ಯುಎಇ: ಮುಸ್ಲಿಮೇತರರಿಗೆ ಹೊಸ ಕಾನೂನು ಜಾರಿ
ಅಬುಧಾಬಿ, ನ.7: ಯುಎಇಯಲ್ಲಿ ಮುಸ್ಲಿಮೇತರ ವ್ಯಕ್ತಿಗಳು ಮದುವೆಯಾಗಲು, ವಿಚ್ಛೇದನ ನೀಡಲು ಮತ್ತು ಮಗುವಿನ ಪಾಲನೆಯನ್ನು ಜಂಟಿಯಾಗಿ ಮಾಡಲು ಅವಕಾಶ ನೀಡುವ ನೂತನ ಕಾನೂನು ಜಾರಿಗೊಳಿಸಿರುವ ಬಗ್ಗೆ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ರವಿವಾರ ರಾಜಾಜ್ಞೆ ಜಾರಿಗೊಳಿಸಿದ್ದಾರೆ.
ಇಸ್ಲಾಮಿಕ್ ಶರಿಯದ ಸಿದ್ಧಾಂತದ ಆಧಾರದಲ್ಲಿ ಮದುವೆ ಮತ್ತು ವಿಚ್ಛೇದನ ಮುಂತಾದ ವೈಯಕ್ತಿಕ ವಿಷಯಗಳ ಕಾನೂನು ಇರುವ ಯುಎಇ, ಇದೀಗ ಪ್ರಾದೇಶಿಕ ವೈಜ್ಞಾನಿಕ ಕೇಂದ್ರವಾಗಿ ಸಾಧಿಸಿರುವ ಸ್ಪರ್ಧಾತ್ಮಕ ಮೇಲುಗೈಯನ್ನು ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಕೈಗೊಂಡಿರುವ ಮತ್ತೊಂದು ಮಹತ್ವದ ಕ್ರಮ ಇದಾಗಿದೆ. ಸಭ್ಯ ಮದುವೆ(ಗಂಡು ಮತ್ತು ಹೆಣ್ಣಿನ ಮಧ್ಯೆ ನಡೆಯುವ ವಿವಾಹ), ವಿಚ್ಛೇದನ, ಜೀವನಾಂಶ, ಜಂಟಿಯಾಗಿ ಮಗುವಿನ ಪಾಲನೆ, ಉತ್ತರಾಧಿಕಾರ, ಪಿತೃತ್ವದ ಪುರಾವೆ ಮೊದಲಾದ ವಿಷಯಗಳು ಈ ಕಾನೂನಿನ ವ್ಯಾಪ್ತಿಯಡಿ ಬರುತ್ತವೆ ಎಂದು ರಾಜಾಜ್ಞೆಯಲ್ಲಿ ತಿಳಿಸಲಾಗಿದೆ.
ಮುಸ್ಲಿಮೇತರ ಕುಟುಂಬಗಳಿಗೆ ಸಂಬಂಧಿಸಿದ ವಿವಾದಗಳನ್ನು ನಿರ್ವಹಿಸಲು ಅಬುಧಾಬಿಯಲ್ಲಿ ನ್ಯಾಯಾಲವನ್ನು ಸ್ಥಾಪಿಸಲಾಗುವುದು, ಇಂಗ್ಲಿಷ್ ಮತ್ತು ಅರೆಬಿಕ್ ಭಾಷೆಗಳಲ್ಲಿ ನ್ಯಾಯಾಲಯದ ಕಲಾಪ ನಡೆಯಲಿದೆ.
ಸಭ್ಯ ಮದುವೆ, ವಿಚ್ಛೇದನ, ಜೀವನಾಂಶ, ಜಂಟಿಯಾಗಿ ಮಗುವಿನ ಪಾಲನೆ, ಉತ್ತರಾಧಿಕಾರ, ಪಿತೃತ್ವದ ಪುರಾವೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ 20 ಅನುಚ್ಛೇದ ಹಾಗೂ ಹಲವು ಪರಿಚ್ಛೇದಗಳನ್ನು ಈ ಕಾನೂನು ಹೊಂದಿದೆ.
ಮದುವೆಗೆ ಮಹಿಳೆ ಮತ್ತು ಪುರುಷನ ಒಪ್ಪಿಗೆ ಇದ್ದರೆ ಸಾಕು. ಮಹಿಳೆಯ ಕುಟುಂಬದವರ ಒಪ್ಪಿಗೆಯ ಅಗತ್ಯವಿಲ್ಲ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಅಧಿಕಾರ ಪತಿ ಮತ್ತು ಪತ್ನಿ ಇಬ್ಬರಿಗೂ ಇರುತ್ತದೆ. ತಮಗಾದ ತೊಂದರೆಯನ್ನು ಪುರಾವೆ ಸಹಿತ ಸಾಬೀತುಪಡಿಸುವ ಅಗತ್ಯವಿಲ್ಲ. ಈ ಹಿಂದೆ ತೊಂದರೆಯ ಬಗ್ಗೆ ಪುರಾವೆ ಒದಗಿಸಬೇಕಿತ್ತು.
ಮುಸ್ಲಿಮೇತರ ದಂಪತಿ ವಿಚ್ಛೇದನ ಕೋರಿದ ಅರ್ಜಿಯನ್ನು ಕೌಟುಂಬಿಕ ಸಲಹೆ ವಿಭಾಗದ ಪರಿಶೀಲನೆಗೆ ಕಳಿಸುವ ಅಗತ್ಯವಿಲ್ಲ. ನ್ಯಾಯಾಲಯದಲ್ಲೇ ನಿರ್ಧರಿಸಬಹುದು. ಅಲ್ಲದೆ ದಂಪತಿ ಸಮನ್ವಯ ಕಲಾಪದಲ್ಲಿ ಪಾಲ್ಗೊಳ್ಳುವ ಅಗತ್ಯವಿರುವುದಿಲ್ಲ.
ಮದುವೆಯಾಗಿ ಒಟ್ಟಿಗೆ ಕಳೆದ ಅವಧಿ, ಪತ್ನಿಯ ವಯಸ್ಸು, ಪತಿ ಮತ್ತು ಪತ್ನಿಯ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಜೀವನಾಂಶವನ್ನು ನಿರ್ಧರಿಸಲಾಗುತ್ತದೆ. ಮಗುವಿನ ಮೇಲೆ ವಿಚ್ಛೇದನದ ಪರಿಣಾಮ ಕಡಿಮೆಗೊಳಿಸಲು ಹಾಗೂ ಮಗುವಿನ ಮಾನಸಿಕ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಮಕ್ಕಳ ಪಾಲನೆಯನ್ನು ಹೆತ್ತವರು ಸಮಾನವಾಗಿ ಹಂಚಿಕೊಳ್ಳಬೇಕು.
ಉತ್ತರಾಧಿಕಾರ, ತಾವು ಬಯಸಿದವರಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿಕೊಡುವ ಹಕ್ಕನ್ನೂ ಈ ಕಾನೂನು ವಲಸಿಗರಿಗೆ ನೀಡುತ್ತದೆ.
ವಲಸಿಗ ಮುಸ್ಲಿಮೇತರ ದಂಪತಿಗೆ ಸಂಬಂಧಿಸಿ ನವಜಾತ ಶಿಶುಗಳ ಪಿತೃತ್ವದ ಪುರಾವೆಯು ಮದುವೆ ಅಥವಾ ಪಿತೃತ್ವದ ಗುರುತಿಸುವಿಕೆಯನ್ನು ಆಧರಿಸಿರುತ್ತದೆ ಎಂದು ಕಾನೂನಿನಲ್ಲಿ ಸೂಚಿಸಲಾಗಿದೆ.