ಸ್ವತಂತ್ರ ಭಾರತದಲ್ಲಿ ನೆಹರೂ

Update: 2021-11-13 19:30 GMT

ಭಾರತದಲ್ಲಿ ರಾಜಕೀಯ ಸ್ಥಿರತೆ ಮತ್ತು ಪ್ರಜಾತಂತ್ರದ ಭದ್ರತೆಗೆ ಹಾಗೂ ಆ ಮೂಲಕ 20-21 ನೇ ಶತಮಾನದಲ್ಲಿ ಜಗತ್ತಿನಲ್ಲಿ ಒಂದು ಪ್ರಮುಖ ಶಕ್ತಿಯಾಗಿ ಪ್ರವರ್ಧಮಾನವಾಗಲು ಪ್ರಮುಖ ಕೊಡುಗೆ ನೀಡಿದವರು ನೆಹರೂ. ಇಂದಿನ ಪೀಳಿಗೆಯವರು ಇದನ್ನು ಅರ್ಥಮಾಡಿಕೊಳ್ಳಬೇಕಾದ ತುರ್ತು ನಮ್ಮ ಮುಂದಿದೆ.


 ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರಷ್ಟು ಅವಹೇಳನಕ್ಕೆ ಗುರಿಯಾಗುತ್ತಿರುವ ವ್ಯಕ್ತಿ ಇಂದಿನ ದಿನಗಳಲ್ಲಿ ಬೇರೆ ಯಾರೂ ಇಲ್ಲ ಎಂದರೆ ತಪ್ಪಾಗಲಾರದು. ಅವರ ಬಗ್ಗೆ ವ್ಯಕ್ತಿಗತವಾದ ಕುತ್ಸಿತ ಹೇಳಿಕೆಗಳನ್ನೂ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇರಳವಾಗಿ ಕಾಣಬಹುದು. ಈ ಹಿನ್ನೆಲೆಯಲ್ಲಿ ನೆಹರೂ ಅವರ ಕೊಡುಗೆಯ ವಿಶ್ಲೇಷಣೆಯು ಅವರ ಜನ್ಮದಿನದಂದು ಪ್ರಸ್ತುತವಾಗುತ್ತದೆ. 1947ರಲ್ಲಿ ಸ್ವತಂತ್ರ ಭಾರತದ ಪ್ರಧಾನ ಮಂತ್ರಿಯಾಗಿ ನೆಹರೂ ಅಧಿಕಾರ ಸ್ವೀಕರಿಸಿದಾಗ ಎರಡು ದೊಡ್ಡ ಪ್ರಶ್ನೆಗಳು ಅಂದಿನ ನಾಯಕರ ಮುಂದೆ ಬಂದಿದ್ದವು, ವಿದೇಶಗಳಲ್ಲಿಯೂ ಕೇಳಿದ್ದರು: ಹೊಸ ದೇಶ ಎಷ್ಟು ಕಾಲ ಪ್ರಜಾತಂತ್ರಕ್ಕೆ ಬದ್ಧವಾಗಿ ಉಳಿಯಬಹುದು? ಮತ್ತು ದೇಶದ ಏಕತೆ ಎಷ್ಟು ವರ್ಷ ಸ್ಥಿರವಾಗಿರಬಹುದು?

ಈ ಪ್ರಶ್ನೆಗಳು ಹುಟ್ಟಲು ಕಾರಣಗಳಿದ್ದವು. 19ನೇ ಶತಮಾನದ ಅಂತ್ಯದವರೆಗೆ ಅಖಂಡ ಭಾರತವೆಂಬುದು ಕಲ್ಪನೆಗೆ ಮಾತ್ರ ಸೀಮಿತವಾಗಿತ್ತು; ಅದು ಸ್ವತಂತ್ರರಾದ ನೂರಾರು ರಾಜ, ಮಹಾರಾಜ, ಚಕ್ರವರ್ತಿ ಹಾಗೂ ಸುಲ್ತಾನರ ಆಡಳಿತೆಗೆ ಒಳಪಟ್ಟ ಭೌಗೋಳಿಕ ಪ್ರದೇಶ ಮಾತ್ರವಾಗಿತ್ತು. ಭಾರತವಿಡೀ ಒಂದೇ ರಾಷ್ಟ್ರವೆಂಬ ಕಲ್ಪನೆ ಹಿಂದಿನ ಕಾಲದಿಂದಲೇ ಬೇರೂರಿದ್ದಿದ್ದರೆ ನಮ್ಮ ದೇಶವು ವಿದೇಶೀ ಶಕ್ತಿಗಳ ವಸಾಹತು ಆಗುತ್ತಿರಲಿಲ್ಲ. ದೇಶವನ್ನು ಭೌಗೋಳಿಕವಾಗಿ ಒಂದುಗೂಡಿಸಿದ ಬ್ರಿಟಿಷರ ಆಡಳಿತ 1947ರಲ್ಲಿ ಕೊನೆಯಾದಾಗ ಹಿಂದಿನ ರಾಜವಂಶಸ್ಥರಲ್ಲಿ ಕೆಲವರು ತಮ್ಮ ಪ್ರಭುತ್ವಗಳನ್ನು ಮರುಸ್ಥಾಪಿಸುವ ಇರಾದೆಯನ್ನು ಹೊಂದಿದ್ದರು.

 ಇವುಗಳ ಜೊತೆಗೆ, ವಿಶ್ವದ ಇತರೆಡೆ ಹಿಂದೆ ವಸಾಹತುಗಳಾಗಿ ಆ ಬಳಿಕ ಸ್ವತಂತ್ರವಾದ ಅನೇಕ ದೇಶಗಳು ಪ್ರಜಾತಂತ್ರದಿಂದ ವಿಮುಖವಾಗಿ ಸರ್ವಾಧಿಕಾರದತ್ತ ಹೊರಳಿದ್ದವು. ಭಾರತವನ್ನೂ ಆ ಅಪಾಯ ಕಾಡಬಹುದಿತ್ತು. ಈ ಆತಂಕಗಳ ಹಿನ್ನೆಲೆಯಲ್ಲಿ ಭಾರತವು ಒಂದು ಸ್ವತಂತ್ರ ರಾಷ್ಟ್ರವಾಗಿ ಉಳಿಯಬೇಕಿದ್ದರೆ ಪ್ರಗತಿಪರರಾಗಿ, ದೂರದೃಷ್ಟಿ ಮತ್ತು ಉದಾರವಾದ ರಾಷ್ಟ್ರ ಪ್ರಜ್ಞೆ ಹೊಂದಿದ ಮುತ್ಸದ್ದಿಗಳ ನಾಯಕತ್ವ ದೇಶಕ್ಕೆ ಅಗತ್ಯವಾಗಿತ್ತು.

ಮಹಾತ್ಮಾ ಗಾಂಧೀಜಿಯ ಉತ್ತರಾಧಿಕಾರಿ:

 ಅದಾಗಲೇ 1921ರಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಒಟ್ಟು 9 ವರ್ಷಗಳ ಕಾಲ ಸೆರೆಮನೆಯನ್ನು ಕಂಡಿದ್ದ ಜವಾಹರಲಾಲ್ ನೆಹರೂ ಅವರು ಗಾಂಧೀಜಿಯವರ ಉತ್ತರಾಧಿಕಾರಿ ಎಂದು ಬಿಂಬಿತರಾಗಿದ್ದರು. ಸ್ವಾತಂತ್ರ್ಯ ಸಿಗುವ ಪರ್ವಕಾಲದಲ್ಲಿ ಮಹಾತ್ಮರ ಇಚ್ಛೆಯಂತೆ ಕಾಂಗ್ರೆಸಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನೆಹರೂ ದೇಶದ ಪ್ರಧಾನಮಂತ್ರಿಯ ಸ್ಥಾನಕ್ಕೆ ನೇಮಕಗೊಂಡರು; ಉಪಪ್ರಧಾನಿಯಾಗಿ ಸರ್ದಾರ ಪಟೇಲರು ಜವಾಬ್ದಾರಿ ವಹಿಸಿದರು. ಆದರೆ ಅದೇ ಸಂದರ್ಭದಲ್ಲಿ ಆದ ದೇಶವಿಭಜನೆ, ಅದರಿಂದಾದ ಹತ್ಯಾಕಾಂಡ ಮತ್ತು ಹಿಂಸೆ ಹಾಗೂ ಆ ಕಾವು ಆರುವ ಮೊದಲೇ ಸಂಭವಿಸಿದ ಗಾಂಧೀಜಿಯವರ ಅಮಾನುಷ ಹತ್ಯೆ-ಇವುಗಳು ಯಾವ ನಾಯಕರನ್ನಾದರೂ ವಿಚಲಿತಗೊಳಿಸುವಷ್ಟು ತೀವ್ರವಾದ ಆಘಾತಗಳಾಗಿದ್ದವು. ಮಾತ್ರವಲ್ಲ, ತಮ್ಮದೇ ಪ್ರಭುತ್ವಗಳನ್ನು ಪುನರಾರಂಭಿಸುವ ವಾಂಛೆ ಹೊಂದಿದ ರಾಜರುಗಳನ್ನು ಒಕ್ಕೂಟಕ್ಕೆ ಸೇರಿಸುವ ಸವಾಲನ್ನು ದೃಢವಾಗಿ ಎದುರಿಸಬೇಕಿತ್ತು. ಮುಂದಿನ ಮೂರು ವರ್ಷಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ ಜೊತೆಗೇ ಅಂಬೇಡ್ಕರ್‌ರ ನೇತೃತ್ವದಲ್ಲಿ ಹೊಸ ಸಂವಿಧಾನವನ್ನು ರಚಿಸಿ 1950ರ ಜನವರಿಯಲ್ಲಿ ಭಾರತವನ್ನು ಗಣರಾಜ್ಯವೆಂದು ಘೋಷಿಸಲಾಯಿತು. 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯೂ ನಡೆದು ದೇಶದ ಆಡಳಿತದಲ್ಲಿ ನಾಗರಿಕರು ಪಾಲುದಾರರಾದರು. 1957 ಮತ್ತು 1962ರ ಮಹಾಚುನಾವಣೆಗಳಲ್ಲಿ ಬಹುಮತ ಪಡೆದ ಕಾಂಗ್ರೆಸ್ ಪಕ್ಷದ ಅದ್ವಿತೀಯ ನೇತಾರರಾಗಿ ನೆಹರೂ ಪ್ರಧಾನಿಯಾಗಿ ಪುನರಾಯ್ಕೆಗೊಂಡರು. ಮೇ 1964ಕ್ಕೆ ನಿಧನರಾಗುವ ಹೊತ್ತಿಗೆ ದೇಶವನ್ನು ಸುಮಾರು 17 ವರ್ಷ ಪ್ರಧಾನ ಮಂತ್ರಿಯ ನೆಲೆಯಲ್ಲಿ ಮುನ್ನಡೆಸಿದರು.

ನೆಹರೂ ಅವರ ಕೊಡುಗೆ: 
 
ಈ ದೀರ್ಘ ಅವಧಿಯಲ್ಲಿ ನೆಹರೂ ಅವರ ಕೊಡುಗೆ ಏನು? ದಾಸ್ಯದಿಂದ ವಿಮೋಚನೆಗೊಂಡ ಉದಯೋನ್ಮುಖ ರಾಷ್ಟ್ರದ ಪುರೋಭಿವೃದ್ಧಿಗಾಗಿ ಅವರು ಮಾಡಿದ ಸಾಧನೆಗಳನ್ನು ನಾಲ್ಕು ಮಜಲುಗಳಲ್ಲಿ ಗುರುತಿಸಬಹುದು:

1. ಪ್ರಜಾತಂತ್ರಕ್ಕೆ ಭದ್ರವಾದ ಬುನಾದಿ
2. ದೇಶದ ಸಮಗ್ರತೆಗೆ ಪ್ರಾಶಸ್ತ್ಯ

3. ರಾಷ್ಟ್ರೀಯ ಭಾವೈಕ್ಯಕ್ಕೆ ಒತ್ತು, ಮತ್ತು

4. ಸಮಗ್ರ ಆರ್ಥಿಕ ಪ್ರಗತಿಗೆ ಅಗತ್ಯವಾದ ಯೋಜನೆಗಳು

ಇವುಗಳ ಜೊತೆಗೆ ದೇಶದಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಸಂವೇದನಾಶೀಲತೆ- ಇವುಗಳನ್ನು ಬೆಳೆಸಲು ನೆಹರೂ ನೀಡಿದ ಕೊಡುಗೆ ಅನನ್ಯವಾ ದುದು. ಸಂಪ್ರದಾಯವಾದಿಗಳ ವಿರೋಧದ ನಡುವೆಯೇ ಹಿಂದೂ ಸ್ತ್ರೀಯರಿಗೆ ಸಮಾನ ಹಕ್ಕುಗಳನ್ನು ನೀಡಲು ಶಾಸನದಲ್ಲಿ ತಿದ್ದುಪಡಿ ಮಾಡಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿದ್ದ ಆಧುನಿಕ ದೃಷ್ಟಿಕೋನ, ಉದಾರತೆ, ಸಮಾನತೆ, ವಿದ್ಯೆಗೆ ಒತ್ತು ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಮಾನವ ಅಭ್ಯುದಯಕ್ಕೆ ಉಪಯೋಗಿಸುವ ಮನೋಭಾವಗಳಿಂದ ನೆಹರೂ ಪ್ರಭಾವಿತರಾಗಿದ್ದರು. ಹೊಸ ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಮುಂದಿನ ಪೀಳಿಗೆಯವರ ಬೌದ್ಧಿಕ ವಿಕಾಸ ಅತೀ ಅಗತ್ಯವೆಂದು ಮನಗಂಡ ನೆಹರೂ ಉಚ್ಚಶಿಕ್ಷಣ ದೇಶದಲ್ಲಿಯೇ ಸಿಗುವಂತಾಗಲು ರೀಜನಲ್ ಇಂಜಿನಿಯರಿಂಗ್ ಕಾಲೇಜುಗಳು, ಐಐಟಿ, ಐಐಎಂ ಮುಂತಾದ ಶಿಕ್ಷಣ ಸಂಸ್ಥೆಗಳನ್ನು ಮತ್ತು ರಾಷ್ಟ್ರಮಟ್ಟದ ಅನೇಕ ಸಂಶೋಧನಾ ಸಂಸ್ಥೆ ಗಳನ್ನು ಆರಂಭಿಸಲು ಉತ್ತೇಜಿಸಿದರು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಾಂಧೀಜಿಯವರ ಬಳಿಕ ಅತ್ಯಂತ ಹೆಸರುವಾಸಿಯಾದ ನಾಯಕರು ನೆಹರೂ ಆಗಿದ್ದರು. ಪರದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸುವಲ್ಲಿ ಈ ಖ್ಯಾತಿ ಪ್ರಯೋಜನವಾಯಿತು. ಆಗಲೇ ವಿಶ್ವದಲ್ಲಿ ಸೈದ್ಧಾಂತಿಕ ನೆಲೆಯಲ್ಲಿ ಅನೇಕ ದೇಶಗಳು ಎರಡು ಬಣಗಳಾಗಿದ್ದವು. ಅದರಿಂದಾಗುವ ಹಾನಿಯನ್ನು ಮನಗಂಡ ನೆಹರೂ ಭಾರತವು ಯಾವ ಅಂತರ್‌ರಾಷ್ಟ್ರೀಯ ಬಣಕ್ಕೂ ಸೇರದೆ ತೃತೀಯ ವಿಶ್ವದ ಹಕ್ಕು ಮತ್ತು ಅಧಿಕಾರಗಳನ್ನು ಪ್ರತಿಪಾದಿಸಲು ಅಲಿಪ್ತರಾಷ್ಟ್ರಗಳ ಒಕ್ಕೂಟವನ್ನು ಬೆಳೆಸುವ ಪ್ರಯತ್ನವನ್ನು ಮಾಡಿದರು. ನಾಗರಿಕರ ಮಟ್ಟದಲ್ಲಿಯೂ ವಿದೇಶೀಯರೊಂದಿಗೆ ಸಂಪರ್ಕ ಮತ್ತು ಸಂವಹನದ ಅಗತ್ಯವನ್ನು ನೆಹರೂ ಪ್ರತಿಪಾದಿಸುತ್ತಿದ್ದರು.

ಸರ್ದಾರ್ ಪಟೇಲರ ದೃಢ ನಿಲುವಿನಿಂದ ಭಾರತವು ಏಕೀಕರಣಗೊಂಡಿತು. ಆದರೆ ಡಿಸೆಂಬರ್ 1950ರಲ್ಲಿ ಅವರ ಅಕಾಲ ನಿಧನದ ಬಳಿಕ ಸಮಸ್ಯೆಗಳು ಇನ್ನೂ ಉಳಿದಿದ್ದವು. ಭೌಗೋಳಿಕವಾಗಿ ಇಡೀ ದೇಶ ಒಂದೇ ಆಗಿದ್ದರೂ, ನಿಜವಾದ ಒಗ್ಗಟ್ಟಿಗೆ ವಿವಿಧತೆಯನ್ನು ಕಾಪಾಡಿಕೊಂಡು ಬರುವುದು ಅಗತ್ಯವಾಗಿತ್ತು. ವಿಭಿನ್ನ ಸಂಸ್ಕೃತಿ ಮತ್ತು ಭಾಷೆಗಳ ರಕ್ಷಣೆಗೋಸ್ಕರ 1956ರಲ್ಲಿ ಭಾಷಾವಾರು ಪ್ರಾಂತಗಳನ್ನು ರಚಿಸಲಾಯಿತು. ಆಯಾಯ ಪ್ರದೇಶದ ಭಾಷೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಇದರಿಂದ ಸಾಧ್ಯವಾಯಿತು. (17-18ನೇ ಶತಮಾನಗಳಲ್ಲಿ ಯೂರೋಪಿನಿಂದ ಅಮೆರಿಕಕ್ಕೆ ಹೋದ ವಲಸೆಗಾರರು ಅಲ್ಲಿನ ಮೂಲನಿವಾಸಿಗಳನ್ನು, ಅವರ ಸಂಸ್ಕೃತಿ ಹಾಗೂ ಭಾಷೆಗಳನ್ನು ಸಂಪೂರ್ಣ ನಾಶ ಮಾಡಿ ಐರೋಪ್ಯರ ಭಾಷೆ ಮತ್ತು ಆಚಾರವಿಚಾರಗಳನ್ನು ಅಲ್ಲಿ ಜಾರಿಗೆ ತಂದುದನ್ನು ನಾವು ಗಮನಿಸಬೇಕು). ಬ್ರಿಟಿಷರು ಭಾರತವನ್ನು ಬಿಟ್ಟಮೇಲೂ ಗೋವಾದಲ್ಲಿ ತನ್ನ ಆಧಿಪತ್ಯವನ್ನು ಬಿಡದ ಪೋರ್ಚುಗಲ್ ಜೊತೆ ಸಂಧಾನವು ಫಲಕಾರಿಯಾಗದ ಪರಿಸ್ಥಿತಿಯಲ್ಲಿ 1960ರಲ್ಲಿ ಬಲಪ್ರಯೋಗಿಸಿ ಗೋವಾವನ್ನು ಭಾರತದ ಆಧಿಪತ್ಯಕ್ಕೆ ತಂದ ನೆಹರೂ ಅವರ ನಿರ್ಧಾರವನ್ನು ಮರೆಯಲು ಸಾಧ್ಯವಿಲ್ಲ. 1940ರ ದಶಕದ ಭೀಕರ ಕ್ಷಾಮದ ಅನುಭವ ದೇಶಕ್ಕೆ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಪಾಠವನ್ನು ಕಲಿಸಿತ್ತು. ಹೀಗಾಗಿ 1950 ಮತ್ತು 1960ರ ದಶಕಗಳಲ್ಲಿ ಕೃಷಿಯ ಅಭಿವೃದ್ಧಿಗೆ ಆದ್ಯತೆ ನೀಡಿದರು. ಇದರೊಂದಿಗೆ, ಕೈಗಾರಿಕೀಕರಣದ ಮಹತ್ವವನ್ನು ಅರಿತ ನೆಹರೂ 1956ರಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತಂದರು. ಪಂಚವಾರ್ಷಿಕ ಯೋಜನೆಗಳ ಮೂಲಕ ವಿವಿಧ ರಂಗಗಳಲ್ಲಿಯೂ ದೇಶದ ಪ್ರಗತಿಗೆ ಉತ್ತೇಜನವನ್ನು ನೀಡಿದರು. ಪ್ರಜಾತಂತ್ರದ ಸಂಪ್ರದಾಯಗಳು: ತಮ್ಮ ಅಪಾರ ಜನಪ್ರಿಯತೆಯ ಮತ್ತು ಜನಬಲದ ಅರಿವು ತಮಗೆ ಇದ್ದರೂ ಅಧಿಕಾರದ ಗರ್ವ ನೆಹರೂ ಅವರಿಗೆ ಇರಲಿಲ್ಲ. ತಮ್ಮ ಧೋರಣೆಯೇ ಶ್ರೇಷ್ಠವೆಂಬ ಮನೋಸ್ಥಿತಿಯೂ ಅವರಲ್ಲಿರಲಿಲ್ಲ. ಹಾಗಾಗಿಯೇ ಪ್ರತಿಭಾವಂತ ವಿರೋಧಪಕ್ಷದ ನಾಯಕರನ್ನು ಗೌರವಿಸಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭಗಳಲ್ಲಿ ಸದನದಲ್ಲಿದ್ದು ಆಸಕ್ತಿಯಿಂದ ಆಲಿಸಿ ಉತ್ತರಿಸುತ್ತಿದ್ದರು. ಆಗತಾನೇ ಸಂಸತ್ತಿಗೆ ಆಯ್ಕೆಯಾಗಿ ಬಂದ ಯುವಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತದಲ್ಲಿ ಮುಂದೊಮ್ಮೆ ಪ್ರಧಾನಿಯಾಗುವ ಸಾಮರ್ಥ್ಯ ಹೊಂದಿದವರೆಂದು ಸ್ವತಃ ನೆಹರೂ ಶ್ಲಾಘಿಸಿದ್ದರು.

ಸಂಸತ್ತಿನ ಪ್ರಮುಖ ಚರ್ಚೆಗಳಲ್ಲಿ, ಪ್ರಶ್ನೋತ್ತರದ ವೇಳೆಯಲ್ಲಿ, ದೇಶದ ವಿಶೇಷ ಬೆಳವಣಿಗೆಗಳ ಕುರಿತಾದ ಸಂವಾದಗಳಲ್ಲಿ ಪ್ರಧಾನಿಯಾಗಿ ಭಾಗವಹಿಸುತ್ತಿದ್ದುದು ಪ್ರಜಾತಂತ್ರದ ಬಗ್ಗೆ ಅವರಿಗಿದ್ದ ಬದ್ಧತೆಗೆ ಸಾಕ್ಷಿ. 1950ರ ದಶಕದಲ್ಲಿ ತಮ್ಮ ಅಳಿಯನಾಗಿದ್ದ ಫಿರೋಝ್ ಗಾಂಧಿಯವರು ಮುಂಧ್ರ ಮತ್ತು ಎಲ್‌ಐಸಿ ಅವ್ಯವಹಾರದಲ್ಲಿ ನೆಹರೂ ಅವರ ಆಪ್ತರಾಗಿದ್ದ ವಿತ್ತಸಚಿವ ಟಿ.ಟಿ.ಕೃಷ್ಣಮಾಚಾರಿಯವರ ಪಾತ್ರವನ್ನು ಕಟುವಾಗಿ ಟೀಕಿಸಿ ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿದಾಗ ಅದಕ್ಕೆ ಅವಕಾಶ ನೀಡಿದ್ದೂ ಅಲ್ಲದೆ ಅದರ ತನಿಖೆಗೆ ಛಾಗ್ಲಾ ಆಯೋಗವನ್ನು ರಚಿಸುವ ನಿರ್ಧಾರವನ್ನು ಕೈಗೊಂಡಿದ್ದರು. ಆಗಾಗ ಪತ್ರಿಕಾ ಸಮ್ಮೇಳನಗಳನ್ನು ನಡೆಸಿ ದೇಶವಿದೇಶದ ಪತ್ರಿಕಾ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಪ್ರಧಾನಿ ನೆಹರೂ ಒಂದು ಉತ್ತಮ ಸಂಪ್ರದಾಯವನ್ನು ಬೆಳೆಸಿದ್ದರು.

ನೆಹರೂ ಅವರ ಷಷ್ಠಬ್ದಿ ಸಮಾರಂಭದಲ್ಲಿ ಸರ್ದಾರ್‌ ಪಟೇಲರು ಹೇಳಿದ ಮಾತುಗಳು ನೆಹರೂ ಅವರ ನಾಯಕತ್ವಕ್ಕೆ ಹಿಡಿದ ಕನ್ನಡಿಯಂತಿದ್ದವು: ‘‘ದೇಶಕ್ಕೆ ಸ್ವಾತಂತ್ರ್ಯದ ಬೆಳಕು ಬರುವ ಹಿಂದಿನ ಮುಸ್ಸಂಜೆಯಲ್ಲಿಯೇ ಜವಾಹರಲಾಲರು ದೇಶದ ಪ್ರಖರವಾದ ಬೆಳಕಾಗಿ ಬಂದುದು ಒಂದು ಸಕಾಲಿಕ ಬೆಳವಣಿಗೆ. ಸ್ವಾತಂತ್ರ್ಯಾನಂತರ ಒಂದರ ಮೇಲೆ ಇನ್ನೊಂದರಂತೆ ವಿಷಮಪರಿಸ್ಥಿತಿಗಳು ನಮ್ಮನ್ನು ಕಾಡಿದಾಗ ಅವರು ನಮ್ಮ ನಂಬಿಕೆಗಳನ್ನು ಎತ್ತಿ ಹಿಡಿದರು, ನಮ್ಮ ಜನಾಂಗದ ನಾಯಕತ್ವವನ್ನು ವಹಿಸಿದರು. ಈ ಎರಡು ಅತ್ಯಂತ ಕಠಿಣವಾದ ವರ್ಷಗಳಲ್ಲಿ ಅವರು ದೇಶದ ಸ್ಥಿರತೆಗೆ ಎಷ್ಟು ಕಷ್ಟಪಟ್ಟಿದ್ದಾರೆಂಬುದು ಅವರ ಅತ್ಯಂತ ನಿಕಟವರ್ತಿಯಾಗಿರುವ ನನಗಿಂತ ಹೆಚ್ಚು ಇನ್ಯಾರಿಗೂ ತಿಳಿದಿಲ್ಲ.’’ ಭಾರತದ ನಂತರ ಸ್ವತಂತ್ರವಾದ ಏಶ್ಯ, ಆಫ್ರಿಕಾ ಮತ್ತು ಮಧ್ಯ ಏಶ್ಯದ ಅನೇಕ ದೇಶಗಳಲ್ಲಿ ನಿರಂತರ ರಾಜಕೀಯ ಅಸ್ಥಿರತೆ, ಸರ್ವಾಧಿಕಾರಿಗಳಿಂದ ನಾಗರಿಕ ಹಕ್ಕುಗಳ ದಮನ ನಡೆಯುತ್ತಾ ಇದ್ದು ಈ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವು ಹೆಸರಿಗೆ ಮಾತ್ರ ಉಳಿದಿದೆೆ. 1991ರಲ್ಲಿ ಸೋವಿಯತ್ ಒಕ್ಕೂಟ ವಿಭಜನೆ ಹೊಂದಿ ಹುಟ್ಟಿದ ಅನೇಕ ಐರೋಪ್ಯ ದೇಶಗಳಲ್ಲಿ ಇಂದು ಸರ್ವಾಧಿಕಾರಗಳು ತಲೆ ಎತ್ತಿವೆ. ಈ ದೇಶಗಳಿಗೆ ಹೋಲಿಸಿದರೆ, 1975-77ರ ಕಾಲಘಟ್ಟವನ್ನು ಹೊರತುಪಡಿಸಿ, ಭಾರತದಲ್ಲಿ ಪ್ರಜಾತಂತ್ರವು ಸ್ಥಿರವಾಗಿ ಉಳಿದಿದೆ ಎಂಬುದು ಉಲ್ಲೇಖನೀಯ. ಜೂನ್ 2016ರಲ್ಲಿ ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಕೆಲವು ಮಾತುಗಳು ಚಿಂತನಾರ್ಹ, ಅವುಗಳು ಹೀಗಿವೆ:

‘‘ಭಾರತವು ಸ್ವತಂತ್ರವಾದಾಗ ನಮ್ಮ ಭವಿಷ್ಯದ ಬಗ್ಗೆ ಆತಂಕಗಳಿದ್ದವು, ಆದರೆ ನಾವು ಪ್ರಜಾತಂತ್ರದಲ್ಲಿ ವಿಶ್ವಾಸವಿರಿಸಿದೆವು. ವಾಸ್ತವಿಕವಾಗಿ ಭಾರತವು ವಿಫಲರಾಷ್ಟ್ರವಾಗಲಿದೆ ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ ನಾವು ವಿಚಲಿತರಾಗಲಿಲ್ಲ.
ನಮ್ಮ ಸ್ಥಾಪಕರು ಸ್ವಾತಂತ್ರ್ಯ, ಪ್ರಜಾತಂತ್ರ ಮತ್ತು ಸಮಾನತೆಗಳೇ ಆತ್ಮವಾಗಿರುವ ಹೊಸ ರಾಷ್ಟ್ರವನ್ನು ಕಟ್ಟಿದರು. ಅದರ ಜೊತೆಗೆ ಅವರು ನಮ್ಮ ಅನಾದಿ ಕಾಲದ ವೈವಿಧ್ಯಗಳನ್ನು ಕಾಪಾಡಿಕೊಂಡರು.

ಇಂದು, ದೇಶದ ಬೀದಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿ, ಅದರ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಸರ್ವಧರ್ಮಗಳ ಸಮನ್ವಯ ಮತ್ತು ನೂರಾರು ಭಾಷೆಗಳ ಸುಶ್ರಾವ್ಯತೆಯನ್ನು ಗಮನಿಸಬಹುದು. ಭಾರತವು ಒಂದಾಗಿ ಜೀವಿಸುತ್ತಿದೆ, ಒಂದಾಗಿ ಬೆಳೆಯುತ್ತಿದೆ, ಏಕತೆಯನ್ನು ಹಬ್ಬವಾಗಿ ಆಚರಿಸುತ್ತಿದೆ.’’

ಈ ಹಬ್ಬಕ್ಕೆ ಬುನಾದಿ ಹಾಕಿದವರು 17 ವರ್ಷ ಆಳಿದ ನೆಹರೂ ಅವರು ಎಂಬುದು ವಾಸ್ತವ. ಒಟ್ಟಿನಲ್ಲಿ ಭಾರತದಲ್ಲಿ ರಾಜಕೀಯ ಸ್ಥಿರತೆ ಮತ್ತು ಪ್ರಜಾತಂತ್ರದ ಭದ್ರತೆಗೆ ಹಾಗೂ ಆ ಮೂಲಕ 20-21 ನೇ ಶತಮಾನದಲ್ಲಿ ಜಗತ್ತಿನಲ್ಲಿ ಒಂದು ಪ್ರಮುಖ ಶಕ್ತಿಯಾಗಿ ಪ್ರವರ್ಧಮಾನವಾಗಲು ಪ್ರಮುಖ ಕೊಡುಗೆ ನೀಡಿದವರು ನೆಹರೂ. ಇಂದಿನ ಪೀಳಿಗೆಯವರು ಇದನ್ನು ಅರ್ಥಮಾಡಿಕೊಳ್ಳಬೇಕಾದ ತುರ್ತು ನಮ್ಮ ಮುಂದಿದೆ.

Writer - ಟಿ.ಆರ್. ಭಟ್

contributor

Editor - ಟಿ.ಆರ್. ಭಟ್

contributor

Similar News