ಗಮನಿಸಿ... ಪುಟ್ಟಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯುವುದಾದಲ್ಲಿ ಸುರಕ್ಷಾ ಕ್ರಮ ಕಡ್ಡಾಯ
ಹೊಸದಿಲ್ಲಿ: ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳು ನಿಮ್ಮ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿದ್ದಲ್ಲಿ, ನಿಮ್ಮ ವಾಹನದ ವೇಗ ಗಂಟೆಗೆ 40 ಕಿಲೋಮೀಟರನ್ನು ಮೀರುವಂತಿಲ್ಲ. ಒಂದು ವೇಳೆ ನೀವು ಈ ವೇಗದ ಮಿತಿಯನ್ನು ಮೀರಿದಲ್ಲಿ ಅದು ಸಂಚಾರಿ ನಿಮಯಗಳ ಉಲ್ಲಂಘನೆಯಾಗುತ್ತದೆ ಎಂದು ಸಾರಿಗೆ ಸಚಿವಾಲಯ ಪ್ರಸ್ತಾವಿತ ಕರಡು ನಿಯಮಾವಳಿ ಹೇಳುತ್ತದೆ.
ಮಕ್ಕಳ ಸುರಕ್ಷೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ನಿಯಮ ರೂಪಿಸಲಾಗಿದೆ. ಅಂತೆಯೇ ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷದ ಒಳಗಿನ ಮಕ್ಕಳು ಹೆಲ್ಮೆಟ್ ಧರಿಸುವುದನ್ನು ಸವಾರ ಖಾತರಿಪಡಿಸಿಕೊಳ್ಳಬೇಕು ಎಂದೂ ಪ್ರಸ್ತಾವಿತ ನಿಯಮಾವಳಿಯಲ್ಲಿ ಸೂಚಿಸಲಾಗಿದೆ.
ಇತ್ತೀಚೆಗೆ ಕೇಂದ್ರ ಮೋಟಾರು ವಾಹನ ಕಾಯ್ದೆಗೆ ಮಾಡಿದ ತಿದ್ದುಪಡಿಗೆ ಅನುಸಾರವಾಗಿ ಕೇಂದ್ರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿದೆ.
ಕರಡು ಅಧಿಸೂಚನೆಯ ಪ್ರಕಾರ, ಮೋಟರ್ ಸೈಕಲ್‌ನಲ್ಲಿ ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳು ಇದ್ದಲ್ಲಿ, ಮಗುವನ್ನು ಚಾಲಕನ ಜತೆ ಕಟ್ಟುವ ಸುರಕ್ಷಾ ಸಾಧನವನ್ನು ಬಳಸುವುದು ಕೂಡಾ ಕಡ್ಡಾಯವಾಗಿರುತ್ತದೆ.
ಸುರಕ್ಷಾ ಸಾಧನ ಎಂದರೆ ಮಗು ಬಳಸುವ ಹೊಂದಾಣಿಕೆ ಮಾಡಬಹುದಾದ ಸೊಂಟ ಪಟ್ಟಿಯು ಎರಡು ಪಟ್ಟಿಗಳನ್ನು ಹೊಂದಿರಬೇಕು ಹಾಗೂ ಇದನ್ನು ಚಾಲಕ ಧರಿಸಿದ ಶೋಲ್ಡರ್ ಲೂಪ್‌ಗೆ ಜೋಡಿಸಬೇಕು. ಹೀಗೆ ಮಗುವಿನ ದೇಹದ ಮೇಲಿನ ಭಾಗ ಭದ್ರವಾಗಿ ಚಾಲಕನ ಜತೆ ಹೊಂದಿಕೊಂಡಿರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.