್ನಲಾಗಿದೆ.

ಗುಪ್ತಾ ಹತ್ಯೆಯಲ್ಲಿ ಭಾಗಿಯಾಗಿದ್ದ ಆರು ಪೊಲೀಸರ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಿದ್ದ ಪೊಲೀಸರು ಶನಿವಾರ ಅದನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News