25,000ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದ ಮುಹಮ್ಮದ್‌ ಶರೀಫ್‌ ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

Update: 2021-11-09 14:07 GMT

ಹೊಸದಿಲ್ಲಿ: ಈ ಬಾರಿ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದ ಕೆಲವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರಲ್ಲಿ ಒಬ್ಬರು ಸಮಾಜ ಸೇವೆಗಾಗಿ ಪದ್ಮಶ್ರೀ ಪಡೆದ  ಅಯೋಧ್ಯೆಯ ಶರೀಫ್‌ ಚಾಚಾ. ೮೩ ವರ್ಷ ಪ್ರಾಯದ ಶರೀಫ್‌ ರವರು ಬೈಸಿಕಲ್‌ ಗಳ ಮೆಕ್ಯಾನಿಕ್‌ ಆಗಿದ್ದು ವೃತ್ತಿ ಜೀವನ ನಿರ್ವಹಿಸುತ್ತಿದ್ದಾರೆ. ಸೋಮವಾರದಂದು ನಡೆದ ಪದ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶರೀಫ್‌ ಚಾಚಾ ಎಂದೇ ಅವರು ಪ್ರಸಿದ್ಧಿಯಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಗುರುತು ಪತ್ತೆಯಾದ ಮೃತದೇಹಗಳನ್ನು ಗೌರವಯುತವಾಗಿ ಅವರು ಅಂತ್ಯಕ್ರಿಯೆ ಮಾಡಿದ್ದಾರೆ. ಒಂದೆರಡಲ್ಲ ಒಟ್ಟು ೨೫,೦೦೦ಕ್ಕಿಂತಲೂ ಹೆಚ್ಚಿನ ಅನಾಥ ಮೃತದೇಹಗಳಿಗೆ ಗೌರವಯುತ ಅಂತ್ಯಸಂಸ್ಕಾರ ಮಾಡಿದ್ದಾರೆ. 

1992ರಲ್ಲಿ ಹಿಂದುತ್ವ ಸಂಘಟನೆಗಳು ಬಾಬರಿ ಮಸೀದಿಯನ್ನು ಅನೈತಿಕವಾಗಿ ಧ್ವಂಸಗೊಳಿಸಿದ್ದ ಸಂದರ್ಭ ಅದು. ಈ ವೇಳೆ ಕೋಮುಗಲಭೆಗಳೂ ವ್ಯಾಪಕವಾಗಿತ್ತು. ಇದೇ ಸಂದರ್ಭದಲ್ಲಿ ಶರೀಫ್‌ ರ ಪುತ್ರ ರಯೀಸ್‌ ದುಷ್ಕರ್ಮಿಗಳಿಂದ ಕೊಲೆಗೈಯಲ್ಪಟ್ಟಿದ್ದ. ಶರೀಫ್‌ ರ ಪುತ್ರ ಕೆಮಿಸ್ಟ್‌ ಆಗಿದ್ದ. ಸುಲ್ತಾನ್‌ ಪುರಕ್ಕೆ ಬರುವ ಸಂದರ್ಭದಲ್ಲಿ ಅವರನ್ನು ಕೊಲೆಗೈಯಲಾಗಿತ್ತು. ರಯೀಸ್‌ ಮೃತದೇಹವು ರೈಲ್ವೆ ಹಳಿಯ ಪಕ್ಕ ಬಿದ್ದಿದ್ದು, ಪ್ರಾಣಿಗಳಿಗೆ, ಬೀದಿಶ್ವಾನಗಳಿಗೆ ಆಹಾರವಾಗಿ ಹೋಗಿತ್ತು.

ತನ್ನ ಪುತ್ರನನ್ನು ಇಂತಹಾ ಪರಿಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿರದ ಮುಹಮ್ಮದ್‌ ಶರೀಫ್‌ ತನ್ನ ಮಗನ ಮೃತದೇಹವನ್ನು ಹುಡುಕಿಕೊಂಡು ಪೊಲೀಸ್‌ ಸ್ಟೇಷನ್‌, ಶವಾಗಾರ, ರೈಲ್ವೆ ನಿಲ್ದಾಣಗಳಿಗೆ ಅಲೆಯತೊಡಗಿದರು. ಅಲ್ಲಿದ್ದ ಅನಾಥ ಮೃತದೇಹಗಳಿಗೆ ಅಂತ್ಯಸಂಸ್ಕಾರ ಮಾಡಲು ಪ್ರಾರಂಭಿಸಿದರು. ಹಿಂದೂ, ಮುಸ್ಲಿಂ, ಸಿಖ್‌ ಎನ್ನದೇ ಎಲ್ಲ ಮೃತದೇಹಗಳಿಗೂ ಗೌರವಯುತ ಅಂತ್ಯಸಂಸ್ಕಾರ ಮಾಡಿದರು. 

೭೨ ಗಂಟೆಗಳ ಕಾಲ ಅನಾಥ ಮೃತದೇಹಗಳನ್ನಿಟ್ಟುಕೊಳ್ಳುವ ಪೊಲೀಸರು ಬಳಿಕ ಸೀದಾ ಶರೀಫ್‌ ರಿಗೆ ಕರೆ ಮಾಡುತ್ತಾರೆ. ಅವರು ಅದನ್ನು ಪಡೆದುಕೊಂಡು ಅಂತ್ಯಸಂಸ್ಕಾರ ನಡೆಸುತ್ತಾರೆ. ಇದೀಗ ಈ ಸಂಖ್ಯೆ 25,000 ದಾಟಿದೆ. ಅವರ ಈ ಕಾರ್ಯವು ದೇಶಾದ್ಯಂತ ಸುದ್ದಿಯಾಯಿತು. ಬಾಲಿವುಡ್‌ ನಟ ಅಮೀರ್‌ ಖಾನ್‌ ನಿರೂಪಕನಾಗಿದ್ದ ಸತ್ಯಮೇವ ಜಯತೇ ಕಾರ್ಯಕ್ರಮಕ್ಕೂ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ಮುಹಮ್ಮದ್‌ ಶರೀಫ್‌ ರನ್ನು 2020ರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಇದೀಗ ಒಂದು ವರ್ಷದ ಬಳಿಕ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News