ಸುಪ್ರೀಂ ಎಚ್ಚರಿಕೆಯ ಬಳಿಕ 11 ಮಹಿಳೆಯರಿಗೆ ಖಾಯಂ ಸೇವಾವಧಿ ನೀಡಲು ಸೇನೆಯ ಒಪ್ಪಿಗೆ

Update: 2021-11-12 18:35 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಅ.12: ಸೇನೆಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದ ಬಳಿಕ 11 ಮಹಿಳಾ ಅಧಿಕಾರಿಗಳಿಗೆ ಖಾಯಂ ಸೇವಾವಧಿಯನ್ನು ನೀಡಲು ಭಾರತೀಯ ಸೇನೆಯು ಶುಕ್ರವಾರ ಒಪ್ಪಿಕೊಂಡಿದೆ.

 11 ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿಗಳಾಧ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು ವಿಚಾರಣೆಗೆತ್ತಿಕೊಂಡಿತ್ತು. ತಾವು ಖಾಯಂ ಸೇವಾವಧಿಗೆ ಅರ್ಹರಾಗಿದ್ದರೂ ಸೇನೆಯು ಅದನ್ನು ನಿರಾಕರಿಸಿದೆ ಎಂದು ಈ ಮಹಿಳಾ ಅಧಿಕಾರಿಗಳು ದೂರಿಕೊಂಡಿದ್ದರು.

72 ಮಹಿಳಾ ಅಧಿಕಾರಿಗಳ ಪೈಕಿ ಈ ವರ್ಷ ಖಾಯಂ ಸೇವಾವಧಿಯನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುವ 11 ಅಧಿಕಾರಿಗಳಿಗೆ ಮಾತ್ರವಲ್ಲ,ಅರ್ಹ ಎಲ್ಲ ಅರ್ಜಿದಾರರಿಗೂ ಖಾಯಂ ಸೇವಾವಧಿಯನ್ನು ನೀಡಲಾಗುವುದು ಎಂದು ಸೇನೆಯ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪೀಠಕ್ಕೆ ತಿಳಿಸಿದರು.

ಮೂರು ವಾರಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಸೇವಾವಧಿಯನ್ನು ಮಂಜೂರು ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿತು.

ಕೇಂದ್ರವು ಅ.22ರಂದು 39 ಮಹಿಳಾ ಸೇನಾಧಿಕಾರಿಗಳಿಗೆ ಖಾಯಂ ಸೇವಾವಧಿಯನ್ನು ಮಂಜೂರು ಮಾಡಿತ್ತು. ಖಾಯಂ ಸೇವಾವಧಿಯನ್ನು ಹೊಂದಿದವರು ಸೇನೆಯಲ್ಲಿ ನಿವೃತ್ತಿ ವಯಸ್ಸಿನವರೆಗೆ ಸೇವೆಯಲ್ಲಿರುತ್ತಾರೆ. ತಾತ್ಕಾಲಿಕ ಸೇವಾವಧಿಯು 10 ವರ್ಷಗಳಿಗೆ ಸೀಮಿತವಾಗಿದ್ದು,ಅವರು 10 ವರ್ಷಗಳ ಬಳಿಕ ಸೇವೆಯನ್ನು ತೊರೆಯುವುದನ್ನು ಅಥವಾ ಖಾಯಂ ಸೇವಾವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಧಿಕಾರಿಯೋರ್ವನಿಗೆ ಖಾಯಂ ಸೇವಾವಧಿ ಸಿಗದಿದ್ದರೆ ಆತ ನಾಲ್ಕು ವರ್ಷಗಳ ಸೇವಾ ವಿಸ್ತರಣೆಯನ್ನು ಪಡೆದುಕೊಳ್ಳಬಹುದು.

ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಫೆಬ್ರವರಿಯಲ್ಲಿ ನೀಡಿದ್ದ ಮಹತ್ವದ ತೀರ್ಪಿನಲ್ಲಿ ದೈಹಿಕ ಇತಿಮಿತಿಗಳ ಕೇಂದ್ರದ ನೆಪವನ್ನು ತಿರಸ್ಕರಿಸಿ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಖಾಯಂ ಸೇವಾವಧಿಯನ್ನು ನೀಡುವಂತೆ ಆದೇಶಿಸಿತ್ತು.

ಖಾಯಂ ಸೇವಾವಧಿಗೆ ಮಹಿಳಾ ಅಧಿಕಾರಿಗಳನ್ನು ಆಯ್ಕೆ ಮಾಡಲು ಸೇನೆಯು 2020 ಸೆಪ್ಟಂಬರ್ನಲ್ಲಿ ವಿಶೇಷ ಆಯ್ಕೆ ಮಂಡಳಿಯನ್ನು ರಚಿಸಿತ್ತು. 2020 ನವಂಬರ್ನಲ್ಲಿ ಆಯ್ಕೆ ಫಲಿತಾಂಶಗಳು ಪ್ರಕಟವಾಗಿದ್ದವು. ಖಾಯಂ ಸೇವಾವಧಿಯಿಂದ ವಂಚಿತರಾಗಿದ್ದ ಮಹಿಳಾ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News