ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಐಎಸ್ಎಫ್ ವತಿಯಿಂದ ಕ್ವಿಝ್ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

Update: 2021-10-13 10:41 GMT

ರಿಯಾದ್: ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂಡಿಯನ್ ಸೋಶಿಯಲ್ ಫೋರಮ್  ರಿಯಾದ್ ಆಯೋಜಿಸಿದ್ದ ಆನ್‌ಲೈನ್ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ರಿಯಾದ್‌ನ ಅಲ್-ಮಾಸ್ ಸಭಾಂಗಣದಲ್ಲಿ ಸೋಮವಾರ ನಡೆಸಲಾಯಿತು.

ಕಾರ್ಯಕ್ರಮವನ್ನು ಇಂಡಿಯನ್ ಫೋರಮ್ ಫಾರ್ ಎಜುಕೇಶನ್’ನ ಅಧ್ಯಕ್ಷರಾದ ಡಾ. ದಿಲ್ಷಾದ್ ಉದ್ಘಾಟಿಸಿ ಮಾತನ್ನಾಡಿದ ಅವರು ಪ್ರಸಕ್ತ ಸಂದರ್ಭದಲ್ಲಿ ಇಂಥ ಕಾರ್ಯಕ್ರಮವು  ಜನರನ್ನು ಓದಲು ಮತ್ತು ಕಲಿಯಲು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದರು.

ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಮೊಹಮ್ಮದ್ ಹಾರಿಸ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ  ಅಧ್ಯಕ್ಷೀಯ ಭಾಷಣದಲ್ಲಿ  ಕ್ವಿಝ್ ಸ್ಪರ್ಧೆಯ ಎಲ್ಲಾ ವಿಜೇತರನ್ನು ಅಭಿನಂದಿಸಿ, ಭಾರತದ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಕಲಿಯಲು ಇಂತಹ ಸ್ಪರ್ಧೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ  ಸ್ಪರ್ದಾಳುಗಳಿಗೆ ಹಾಗೂ ವಿಜೇತರಿಗೆ ಕರೆ ನೀಡಿದರು.

ಹಾಗೇ  ಭಾರತದ ಪ್ರಸ್ತುತ ಆಡಳಿತವು ನೈಸರ್ಗಿಕ ಸಂಪನ್ಮೂಲಗಳನ್ನು, ಜನರ ಸಂಪತ್ತನ್ನು ಲೂಟಿ ಮಾಡುತ್ತಿದೆ ಮತ್ತು  ತನ್ನ ಸರ್ವಾಧಿಕಾರ ಧೋರಣೆಯಿಂದ ಇಡೀ ರಾಷ್ಟ್ರವನ್ನು ಗುಲಾಮರನ್ನಾಗಿ ಮಾಡುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ಇಂದು ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಸದ್ದಿಲದ್ದೇ ಅಳಿಸಲಾಗುತ್ತಿದೆ. ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಣಿದ ವೀರರನ್ನು ನೆನೆಯಲು ಈ ಆನ್‌ಲೈನ್ ಕ್ವಿಝ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆನ್‌ಲೈನ್ ಕ್ವಿಝ್ ಸ್ಪರ್ಧೆಯು ಸೌದಿ ಅರೇಬಿಯಾದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗಿತ್ತು. ಎಲ್ಲಾ ಪ್ರದೇಶಗಳ ಅನಿವಾಸಿ ಭಾರತೀಯರು ಈ ಕ್ವಿಝ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ತಮಿಳ್ ಬಿಸಿನೆಸ್ ಫೋರಮ್'ನ ಕಾರ್ಯದರ್ಶಿಯಾದ ಮಲಿಕ್ ಇಬ್ರಾಹಿಂ, ಇಂಡಿಯಾ ಫ್ರೆಟರ್ನಿಟಿ ಫೋರಮ್  ರಿಯಾದ್ ಇದರ ಪ್ರಧಾನ ಕಾರ್ಯದರ್ಶಿ ರಂಝುದ್ದೀನ್ ಅಬ್ದುಲ್ ವಹಾಬ್, ಇಂಡಿಯನ್ ಸೋಶಿಯಲ್ ಫೋರಮ್, ಕೇರಳ ರಾಜ್ಯ ಸಮಿತಿಯ ಅಧ್ಯಕ್ಷರಾದ   ಸೈದಲವಿ,  ಬಿಹಾರ್ ಫೌಂಡೇಶನ್ ಸದಸ್ಯರಾದ ಅಬ್ದುಲ್ ಗಫ್ಫಾರ್ ಬಿಹಾರ, ಬಸ್ರೂರು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ಹನೀಫ್ ಬಸ್ರೂರ್, ಇಂಡಿಯನ್ ಸೋಶಿಯಲ್ ಫೋರಮ್ ಉತ್ತರ ರಾಜ್ಯ ಸಮಿತಿಯ ಅಧ್ಯಕ್ಷರಾದ ಇಹ್ಸಾನ್ ಸಾಬ್,  ಸ್ಪರ್ಧೆಯ ವಿಜೇತರನ್ನು ಪ್ರೋತ್ಸಾಹಿಸಿ, ಇಂಡಿಯನ್ ಸೋಶಿಯಲ್ ಫೋರಮ್  ಸೌದಿ ಅರೇಬಿಯಾದಲ್ಲಿ ಭಾರತೀಯ ಸಮುದಾಯಕ್ಕಾಗಿ  ನಡೆಸುತ್ತಿರುವಂತಹ ಸಮಾಜ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.

ಸೌದಿ ಅರೇಬಿಯಾದ್ಯಂತ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ  ದ್ವಿತೀಯ ಮತ್ತು ತೃತೀಯ ಸ್ಥಾನ ವನ್ನು ರಿಯಾದ್ ಪ್ರದೇಶದ ಶಾಝಿಯ ಇಕ್ಬಾಲ್ ಬಿಹಾರ ಮತ್ತು ಅಫೀಫಾ ಇಕ್ಬಾಲ್ ಬಿಹಾರ ರವರು  ಕ್ರಮವಾಗಿ ಬಹುಮಾನಗನ್ನು ಗೆದ್ದುಕೊಂಡರು, ವಿಜೇತರಿಗೆ  ವೇದಿಕೆಯಲ್ಲಿ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.

ಪ್ರದೇಶವಾರು ವಿಜೇತರಲ್ಲಿ ರಿಯಾದ್ ಪ್ರದೇಶದಿಂದ ಪ್ರಥಮ ಬಹುಮಾನವನ್ನು ಮುಹಮ್ಮದ್ ನೌಫಲ್ ಕರ್ನಾಟಕ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಕ್ರಮವಾಗಿ ರಹ್ಮತ್ ಖತೀಜಾ ತಮಿಳುನಾಡು ಮತ್ತು ಅಹಮದ್ ಅನ್ವರ್ ಕರ್ನಾಟಕ ಪಡೆದುಕೊಂಡರು.

ಇಂಡಿಯನ್ ಸೋಶಿಯಲ್ ಫೋರಮ್  ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಪೂಂಜಾಲಕಟ್ಟೆ ಸ್ವಾಗತಿಸಿ, ಇಂಡಿಯನ್ ಸೋಶಿಯಲ್ ಫೋರಮ್  ಸೆಂಟ್ರಲ್ ಕಮಿಟಿ ಸದಸ್ಯ ಮೊಹಮ್ಮದ್ ಆತಿಂಗಳ್ ಧನ್ಯವಾದಗಳನ್ನು ಸಲ್ಲಿಸಿದರು. ಇಂಡಿಯನ್ ಸೋಶಿಯಲ್ ಫೋರಮ್  ತಮಿಳುನಾಡು ರಾಜ್ಯ ಸಮಿತಿ ಅಧ್ಯಕ್ಷ ಫತ್ರುದ್ದೀನ್ ಸಮಾರಂಭವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News