ಪ್ರವಾದಿ ಮುಹಮ್ಮದ್ (ಸ) ಕುರಿತು ಒಬ್ಬ ಸ್ವದೇಶಿ ಶತ್ರುವಿನ ಜೊತೆ ವಿದೇಶಿ ದೊರೆಯೊಬ್ಬನ ಐತಿಹಾಸಿಕ ಸಂಭಾಷಣೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಮೀಲಾದುನ್ನಬಿ ವಿಶೇಷ ಲೇಖನದ ಆಡಿಯೋ ಆಲಿಸಿ
ತಾನು ಪ್ರವಾದಿಯ ಕಟ್ಟಾ ವಿರೋಧಿಯಾಗಿದ್ದು ಅವರ ವಿರುದ್ಧ ಭೀಕರ ಷಡ್ಯಂತ್ರಗಳನ್ನು ನಡೆಸುತ್ತಿದ್ದ ದಿನಗಳಲ್ಲಿ ನಡೆದ ಬಹಳ ಐತಿಹಾಸಿಕ ಹಾಗೂ ಸ್ವಾರಸ್ಯಕರವಾದ ಘಟನೆಯನ್ನು ಅಬೂ ಸುಫ್ಯಾನ್ ತನ್ನ ಸಂಗಾತಿಗಳಿಗೆ ತಿಳಿಸಿದ್ದರು. ಮಕ್ಕಾ ಮೂಲದ ಹಲವು ವರ್ತಕರು ಪ್ರಸ್ತುತ ಘಟನೆಯ ವೇಳೆ ಹಾಜರಿದ್ದು ಅದನ್ನು ಸ್ವತಃ ವೀಕ್ಷಿಸಿ ಅದಕ್ಕೆ ಸಾಕ್ಷಿಗಳಾದ್ದರಿಂದ ಇತಿಹಾಸಕಾರರು ಮತ್ತು ಹದೀಸ್ ಸಂಗ್ರಹಕಾರರು ಈ ಕುರಿತು ಅಬೂ ಸುಫ್ಯಾನ್ ನೀಡಿರುವ ಹೇಳಿಕೆಯನ್ನು ನಂಬಲರ್ಹವೆಂದು ಪರಿಗಣಿಸಿ ಅದನ್ನು ತಮ್ಮ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.
ಕ್ರಿ.ಶ. 570ರಲ್ಲಿ ಮಕ್ಕಾದಲ್ಲಿ ಜನಿಸಿದ ಪ್ರವಾದಿ ಮುಹಮ್ಮದ್ (ಸ), ತಮ್ಮ ನಲ್ವತ್ತರ ಹರೆಯದಲ್ಲಿ (ಕ್ರಿ.ಶ. 610) ಭೂಮುಖದ ಪಾಲಿಗೆ ವಿಶ್ವದೊಡೆಯನ ಅಂತಿಮ ದೂತರಾಗಿ ನಿಯುಕ್ತರಾದರು. ಮೊದಲ ಒಂದೆರಡು ವರ್ಷ ಅವರು ಮೌನವಾಗಿ ಹಾಗೂ ಬಹಳ ಸೀಮಿತವಾಗಿ ಕೇವಲ ತಮ್ಮ ಆಪ್ತರ ವಲಯದಲ್ಲಿ ಸತ್ಯಪ್ರಸಾರ ಮತ್ತು ಚಾರಿತ್ರ್ಯ ನಿರ್ಮಾಣದ ಚಟುವಟಿಕೆ ಆರಂಭಿಸಿದರು. ಈ ಹಂತದಲ್ಲಿ ಅವರ ವಿರುದ್ಧ ವದಂತಿಗಳ ಸಮರವೊಂದು ಆರಂಭವಾಗಿತ್ತು. ಹೊಸ ಧರ್ಮ ತಂದಿದ್ದಾರೆ, ಎಲ್ಲ ಸಂಪ್ರದಾಯಗಳ ಮತ್ತು ಸಾಂಪ್ರದಾಯಿಕ ದೇವ-ದೇವತೆಗಳ ವಿರುದ್ಧ ಬಂಡಾಯ ಸಾರಿದ್ದಾರೆ, ವಿಗ್ರಹಾರಾಧನೆಯನ್ನು ವಿರೋಧಿಸುತ್ತಾರೆ, ಅವರ ಬಳಿ ಮಾಂತ್ರಿಕ ಶಕ್ತಿ ಇದೆ, ವಿಶೇಷ ಕಾವ್ಯ ಪ್ರತಿಭೆ ಇದೆ, ಕೇಳುಗರನ್ನು ಮರುಳಾಗಿಸಿ ಬಿಡುವಂತಹ ವಚನಗಳನ್ನು ಓದುತ್ತಾರೆ, ಅವು ದಿವ್ಯವಾಚನಗಳೆಂದು ಹೇಳಿಕೊಳ್ಳುತ್ತಾರೆ, ನಮ್ಮ ಎಲ್ಲ ಪರಂಪರಾಗತ ಮೌಲ್ಯಗಳನ್ನು ಮತ್ತು ನಮ್ಮ ಬುಡಕಟ್ಟು ವ್ಯವಸ್ಥೆಯನ್ನು ಬುಡಮೇಲು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ, ಕುಲೀನರು ಮತ್ತು ಗುಲಾಮರೆಲ್ಲ ಸಮಾನರೆಂಬ ಹುಚ್ಚು ಶಿಕ್ಷಣ ನೀಡತೊಡಗಿದ್ದಾರೆ ಇತ್ಯಾದಿ ಹತ್ತು ಹಲವು ವದಂತಿಗಳು ಮೌನವಾಗಿ ಹಬ್ಬ ತೊಡಗಿದವು. ಪ್ರವಾದಿಯ ಸಂದೇಶ ಹೆಚ್ಚಿನವರಿಗೆ ತಲುಪಿರಲಿಲ್ಲ. ಆದರೆ ವದಂತಿಗಳು ಮಾತ್ರ ನಾಲ್ಕೂ ದಿಕ್ಕಿನಲ್ಲಿ ಬಹುದೂರದವರೆಗೂ ಹಬ್ಬಿದ್ದವು. ನಲ್ವತ್ತು ವರ್ಷಗಳ ಮುಹಮ್ಮದ್ (ಸ)ರ ಜೀವನವನ್ನು ಕಂಡಿದ್ದ ಮತ್ತು ಅವರನ್ನು ತಮ್ಮ ಸಮಾಜದ ಅತ್ಯಂತ ಪ್ರಾಮಾಣಿಕ, ಸತ್ಯವಂತ ಹಾಗೂ ಸುಶೀಲ ವ್ಯಕ್ತಿಯಾಗಿ ಗುರುತಿಸಿ ಗೌರವಿಸುತ್ತಿದ್ದ ಮಕ್ಕಾದ ಜನರು ಈ ವದಂತಿಗಳಿಂದ ಗೊಂದಲಕ್ಕೀಡಾದರು.
ಕ್ರಿ.ಶ. 613ರಲ್ಲಿ ಪ್ರವಾದಿ ಮುಹಮ್ಮದ್ (ಸ) ಸಫಾ ಬೆಟ್ಟದ ಮೇಲೆ ನಿಂತು ಮಕ್ಕಾದವರನ್ನೆಲ್ಲ ಕರೆದು ಸೇರಿಸಿ, ಸತ್ಯ ಸಂದೇಶವನ್ನು ಅವರ ಮುಂದಿಟ್ಟರು. ಈ ರೀತಿ ಬಹಿರಂಗ ಸತ್ಯಪ್ರಸಾರದ ಪರ್ವ ಆರಂಭವಾಯಿತು. ಹಾಗೆಯೇ ಸತ್ಯವನ್ನು ಮತ್ತು ಸತ್ಯಪ್ರಿಯರನ್ನು ದಮನಿಸುವ ಚಟುವಟಿಕೆ ಕೂಡಾ ಆರಂಭವಾಯಿತು. ಸತ್ಯಪ್ರಸಾರದ ಚಟುವಟಿಕೆಯು ಬಿರುಸಾದಂತೆಲ್ಲಾ ಸತ್ಯದ ಸದ್ದಡಗಿಸುವ ಶ್ರಮಗಳು ಹೆಚ್ಚೆಚ್ಚು ಸಂಘಟಿತ ಹಾಗೂ ಹಿಂಸಾತ್ಮಕ ಸ್ವರೂಪ ತಾಳತೊಡಗಿತು. ಸತ್ಯಸ್ವೀಕಾರ ಮಾಡಿದವರನ್ನು, ನಿಂದಿಸುವ, ಮೂದಲಿಸುವ, ಬಹಿಷ್ಕರಿಸುವ ಮತ್ತು ಚಿತ್ರಹಿಂಸೆಗೆ ತುತ್ತಾಗಿಸುವ ಘಟನೆಗಳು ನಡೆಯತೊಡಗಿದವು. ಬಹಳ ಅಮಾನುಷ ರೀತಿಯಲ್ಲಿ ಕೆಲವರ ಹತ್ಯೆಯೂ ನಡೆಯಿತು. ಸತ್ಯಸ್ವೀಕಾರ ಮಾಡಿದವರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಕೆಲವರು ದೂರದ ಊರುಗಳಿಗೆ ಹೋಗಿ ಆಶ್ರಯ ಪಡೆದರು. ಸಾಕ್ಷಾತ್ ಪ್ರವಾದಿಯವರ ಹತ್ಯೆಗೆ ಸಂಚುಗಳು ನಡೆದವು. ಬೇರೆಲ್ಲ ವಿಷಯಗಳಲ್ಲಿ ಸದಾ ಪರಸ್ಪರ ಜಗಳಾಡುತ್ತಿದ್ದ ಹಲವು ಬುಡಕಟ್ಟುಗಳ ನಾಯಕರು, ಪ್ರವಾದಿ ಮುಹಮ್ಮದ್ (ಸ)ರ ಹತ್ಯೆಯ ಕಾರ್ಯಾಚರಣೆಯನ್ನು ಜಂಟಿಯಾಗಿ ನಡೆಸಲು ಪರಸ್ಪರ ಕೈಜೋಡಿಸಿದರು. ಇಂತಹ ಸನ್ನಿವೇಶದಲ್ಲಿ ಪ್ರವಾದಿ ಮತ್ತು ಮಕ್ಕಾದಲ್ಲಿ ಉಳಿದಿದ್ದ ಅವರ ಅನುಯಾಯಿಗಳು ಸುಮಾರು 500 ಕಿ.ಮೀ. ದೂರದ ಮದೀನಾ ನಗರಕ್ಕೆ ವಲಸೆ ಹೋದರು. ಅಲ್ಲಿನ ಸ್ಥಳೀಯರು ಪ್ರವಾದಿ ಮತ್ತವರ ಅನುಯಾಯಿಗಳನ್ನು ಹೃತ್ಪೂರ್ವಕ ಸ್ವಾಗತಿಸಿದರು. ಅವರಲ್ಲಿ ಹೆಚ್ಚಿನವರು ಪ್ರವಾದಿಯ ಅನುಯಾಯಿಗಳ ಸಾಲಿಗೆ ಸೇರಿಕೊಂಡರು. ಜೀವನದುದ್ದಕ್ಕೂ ಪ್ರವಾದಿಯ ಆಜ್ಞಾಪಾಲನೆ ಮಾಡುತ್ತೇವೆಂದು ಪಣ ತೊಟ್ಟರು. ಹೀಗೆ ಮದೀನಾದಲ್ಲಿ ಒಂದು ಹೊಸ ಆದರ್ಶ ಸಮಾಜ ಸ್ಥಾಪನೆಯ ಚಟುವಟಿಕೆ ಆರಂಭವಾಯಿತು.
ಮಕ್ಕಾದಲ್ಲಿ ಪ್ರವಾದಿವರ್ಯರ ವಿರೋಧಿಗಳು ನೂರಾರು ಸಂಖ್ಯೆಯಲ್ಲಿದ್ದರು. ಅವರಲ್ಲಿ ಒಬ್ಬೊಬ್ಬರ ವಿರೋಧವು ಒಂದೊಂದು ಭಿನ್ನ ಮಟ್ಟದಲ್ಲಿತ್ತು. ಆ ಪೈಕಿ ಪ್ರವಾದಿ ಮತ್ತವರ ಅನುಯಾಯಿಗಳ ವಿರುದ್ಧ ಅತ್ಯಧಿಕ ಷಡ್ಯಂತ್ರಗಳನ್ನು ರಚಿಸಿದ, ಅತ್ಯಧಿಕ ಕ್ರೌರ್ಯ ಮೆರೆದ ಮತ್ತು ಶತ್ರುತ್ವದ ಎಲ್ಲ ಮೇರೆಗಳನ್ನು ಕೂಡ ಮೀರಿದ ಮೂರು ಮಂದಿ ಯಾರೆಂದು ಕೇಳಿದರೆ, ಒಮ್ಮತದಿಂದ ಮೂಡಿ ಬರುವ ಮೂರು ಹೆಸರುಗಳಿವೆ. ಅಬೂ ಲಹಬ್, ಅಬೂ ಜಹ್ಲ್ ಮತ್ತು ಅಬೂ ಸುಫ್ಯಾನ್ - ಇವೇ ಆ ಮೂರು ಹೆಸರುಗಳು. ಇವರಲ್ಲಿ ಮೊದಲ ಇಬ್ಬರು, ಸತ್ಯ ಹಾಗೂ ಸತ್ಯನಿಷ್ಠರನ್ನು ಸೋಲಿಸಲು ತಮಗೆ ಮಾಡಲು ಸಾಧ್ಯವಿರುವ ಎಲ್ಲ ಕುಕೃತ್ಯಗಳನ್ನು ಮಾಡಿ ಕ್ರಿ.ಶ. 624ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದರು. ಮಕ್ಕಾದ ಶ್ರೀಮಂತ ವರ್ತಕರೂ ಪ್ರಭಾವಶಾಲಿ ನಾಯಕರೂ ಆಗಿದ್ದ ಅಬೂ ಸುಫ್ಯಾನ್ ಮಾತ್ರ ಕ್ರಿ.ಶ. 650ರ ತನಕ ಜೀವಿಸಿದ್ದರು. ಬಹುಕಾಲ ಆ ಉಳಿದಿಬ್ಬರ ಜೊತೆ ಸೇರಿ ಬಹಳ ಸಕ್ರಿಯವಾಗಿ ಸತ್ಯವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ಅಬೂ ಸುಫ್ಯಾನ್, ಅವರಿಬ್ಬರೂ ಮೃತರಾದ ಬಳಿಕ ಶತ್ರು ಪಾಳಯದ ಮುಂಚೂಣಿಯ ನಾಯಕರಾಗಿ ಬಿಟ್ಟರು. ಮುಸ್ಲಿಮರ ಧರ್ಮ ಮತ್ತು ಸಮಾಜದ ವಿರುದ್ಧ ಜನರಲ್ಲಿ ದ್ವೇಷ ಉಕ್ಕಿಸುವ ತಮ್ಮ ಚಟುವಟಿಕೆಯನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಿದರು. ಈ ಕಾರ್ಯದಲ್ಲಿ ಅವರ ಪತ್ನಿ ಹಿಂದ್ ಕೂಡಾ ಅವರ ಜೊತೆಗಿದ್ದರು. ಪ್ರವಾದಿವರ್ಯರು (ಸ) ಸತ್ಯಪ್ರಸಾರ ಆರಂಭಿಸಿದ್ದ ದಿನಗಳಲ್ಲೇ ಅಬೂ ಸುಫ್ಯಾನ್‌ರ ಪುತ್ರಿ ರಮ್ಲಾ ಪ್ರವಾದಿಯ ಅನುಯಾಯಿಯಾಗಿ ಬಿಟ್ಟಿದ್ದರು. ಇದರಿಂದಾಗಿ ಪ್ರವಾದಿ ಮತ್ತವರ ಧರ್ಮದ ವಿರುದ್ಧ ಅಬೂ ಸುಫ್ಯಾನ್ ಕುಟುಂಬಕ್ಕೆ ವಿಶೇಷ ಆಕ್ರೋಶವಿತ್ತು. ಮುಸ್ಲಿಮರ ವಿರುದ್ಧ ಬದ್ರ್ ಯುದ್ಧವನ್ನು ನಡೆಸಲು ಮಕ್ಕಾದವರನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಬೂ ಸುಫ್ಯಾನ್ ಬದ್ರ್, ಉಹುದ್ ಮತ್ತು ಕಂದಕ್ ಸಹಿತ ಮುಸ್ಲಿಮರ ವಿರುದ್ಧ ನಡೆದ ಹಲವು ಸೈನಿಕ ಆಕ್ರಮಣ ಮತ್ತು ಕಾರ್ಯಾಚರಣೆಗಳಲ್ಲಿ ಶತ್ರು ಪಾಳಯದ ದಂಡನಾಯಕರಾಗಿದ್ದರು.
ತಾನು ಪ್ರವಾದಿಯ ಕಟ್ಟಾ ವಿರೋಧಿಯಾಗಿದ್ದು ಅವರ ವಿರುದ್ಧ ಭೀಕರ ಷಡ್ಯಂತ್ರಗಳನ್ನು ನಡೆಸುತ್ತಿದ್ದ ದಿನಗಳಲ್ಲಿ ನಡೆದ ಬಹಳ ಐತಿಹಾಸಿಕ ಹಾಗೂ ಸ್ವಾರಸ್ಯಕರವಾದ ಘಟನೆಯನ್ನು ಅಬೂ ಸುಫ್ಯಾನ್ ತನ್ನ ಸಂಗಾತಿಗಳಿಗೆ ತಿಳಿಸಿದ್ದರು. ಮಕ್ಕಾ ಮೂಲದ ಹಲವು ವರ್ತಕರು ಪ್ರಸ್ತುತ ಘಟನೆಯ ವೇಳೆ ಹಾಜರಿದ್ದು ಅದನ್ನು ಸ್ವತಃ ವೀಕ್ಷಿಸಿ ಅದಕ್ಕೆ ಸಾಕ್ಷಿಗಳಾದ್ದರಿಂದ ಇತಿಹಾಸಕಾರರು ಮತ್ತು ಹದೀಸ್ ಸಂಗ್ರಹಕಾರರು ಈ ಕುರಿತು ಅಬೂ ಸುಫ್ಯಾನ್ ನೀಡಿರುವ ಹೇಳಿಕೆಯನ್ನು ನಂಬಲರ್ಹವೆಂದು ಪರಿಗಣಿಸಿ ಅದನ್ನು ತಮ್ಮ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.
628ರಲ್ಲಿ ಪ್ರವಾದಿ ಮುಹಮ್ಮದ್ (ಸ) ಮದೀನಾದ ತಮ್ಮ ಸಂಗಾತಿಗಳ ಜೊತೆ, ಉಮ್ರಾ ಯಾತ್ರೆಗಾಗಿ ಮಕ್ಕಾದೆಡೆಗೆ ಹೊರಟಾಗ ಮಕ್ಕಾದಿಂದ ಸುಮಾರು 15 ಕಿ.ಮೀ. ದೂರ ಹುದೈಬಿಯಾ ಎಂಬಲ್ಲಿ ಮಕ್ಕಾದ ಸೇನಾ ತುಕಡಿಯೊಂದು ಅವರನ್ನು ತಡೆಯಿತು. ರಕ್ತಪಾತ ತಪ್ಪಿಸಲು ಪ್ರವಾದಿವರ್ಯರು ಮಕ್ಕಾದ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ ಬಳಿಕ ಒಂದು ಶಾಂತಿ ಒಪ್ಪಂದ ನಡೆಯಿತು. ಪ್ರಸ್ತುತ ‘ಹುದೈಬಿಯಾ ಒಪ್ಪಂದ’ವನ್ನು ಮಕ್ಕಾ ಮತ್ತು ಮದೀನಾದವರ ನಡುವಣ ಯುದ್ಧ ವಿರಾಮದ ಒಪ್ಪಂದವೆಂದು ಪರಿಗಣಿಸಲಾಗುತ್ತದೆ. ಈ ಒಪ್ಪಂದದ ಷರತ್ತುಗಳ ಪ್ರಕಾರ ಉಮ್ರಾ ಮಾಡದೆ ಮದೀನಾಗೆ ಮರಳಿದ ಪ್ರವಾದಿವರ್ಯರು (ಸ) ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸತ್ಯಪ್ರಸಾರ ನಡೆಸುವ ಚಟುವಟಿಕೆಯನ್ನು ಆರಂಭಿಸಿದರು. ವಿವಿಧ ದೇಶಗಳಿಗೆ ತಮ್ಮ ರಾಯಭಾರಿಗಳ ತಂಡವನ್ನು ಕಳಿಸಿ ಅಲ್ಲಿನ ಆಡಳಿತಗಾರರಿಗೆ ಸಂಕ್ಷಿಪ್ತವಾಗಿ ಸತ್ಯವನ್ನು ಪರಿಚಯಿಸಿ ಸತ್ಯವನ್ನು ಸ್ವೀಕರಿಸುವಂತೆ ಕರೆ ನೀಡುವ ಪತ್ರಗಳನ್ನು ತಲುಪಿಸತೊಡಗಿದರು. ಅತ್ತ ಇದೇ ಕಾಲಾವಧಿಯಲ್ಲಿ ಅಬೂಸುಫ್ಯಾನ್ ವ್ಯಾಪಾರ ನಿಮಿತ್ತ, ಕೆಲವು ವರ್ತಕರ ತಂಡದೊಂದಿಗೆ ಫೆಲೆಸ್ತೀನ್ ಮತ್ತು ಸಿರಿಯಾದ ಕಡೆ ಹೊರಟಿದ್ದರು. ಅವರು ಅಲ್ಲಿಗೆ ತಲುಪುವ ಹೊತ್ತಿಗಾಗಲೇ, ಪ್ರವಾದಿವರ್ಯರು ಬರೆದ ಪತ್ರವು ಬೈಝನ್ ಟಾಯ್ನ್ (Byzantine) ಸಾಮ್ರಾಜ್ಯದ ದೊರೆ ಹಿರಾಕ್ಲಿಯಸ್ (Heraclius)ಗೆ ತಲುಪಿತ್ತು. ಪತ್ರದಲ್ಲಿನ ಸಂದೇಶ ಹೀಗಿತ್ತು;
‘‘ಅಲ್ಲಾಹನ ಹೆಸರಿಂದ - ಅವನು ತುಂಬಾ ದಯಾಳು, ಕರುಣಾಮಯಿ. ಅಲ್ಲಾಹನ ದಾಸ ಮತ್ತು ಅವನ ದೂತರಾದ ಮುಹಮ್ಮದ್ ಬಿನ್ ಅಬ್ದುಲ್ಲಾಹ್ ಅವರ ವತಿಯಿಂದ, ಸಿರಿಯಾದ ಪ್ರಮುಖ ಹಿರಾಕ್ಲಿಯಸ್‌ರಿಗೆ. ಸತ್ಯವನ್ನು ಅನುಸರಿಸುವವರಿಗೆ ಶಾಂತಿ. ನಾನು ನಿಮಗೆ ಇಸ್ಲಾಮಿನ ಆಮಂತ್ರಣ ನೀಡುತ್ತಿದ್ದೇನೆ. ನೀವು ಮುಸ್ಲಿಮರಾಗಿರಿ (ಅಲ್ಲಾಹನಿಗೆ ಶರಣಾಗಿರಿ). ನೀವು ಸುರಕ್ಷಿತರಾಗುವಿರಿ. ಅಲ್ಲಾಹನು ನಿಮಗೆ ದ್ವಿಗುಣ ಪ್ರತಿಫಲ ನೀಡುವನು. ಒಂದು ವೇಳೆ ನೀವು ತಿರಸ್ಕರಿಸಿದರೆ, ಜನಸಾಮಾನ್ಯರು ದಾರಿ ತಪ್ಪಿದ್ದರ ಹೊಣೆ ಕೂಡಾ ನಿಮ್ಮ ಮೇಲಿರುವುದು. ‘‘ಗ್ರಂಥದವರೇ, ನಮ್ಮ ಮತ್ತು ನಿಮ್ಮ ಮಧ್ಯೆ ಸಮಾನವಾಗಿರುವ ಅಂಶದೆಡೆಗೆ ಬನ್ನಿರಿ. ನಾವು ಅಲ್ಲಾಹನ ಹೊರತು ಬೇರಾರನ್ನೂ ಪೂಜಿಸದಿರೋಣ ಮತ್ತು ಯಾರನ್ನೂ ಅವನ ಜೊತೆ ಪಾಲುಗೊಳಿಸದಿರೋಣ. ಹಾಗೆಯೇ ನಮ್ಮಲ್ಲಿ ಯಾರೂ ಅಲ್ಲಾಹನ ಹೊರತು ಬೇರೆ ಯಾರನ್ನೂ ದೇವರುಗಳಾಗಿಸಬಾರದು- ಎಂದು ಹೇಳಿರಿ. ಇಷ್ಟಾಗಿಯೂ ಅವರು ಹಠಮಾರಿತನವನ್ನೇ ತೋರಿದರೆ - ನೀವು ಸಾಕ್ಷಿಗಳಾಗಿರಿ. ನಾವಂತೂ ಖಂಡಿತ ಮುಸ್ಲಿಮರಾಗಿರುವೆವು (ಅಲ್ಲಾಹನಿಗೆ ಶರಣಾಗಿರುವೆವು) - ಎಂದು ಹೇಳಿರಿ.’’ (ಕುರ್‌ಆನ್ 3:64). ಮೊಹರು - ಮುಹಮ್ಮದ್, ಅಲ್ಲಾಹನ ದೂತರು.’’
ಈ ಪತ್ರವನ್ನು ಓದಿ ತುಂಬಾ ಪ್ರಭಾವಿತನಾದ ದೊರೆ ಹಿರಾಕ್ಲಿಯಸ್‌ನೊಳಗೆ, ಪ್ರವಾದಿ ಮತ್ತು ಅವರ ಸಂದೇಶದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಕುತೂಹಲ ಮೂಡಿತು. ಅವನು ತನ್ನ ಆಸ್ಥಾನದಲ್ಲಿದ್ದ ಮತ್ತು ತನ್ನ ನಾಡಿನಲ್ಲಿ ತನಗೆ ವಿಶ್ವಾಸವಿದ್ದ ಹಲವು ವಿದ್ವಾಂಸರ ಜೊತೆ ಈ ಕುರಿತು ಚರ್ಚಿಸಿದನು. ಆ ವೇಳೆ ಅವನಿಗೆ, ಮಕ್ಕಾದಿಂದ ಬಂದಿರುವ ವರ್ತಕರ ತಂಡವೊಂದು ಫೆಲೆಸ್ತೀನ್ ನಲ್ಲಿ ಶಿಬಿರ ಹೂಡಿರುವ ವಾರ್ತೆ ಸಿಕ್ಕಿತು. ಅವನು ತನ್ನ ಪ್ರತಿನಿಧಿಗಳನ್ನು ಕಳಿಸಿ ಆ ಯಾತ್ರಾತಂಡದವರನ್ನು ತನ್ನ ಅರಮನೆಗೆ ಕರೆಸಿಕೊಂಡನು. ಪ್ರವಾದಿ ಮತ್ತವರ ವಿರೋಧಿಗಳನ್ನೇ ಒಳಗೊಂಡಿದ್ದ ಅಬೂಸುಫ್ಯಾನ್ ನೇತೃತ್ವದ ತಂಡ ಅರಮನೆ ತಲುಪಿತು. ಅಲ್ಲಿ ರಾಜನ ದರಬಾರು ನಡೆಯುತ್ತಿತ್ತು. ಎಲ್ಲ ಪ್ರಮುಖ ನಾಯಕರು ಮತ್ತು ವಿದ್ವಾಂಸರು ದೊರೆಯ ಅಕ್ಕಪಕ್ಕದಲ್ಲಿದ್ದರು. ಈ ತಂಡವು ಅರಮನೆ ತಲುಪಿದಾಗ ದೊರೆಯು ಅವರನ್ನು ದರಬಾರಿಗೆ ಆಮಂತ್ರಿಸಿ, ಜೊತೆಗೆ ತನ್ನ ಅನುವಾದಕರನ್ನೂ ಕರೆಸಿಕೊಂಡನು. ಆ ಬಳಿಕ ಏನು ನಡೆಯಿತು ಎಂಬುದನ್ನು ನೇರವಾಗಿ ಅಬೂ ಸುಫ್ಯಾನ್‌ರ ಮಾತುಗಳಲ್ಲಿ ಕೇಳೋಣ:
‘‘ನಿಮ್ಮ ಪೈಕಿ, ತಾನು ದೇವದೂತನೆಂದು ಹೇಳಿಕೊಳ್ಳುತ್ತಿರುವ ಆ ವ್ಯಕ್ತಿಯ (ಮುಹಮ್ಮದರ) ಅತ್ಯಂತ ನಿಕಟ ಬಂಧು ಯಾರು?’’ ಎಂದು ದೊರೆ ವಿಚಾರಿಸಿದ. ‘‘ನಾನು ಆ ವ್ಯಕ್ತಿಯ ಅತ್ಯಂತ ನಿಕಟ ಬಂಧು’’ ಎಂದು ನಾನು (ಅಬೂಸುಫ್ಯಾನ್) ಉತ್ತರಿಸಿದೆ.
ದೊರೆ: ಈ ವ್ಯಕ್ತಿಯನ್ನು ನನ್ನ ಸಮೀಪ ಕೂರಿಸಿರಿ. ಅವನ ಜೊತೆಗಿರುವ ಇತರರನ್ನೆಲ್ಲ ಅವನ ಹಿಂದೆ ಕೂರಿಸಿರಿ. ಅವರಿಗೆ ತಿಳಿಸಿ ಬಿಡಿ - ನಾನು ಇವರೊಡನೆ (ಅಬೂಸುಫ್ಯಾನ್‌ನೊಡನೆ) ಆ ವ್ಯಕ್ತಿಯ (ಮುಹಮ್ಮದರ) ಕುರಿತು ಕೆಲವು ವಿಚಾರಗಳನ್ನು ಕೇಳಲಿದ್ದೇನೆ. ಈತ ಏನಾದರೂ ಸುಳ್ಳು ಹೇಳಿದರೆ ನೀವು ಅದನ್ನು ನಿರಾಕರಿಸಬೇಕು. ಅಲ್ಲಾಹನಾಣೆ, ಆ ಜನರು ನನ್ನ ಸುಳ್ಳನ್ನು ಬಯಲಿಗೆಯಬಹುದು ಎಂಬ ಭಯ ಇಲ್ಲದೆ ಇದ್ದಿದ್ದರೆ ನಾನು (ಅಬೂಸುಫ್ಯಾನ್) ಖಂಡಿತವಾಗಿಯೂ ಪ್ರವಾದಿಯ ಕುರಿತು ಸುಳ್ಳು ಮಾಹಿತಿ ನೀಡುತ್ತಿದ್ದೆ.
ದೊರೆ: ನಿಮ್ಮ ನಡುವೆ, ಕುಲಗೋತ್ರದ ದೃಷ್ಟಿಯಿಂದ ಅವರ (ಮುಹಮ್ಮದರ) ಸ್ಥಾನಮಾನ ಹೇಗಿದೆ?
ಅಬೂ ಸುಫ್ಯಾನ್: ಅವರು ತುಂಬಾ ಉನ್ನತ ಮಟ್ಟದ ಪ್ರತಿಷ್ಠಿತ ಕುಲದವರು.
ದೊರೆ: ಈ ಹಿಂದೆ ನಿಮ್ಮಲ್ಲಿ ಯಾರಾದರೂ ಆ ವ್ಯಕ್ತಿಯಂತೆ, (ತಾನು ದೇವದೂತನೆಂದು) ಹೇಳಿಕೊಂಡದ್ದುಂಟೇ?
ಅಬೂ ಸುಫ್ಯಾನ್: ಇಲ್ಲ.
ದೊರೆ: ಆ ವ್ಯಕ್ತಿಯ ಪೂರ್ವಜರಲ್ಲಿ ಯಾರಾದರೂ ದೊರೆಗಳಾಗಿದ್ದರೇ?
ಅಬೂ ಸುಫ್ಯಾನ್: ಇಲ್ಲ.
ದೊರೆ : ಆ ವ್ಯಕ್ತಿಯ ಅನುಯಾಯಿಗಳು ಯಾರು? ಸಮಾಜದ ಬಲಿಷ್ಠರೇ? ಅಥವಾ ದುರ್ಬಲ ವರ್ಗದವರೇ?
ಅಬೂ ಸುಫ್ಯಾನ್: ದುರ್ಬಲ ವರ್ಗದವರು.
ದೊರೆ: ಆ ವ್ಯಕ್ತಿಯ ಸಂಗಾತಿಗಳ ಸಂಖ್ಯೆ ಹೆಚ್ಚುತ್ತಿದೆಯೇ? ಅಥವಾ ಕುಸಿಯುತ್ತಿದೆಯೇ?
ಅಬೂ ಸುಫ್ಯಾನ್: ಹೆಚ್ಚುತ್ತಲೇ ಇದೆ
ದೊರೆ: ಅವರ ಅನುಯಾಯಿಗಳಾದವರಲ್ಲಿ ಯಾರಾದರೂ ಆ ಬಳಿಕ ತಿರುಗಿ ಬೀಳುತ್ತಾರೆಯೇ?
ಅಬೂ ಸುಫ್ಯಾನ್: ಇಲ್ಲ.
ದೊರೆ: ಆ ವ್ಯಕ್ತಿ ತಾನು ದೇವದೂತನೆಂದು ಹೇಳಿಕೊಳ್ಳುವ ಮುನ್ನ ಎಂದಾದರೂ ಸುಳ್ಳು ಹೇಳಿದ್ದುಂಟೇ?
ಅಬೂ ಸುಫ್ಯಾನ್: ಇಲ್ಲ.
ದೊರೆ: ಆ ವ್ಯಕ್ತಿ ಎಂದಾದರೂ ವಚನ ಭಂಗ ಮಾಡಿದ್ದಿದೆಯೇ?
ಅಬೂ ಸುಫ್ಯಾನ್: ಇಲ್ಲ. ಸದ್ಯ ನಮ್ಮ ಹಾಗೂ ಆ ವ್ಯಕ್ತಿಯ ಮಧ್ಯೆ ಒಂದು ಸಂಧಾನ ಜಾರಿಯಲ್ಲಿದೆ. ಆತ, ಈ ವಿಷಯದಲ್ಲಿ ಏನು ಮಾಡುವನೆಂಬುದು (ಸಂಧಾನದ ಶರತ್ತುಗಳನ್ನು ಉಲ್ಲಂಘಿಸುವನೋ ಎಂಬುದು) ನಮಗೆ ತಿಳಿದಿಲ್ಲ.
(ಈ ಹಂತದಲ್ಲಿ ಅಬೂ ಸುಫ್ಯಾನ್ ಹೇಳುತ್ತಾರೆ - ಪ್ರಸ್ತುತ ಸಂಭಾಷಣೆಯಲ್ಲಿ ಈ ಒಂದು ಮಾತನ್ನು ಬಿಟ್ಟರೆ, ಪ್ರವಾದಿಯ ವಿರುದ್ಧ ಬೇರೇನನ್ನೂ ಹೇಳಲು ನನಗೆ ಸಾಧ್ಯವಾಗಲಿಲ್ಲ.)
ದೊರೆ: ನಿಮ್ಮ ಮತ್ತು ಆ ವ್ಯಕ್ತಿಯ ನಡುವೆ ಯುದ್ಧವೇನಾದರೂ ನಡೆದದ್ದುಂಟೇ?
ಅಬೂ ಸುಫ್ಯಾನ್: ಹೌದು
ದೊರೆ: ಆ ಯುದ್ಧಗಳ ಫಲಿತಾಂಶ ಹೇಗಿರುತ್ತದೆ?
ಅಬೂ ಸುಫ್ಯಾನ್: ಕೆಲವೊಮ್ಮೆ ಅವರು ಗೆಲ್ಲುತ್ತಾರೆ, ಕೆಲವೊಮ್ಮೆ ನಾವು ಗೆಲ್ಲುತ್ತೇವೆ.
ದೊರೆ: ಆ ವ್ಯಕ್ತಿ ನಿಮಗೆ ಏನನ್ನು ಉಪದೇಶಿಸುತ್ತಾರೆ?
ಅಬೂ ಸುಫ್ಯಾನ್: ಅಲ್ಲಾಹನೊಬ್ಬನನ್ನು ಮಾತ್ರ ಪೂಜಿಸಬೇಕು. ಬೇರೆ ಯಾರೂ (ದೇವತ್ವದಲ್ಲಿ) ಅವನ ಪಾಲುದಾರರಲ್ಲ. ಪೂರ್ವಜರ ಸಂಪ್ರದಾಯಗಳನ್ನು ಬಿಟ್ಟುಬಿಡಬೇಕು. ನಮಾಝ್ ಮಾಡಬೇಕು. ಸತ್ಯ ಹೇಳಬೇಕು. ಧರ್ಮನಿಷ್ಠರಾಗಿರಬೇಕು. ಬಂಧುಗಳ ಜೊತೆ ಸೌಜನ್ಯದೊಂದಿಗೆ ವರ್ತಿಸಬೇಕು ಎಂದು ಅವರು ಉಪದೇಶಿಸುತ್ತಾರೆ.
ಈ ಸಂಭಾಷಣೆಯ ಬಳಿಕ ದೊರೆಯು ತನ್ನ ಅನುವಾದಕನನ್ನು ಕರೆದು ಹೇಳಿದನು. ಅಬೂ ಸುಫ್ಯಾನ್‌ರೊಡನೆ ಹೀಗೆ ಹೇಳಿರಿ:
‘‘ನಾನು ನಿಮ್ಮಡನೆ, ಆತನ ಕುಲದ ಕುರಿತು ಕೇಳಿದೆ. ಆತ ನಮ್ಮಲ್ಲಿನ ಅತ್ಯುತ್ತಮ ಕುಲದವನೆಂದು ನೀವು ಹೇಳಿದಿರಿ. ದೇವದೂತರನ್ನು ಯಾವಾಗಲೂ ಅತ್ಯುತ್ತಮ ಕುಲದಿಂದ ಆರಿಸಲಾಗುತ್ತದೆ. ಈ ಹಿಂದೆ ನಿಮ್ಮ ಪೈಕಿ ಯಾರಾದರೂ ತಾನು ದೇವದೂತನೆಂದು ಹೇಳಿಕೊಂಡದ್ದುಂಟೇ? ಎಂದು ನಾನು ನಿಮ್ಮಲ್ಲಿ ಕೇಳಿದೆ. ಇಲ್ಲ ಎಂದು ನೀವು ಉತ್ತರಿಸಿದಿರಿ.
ಒಂದು ವೇಳೆ ನೀವು ಹೌದು ಎಂದು ಉತ್ತರಿಸಿದ್ದರೆ, ಆ ವ್ಯಕ್ತಿ ತನ್ನ ಹಿಂದಿನವರನ್ನು ಅನುಕರಿಸುತ್ತಿದ್ದಾರೆಂದು ನಾನು ಭಾವಿಸುತ್ತಿದ್ದೆ. ಆ ವ್ಯಕ್ತಿಯ ಪೂರ್ವಜರಲ್ಲಿ ಯಾರಾದರೂ ದೊರೆಗಳಾಗಿದ್ದರೆ ಎಂದು ನಾನು ನಿಮ್ಮಲ್ಲಿ ವಿಚಾರಿಸಿದೆ. ನೀವು, ಇಲ್ಲ ಎಂದಿರಿ. ಒಂದುವೇಳೆ ಅವರ ಪೂರ್ವಜರಲ್ಲಿ ಯಾರಾದರೂ ದೊರೆಗಳಾಗಿದ್ದರೆ, ಆ ವ್ಯಕ್ತಿ ತನ್ನ ಪೂರ್ವಜರಂತೆ ಅಧಿಕಾರ ಗಳಿಸಿ, ದೊರೆಯಾಗಲಿಕ್ಕಾಗಿ ಈ ರೀತಿ ತಾನು ದೇವದೂತನೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತಿದ್ದೆ. ನಾನು ನಿಮ್ಮಿಡನೆ, ಆ ವ್ಯಕ್ತಿ ತಾನು ಪ್ರವಾದಿ ಎಂದು ಹೇಳಿಕೊಳ್ಳುವ ಮುನ್ನ ಎಂದಾದರೂ ಸುಳ್ಳು ಹೇಳಿದ್ದರೆಂಬ ಆರೋಪ ಅವರ ಮೇಲೆ ಇದೆಯೇ ಎಂದು ಪ್ರಶ್ನಿಸಿದೆ. ಇಲ್ಲ ಎಂದು ನೀವು ಉತ್ತರಿಸಿದಿರಿ. ಮನುಷ್ಯರ ವಿಷಯದಲ್ಲಿ ಸುಳ್ಳು ಹೇಳದೆ ಇರುವವನು ದೇವರ ವಿಷಯದಲ್ಲಿ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ನಾನು ನನಗೇ ಹೇಳಿಕೊಂಡೆ. ಮುಂದೆ ನಾನು ನಿಮ್ಮಿಡನೆ, ಆ ವ್ಯಕ್ತಿಯ ಹಿಂಬಾಲಕರು ಬಲಿಷ್ಠ ವರ್ಗದವರೇ ಅಥವಾ ದುರ್ಬಲ ವರ್ಗದವರೇ ಎಂದು ಪ್ರಶ್ನಿಸಿದೆ. ದುರ್ಬಲ ವರ್ಗದವರು ಎಂದು ನೀವು ಹೇಳಿದಿರಿ. ನಿಜಕ್ಕೂ ಯಾವಾಗಲೂ ದುರ್ಬಲ ವರ್ಗದವರೇ ದೇವದೂತರ ಹಿಂಬಾಲಕರಾಗುತ್ತಾರೆ. ಆ ವ್ಯಕ್ತಿಯ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆಯೇ ಅಥವಾ ಕುಸಿಯುತ್ತಿದೆಯೇ? ಎಂದು ನಾನು ನಿಮ್ಮಲ್ಲಿ ವಿಚಾರಿಸಿದೆ. ಹೆಚ್ಚುತ್ತಲೇ ಇದೆ ಎಂದು ನೀವು ತಿಳಿಸಿದಿರಿ. ನಿಜವಾದ ಧರ್ಮ ವಿಶ್ವಾಸವು ಇದೇ ರೀತಿ ಕ್ರಮೇಣ ಹೆಚ್ಚುತ್ತಾ ಕೊನೆಗೆ ಸಂಪೂರ್ಣವಾಗಿ ಬಿಡುತ್ತದೆ. ನನ್ನ ನಿಮ್ಮಾಡನೆ, ಯಾರಾದರೂ ಆ ವ್ಯಕ್ತಿಯ ಧರ್ಮವನ್ನು ಸ್ವೀಕರಿಸಿದ ಬಳಿಕ ಅದರ ವಿರುದ್ಧ ತಿರುಗಿ ಬಿದ್ದದ್ದುಂಟೇ? ಎಂದು ಕೇಳಿದೆ. ಇಲ್ಲ ಎಂದು ನೀವು ತಿಳಿಸಿದಿರಿ. ಇದು ನಿಜವಾದ ಧರ್ಮ ವಿಶ್ವಾಸದ ಲಕ್ಷಣ. ಅದು ಒಬ್ಬ ವ್ಯಕ್ತಿಯ ಮನದೊಳಗೆ ಮನೆ ಮಾಡಿಕೊಂಡರೆ ಅದರ ಸುಖ ಎಷ್ಟಿರುತ್ತದೆಂದರೆ ಮತ್ತೆ ಅದನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿರುವುದಿಲ್ಲ. ಆ ವ್ಯಕ್ತಿ ಎಂದಾದರೂ ವಚನಭಂಗ ಮಾಡುತ್ತಾರೆಯೇ? ಎಂದು ನಾನು ನಿಮ್ಮಾಡನೆ ವಿಚಾರಿಸಿದೆ. ಇಲ್ಲ ಎಂದು ನೀವು ತಿಳಿಸಿದಿರಿ. ಇದು ದೇವದೂತರ ಲಕ್ಷಣ. ಅವರೆಂದೂ ಕೊಟ್ಟ ಮಾತಿಗೆ ತಪ್ಪಿನಡೆಯುವುದಿಲ್ಲ. ಅವರು ನಿಮಗೆ ಏನನ್ನು ಉಪದೇಶಿಸುತ್ತಾರೆ ಎಂದು ನಾನು ನಿಮ್ಮಲ್ಲಿ ಕೇಳಿದೆ. ಅಲ್ಲಾಹನೊಬ್ಬನನ್ನು ಮಾತ್ರ ಪೂಜಿಸಬೇಕು. ಬೇರೆ ಯಾರೂ (ದೇವತ್ವದಲ್ಲಿ) ಅವನ ಪಾಲುದಾರರಲ್ಲ. ಪೂರ್ವಜರ ಸಂಪ್ರದಾಯಗಳನ್ನು ಬಿಟ್ಟುಬಿಡಬೇಕು. ನಮಾಝ್ ಮಾಡಬೇಕು. ಸತ್ಯ ಹೇಳಬೇಕು. ಧರ್ಮನಿಷ್ಠರಾಗಿರಬೇಕು. ಬಂಧುಗಳ ಜೊತೆ ಸೌಜನ್ಯದೊಂದಿಗೆ ವರ್ತಿಸಬೇಕು ಎಂದು ಅವರು ಉಪದೇಶಿಸುತ್ತಾರೆಂದು ನೀವು ನನಗೆ ತಿಳಿಸಿದಿರಿ. ನೀವು ಹೇಳಿದ್ದೆಲ್ಲಾ ಸತ್ಯ ಎಂದಾದರೆ ಆ ವ್ಯಕ್ತಿ ಶೀಘ್ರವೇ ನನ್ನ ಅಧೀನವಿರುವ ಭೂಭಾಗದ ಒಡೆಯರಾಗಲಿದ್ದಾರೆ. ಇಂತಹ ದೇವದೂತರೊಬ್ಬರು ಬರಲಿದ್ದಾರೆ ಎಂಬುದು ನನಗೆ ತಿಳಿದಿತ್ತು. ಆದರೆ ಅವರು ನಿಮ್ಮಿಳಗಿಂದ ಬರುವರೆಂದು ನಾನು ನಿರಿಕ್ಷಿಸಿರಲಿಲ್ಲ. ಅವರನ್ನು ತಲುಪಲು ನನಗೆ ಸಾಧ್ಯವಿದ್ದಿದ್ದರೆ ನಾನು ಎಷ್ಟು ಕಷ್ಟಪಟ್ಟಾದರೂ ಅವರನ್ನು ತಲುಪುತ್ತಿದ್ದೆ. ನಾನು ಅವರ ಬಳಿ ಇದ್ದಿದ್ದರೆ ಖಂಡಿತ ಅವರ ಪಾದ ತೊಳೆಯುತ್ತಿದ್ದೆ.’’
ಆ ಬಳಿಕ ಹಿರಾಕ್ಲಿಯಸ್ ದೊರೆಯು, ತನಗೆ ಪ್ರವಾದಿಯು ಕಳಿಸಿದ್ದ ಪತ್ರವನ್ನು ತರಿಸಿ ಓದಿದನು.
ಅಬೂ ಸುಫ್ಯಾನ್ ಹೇಳುತ್ತಾರೆ:
‘‘ರಾಜನು ಪತ್ರವನ್ನೋದಿ ಮುಗಿಸಿದಾಗ ಆತನ ದರಬಾರಿನಲ್ಲಿ ಭಾರೀ ಸದ್ದುಗದ್ದಲ ಉಂಟಾಯಿತು. ಹಲವು ಬಗೆಯ ಧ್ವನಿಗಳು ಮೊಳಗಿದವು. ನಮ್ಮನ್ನು ಆಸ್ಥಾನದಿಂದ ಹೊರಗೆ ಕಳಿಸಲಾಯಿತು. ಆ ವೇಳೆ ನಾನು ನನ್ನ ಜೊತೆಗಿದ್ದ ಸಂಗಾತಿಗಳೊಡನೆ ‘‘ಆ ಮುಹಮ್ಮದ್‌ರ ಸಮಾಚಾರವು ಈಗ ತುಂಬಾ ಬೆಳೆದು ಬಿಟ್ಟಿದೆ. ನೋಡಿರಂತೆ, ಸಿರಿಯಾದ ದೊರೆ ಕೂಡಾ ಅವ�