ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ

Update: 2021-10-20 09:53 GMT

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ 23 ವಯಸ್ಸಿನ ಪುತ್ರ ಆರ್ಯನ್ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಮುಂಬೈ ವಿಶೇಷ ನ್ಯಾಯಾಲಯ ಇಂದು ವಜಾಗೊಳಿಸಿದೆ.

ಅ.19ರಂದು ನಡೆದ ವಿಚಾರಣೆ ವೇಳೆ ಎರಡೂ  ಕಡೆಯ ವಾದಗಳನ್ನು ಆಲಿಸಿದ ನಂತರ ವಿಶೇಷ ನ್ಯಾಯಾಧೀಶ ವಿ. ವಿ. ಪಾಟೀಲ್ ತಮ್ಮ ಆದೇಶವನ್ನು ಕಾಯ್ದಿರಿಸಿದ್ದರು.

ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಆರ್ಯನ್ ಖಾನ್  ಪರ ವಕೀಲರು ಬಾಂಬೆ ಹೈಕೋರ್ಟ್  ಮೊರೆ ಹೋಗುವ ಸಾಧ್ಯತೆಯಿದೆ.

ಅಕ್ಟೋಬರ್ 2 ರಂದು ಮುಂಬೈ ಕ್ರೂಸ್ ಹಡಗು ಪಾರ್ಟಿಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಇತರ ಏಳು ಮಂದಿಯನ್ನು ಅ.3ರಂದು ಬಂಧಿಸಲಾಗಿತ್ತು.

ಆರ್ಯನ್ ಅವರು ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ ಹಾಗೂ  ಅದಕ್ಕೂ ಮೊದಲು ಸ್ವಲ್ಪ ಸಮಯ ಎನ್‌ಸಿಬಿಯ ವಶದಲ್ಲಿದ್ದರು.

ಎನ್ ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ಮಾಡಿದಾಗ ಆರ್ಯನ್ ಬಳಿ ಯಾವುದೇ ಡ್ರಗ್ಸ್ ಗಳು ಕಂಡುಬಂದಿಲ್ಲ ಎಂದು ಆರ್ಯನ್ ಖಾನ್ ಪರ ವಕೀಲರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News