ಸಿಂಘು ಗಡಿ ಸಮೀಪ ಯುವಕನ ಹತ್ಯೆ ಪ್ರಕರಣ ಖಂಡಿಸಿದ ಸಂಯುಕ್ತ ಕಿಸಾನ್ ಮೋರ್ಚಾ

Update: 2021-10-15 12:39 GMT
Photo: Twitter

ಹೊಸದಿಲ್ಲಿ: ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಸಮೀಪ ಯುವಕನೊಬ್ಬ ಬರ್ಬರವಾಗಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿರುವ  ಘಟನೆಯ ನಂತರ ಹತ್ಯೆಯನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

"ಘಟನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಂಡಿಸುತ್ತದೆ, ಆದರೆ ಸಂಘಟನೆಗೂ ಈ ಹತ್ಯೆ ನಡೆಸಿದೆ ಎಂದು ಹೇಳಲಾದ ನಿಹಾಂಗ್ ಗುಂಪು ಹಾಗೂ ಹತ್ಯೆಗೀಡಾದ ಯುವಕನಿಗೂ ಯಾವುದೇ ಸಂಬಂಧವಿಲ್ಲ. ಪವಿತ್ರ ಗ್ರಂಥಕ್ಕೆ ಹಾನಿಗೊಳಿಸಿದ್ದಾನೆಂಬ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ. ಗ್ರಂಥಕ್ಕೆ ಹಾನಿಯೆಸಗಿರುವುದನ್ನು ಮೋರ್ಚಾ ಖಂಡಿಸುವುದಾದರೂ, ಅದರರ್ಥ ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳಬಹುದೆಂದಲ್ಲ" ಎಂದು ಹೇಳಿದೆ.

"ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು" ಎಂದು ಹೇಳಿದ ಮೋರ್ಚಾ, ತನ್ನ ಪ್ರತಿಭಟನೆ ಶಾಂತಿಯುತವಾಗಿದ್ದು ಯಾವುದೇ ರೀತಿಯ ಹಿಂಸೆಗೆ ತನ್ನ ವಿರೋಧವಿದೆ ಎಂದು ಹೇಳಿದೆ.

ಹತ್ಯೆಯನ್ನು ಖಂಡಿಸಿ ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಕೂಡ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ ಹಾಗೂ ರೈತ ಪ್ರತಿಭಟನೆ ಯಾವತ್ತೂ ಶಾಂತಿಯುತ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News