ರಾಜ್ಯಗಳಿಗೆ 17,000 ಕೋ.ರೂ.ಜಿಎಸ್‌ಟಿ ಪರಿಹಾರ ಬಿಡುಗಡೆ
ಹೊಸದಿಲ್ಲಿ,ನ.3: ರಾಜ್ಯಗಳು ತಮ್ಮ ಆದಾಯ ಕೊರತೆಯನ್ನು ನೀಗಿಸಿಕೊಳ್ಳಲು ಕೇಂದ್ರವು ಬುಧವಾರ ಅವುಗಳಿಗೆ 17,000 ಕೋ.ರೂ.ಜಿಎಸ್‌ಟಿ ಪರಿಹಾರವನ್ನು ಬಿಡುಗಡೆಗೊಳಿಸಿದೆ.
ಇದರೊಂದಿಗೆ 2021-22ರಲ್ಲಿ ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾದ ಜಿಎಸ್‌ಟಿ ಪರಿಹಾರ ಒಟ್ಟು 60,000 ಕೋ.ರೂ.ಗಳಾಗಿವೆ ಎಂದು ವಿತ್ತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಜಿಎಸ್‌ಟಿ ಮಂಡಳಿಯ ನಿರ್ಧಾರದಂತೆ ಪ್ರಸಕ್ತ ವಿತ್ತ ವರ್ಷದಲ್ಲಿ ಜಿಎಸ್‌ಟಿ ಪರಿಹಾರದ ಬಿಡುಗಡೆಯಲ್ಲಿ ಕೊರತೆಯ ಬದಲಾಗಿ ಈಗಾಗಲೇ ಬೆನ್ನುಬೆನ್ನಿಗೆ 1.59 ಲ.ಕೋ.ರೂ.ಗಳ ಸಾಲವನ್ನು ಬಿಡುಗಡೆಗೊಳಿಸಲಾಗಿದೆ.
ಪ್ರಸಕ್ತ ವಿತ್ತ ವರ್ಷದಲ್ಲಿ ರಾಜ್ಯಗಳಿಗೆ ಪಾವತಿಸಬೇಕಿರುವ ಜಿಎಸ್‌ಟಿ ಪರಿಹಾರದಲ್ಲಿ 2.59 ಲ.ಕೋ.ರೂ.ಗಳ ಕೊರತೆಯನ್ನು ಕೇಂದ್ರವು ಅಂದಾಜಿಸಿದ್ದು,ಈ ಪೈಕಿ 1.59 ಲ.ಕೋ.ರೂ.ಗಳನ್ನು ಅವು ಈ ವರ್ಷ ಸಾಲವಾಗಿ ಪಡೆದುಕೊಳ್ಳಬೇಕಿದೆ.
ಐಷಾರಾಮಿ ಮತ್ತು "ಪಾಪದ ಸರಕು(ಮದ್ಯ,ತಂಬಾಕು ಇತ್ಯಾದಿ)"ಗಳ ಮೇಲೆ ಸೆಸ್ ಮೂಲಕ ಒಂದು ಲ.ಕೋ.ಗೂ ಅಧಿಕ ಮೊತ್ತದ ಸಂಗ್ರಹವನ್ನು ಕೇಂದ್ರವು ನಿರೀಕ್ಷಿಸಿದ್ದು,ಇದನ್ನು ಜಿಎಸ್‌ಟಿ ಅನುಷ್ಠಾನದಿಂದಾಗಿ ರಾಜ್ಯಗಳ ಆದಾಯ ಕೊರತೆಗೆ ಪರಿಹಾರವಾಗಿ ನೀಡಲಾಗುವುದು.
ಆರ್ಥಿಕತೆಯ ಚೇತರಿಕೆಯೊಂದಿಗೆ ತೆರಿಗೆ ಸಂಗ್ರಹವು ಹೆಚ್ಚಿರುವುದರಿಂದ ಜಿಎಸ್‌ಟಿ ಸಂಗ್ರಹವು ಮುಂಗಡಪತ್ರದಲ್ಲಿ ನಿಗದಿಗೊಳಿಸಿರುವ ಗುರಿಯನ್ನು ಮೀರುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.30 ಲ.ಕೋ.ರೂ.ಗೆ ಏರಿಕೆಯಾಗಿದ್ದು,ಇದು 2017 ಜುಲೈ ಬಳಿಕ ಎರಡನೇ ಅತ್ಯಧಿಕ ಮೊತ್ತವಾಗಿದೆ. 2021 ಎಪ್ರಿಲ್‌ನಲ್ಲಿ 1.41 ಲ.ಕೋ.ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ನಾಲ್ಕು ತಿಂಗಳುಗಳಿಂದ ಜಿಎಸ್‌ಟಿ ಸಂಗ್ರಹ ಒಂದು ಲ.ಕೋ.ರೂ.ಗಿಂತ ಮೇಲೆಯೇ ಇದೆ.