ಆರ್ಯನ್ ಖಾನ್ ಜತೆ ವೈರಲ್ ಸೆಲ್ಫಿಯಲ್ಲಿ ಕಾಣಿಸಿಕೊಂಡಿದ್ದ ಗೋಸಾವಿ ವಿರುದ್ಧ ಲುಕೌಟ್ ನೋಟಿಸ್

Update: 2021-10-14 05:52 GMT
Photo: Twitter/ndtv

ಪುಣೆ:  ಇತ್ತೀಚೆಗೆ ಕ್ರೂಸ್ ಹಡಗೊಂದರ ಮೇಲೆ ಎನ್‍ಸಿಬಿ ನಡೆಸಿದ ದಾಳಿಯ  ಸಂದರ್ಭದಲ್ಲಿ  ಬಂಧನಕ್ಕೀಡಾದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜತೆಗೆ ಸೆಲ್ಫಿ ಕ್ಲಿಕ್ಕಿಸಿ ಸುದ್ದಿಯಾಗಿದ್ದ ಹಾಗೂ ಘಟನೆಯ ಸ್ವತಂತ್ರ ಸಾಕ್ಷಿಯಾಗಿದ್ದ ಕೆ ಪಿ ಗೋಸಾವಿ ಎಂಬಾತನಿಗೆ ಪುಣೆ ಪೊಲೀಸರು  ಲುಕೌಟ್ ನೋಟಿಸ್ ಹೊರಡಿಸಿದ್ದಾರೆ.

ಈತ 2018ರಲ್ಲಿ ಪುಣೆಯಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಬೇಕಾಗಿದ್ದಾನೆಂದು ಹೇಳಲಾಗಿದ್ದು, ಈ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದೆಯಲ್ಲದೆ ಎಲ್ಲಾ ವಿಮಾಣ ನಿಲ್ದಾಣಗಳಿಗೂ ಮಾಹಿತಿ ನೀಡಲಾಗಿದ್ದು ಈತ ವಿದೇಶಕ್ಕೆ ಹಾರದಂತೆ ತಡೆಯುವುದೇ ಪೊಲೀಸರ ಉದ್ದೇಶವಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತಾಭ್ ಗುಪ್ತಾ ಹೇಳಿದ್ದಾರೆ.

ಕ್ರೂಸ್ ಹಡಗು ಮೇಲಿನ ದಾಳಿ ಹಾಗೂ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ ಇರುವ ಒಂಬತ್ತು ಸಾಕ್ಷಿಗಳಲ್ಲಿ ಈತ ಒಬ್ಬನಾಗಿದ್ದಾನೆ.

ಮಲೇಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಈತ ಪುಣೆ ಮೂಲದ ವ್ಯಕ್ತಿಯೊಬ್ಬರಿಗೆ ವಂಚಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಗೊಸಾಯಿಯಿಂದ ರೂ 3.09 ಲಕ್ಷ ವಂಚನೆಗೊಳಗಾಗಿದ್ದಾರೆನ್ನಲಾದ ಚಿನ್ಮಯ್ ದೇಶಮುಖ್ ಎಂಬವರು ದೂರು ದಾಖಲಿಸಿದ್ದರು. ಮಲೇಷ್ಯಾದಲ್ಲಿ ಹೋಟೆಲ್ ಒಂದರಲ್ಲಿ ಖಾಲಿ ಹುದ್ದೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗೋಸಾಯಿ ಪೋಸ್ಟ್ ಮಾಡಿದ್ದನ್ನು ನಂಬಿ ಚಿನ್ಮಯ್ ಆತನನ್ನು ಸಂಪರ್ಕಿಸಿದಾಗ ಆತ ಉದ್ಯೋಗ ಭರವಸೆ ನೀಡಿ ಕಂತುಗಳಲ್ಲಿ ರೂ 3.09 ಸಂಗ್ರಹಿಸಿದ್ದಾನೆ ಹಾಗೂ ನಂತರ ಯಾವುದೇ ಉದ್ಯೋಗ ನೀಡಿಲ್ಲ ಯಾ ಹಣ ವಾಪಸ್ ನೀಡಿಲ್ಲ ಎಂದು ಆರೋಪಿಸಿ ದೂರು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News