ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮನೆಯಲ್ಲಿ ದಾಂಧಲೆ: ನಾಲ್ವರು ಆರೋಪಿಗಳ ಬಂಧನ

Update: 2021-11-19 17:53 GMT

ಡೆಹ್ರಾಡೂನ್, ನ. 19: ಉತ್ತರಾಖಂಡದ ನೈನಿತಾಲ್ ನಗರದಲ್ಲಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ ಆರೋಪದಲ್ಲಿ ಗುರುವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ‌

ಹಿಂದುತ್ವವನ್ನು ಭಯೋತ್ಪಾದಕ ಗುಂಪುಗಳಾದ ಐಸಿಸ್ ಹಾಗೂ ಬೋಕೋ ಹರಾಮ್‌ನೊಂದಿಗೆ ಹೋಲಿಕೆ ಮಾಡಿದ, ಅಯೋಧ್ಯೆ ತೀರ್ಪು ಕುರಿತ ಖುರ್ಷೀದ್ ಅವರ ಪುಸ್ತಕದ ವಿವಾದದ ನಡುವೆ ಈ ಘಟನೆ ಸೋಮವಾರ ನಡೆದಿದೆ. ಖುರ್ಷಿದ್ ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ.ದಿಲ್ಲಿಯಲ್ಲಿ ಇಬ್ಬರು ವಕೀಲರು ಖುರ್ಷಿದ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. 

ಗುಂಪೊಂದು ಸೋಮವಾರ ಖುರ್ಷಿದ್ ನಿವಾಸಕ್ಕೆ ತೆರಳಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿತ್ತು ಎಂದು ಕುಮಾನ್ ಡಿಐಜಿ ನಿಲೇಶ್ ಆನಂದ್ ಭರಣೆ ಅವರು ಹೇಳಿದ್ದಾರೆ. ಖುರ್ಷಿದ್ ನಿವಾಸದಲ್ಲಿ ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಅಲ್ಲಿದ್ದ ಸೊತ್ತಿನ ವಾರಸುದಾರರು ಅವರನ್ನು ಪ್ರಶ್ನಿಸಿದ್ದರು. ತನ್ನ ನಿವಾಸದ ಮೇಲೆ ದಾಳಿ ನಡೆದ ಬಳಿಕ ಬೆಂಕಿಯ ಜ್ವಾಲೆಗಳು, ಹಾನಿಯಾದ ಕಿಟಕಿ ಹಾಗೂ ಬಾಗಿಲುಗಳ ಚಿತ್ರ ಹಾಗೂ ವೀಡಿಯೊಗಳನ್ನು ಖುರ್ಷಿದ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದರು. 

ಈ ಘಟನೆಗೆ ಸಂಬಂಧಿಸಿ ಪೊಲೀಸರು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಗುರುತಿಸಿ ಬಂಧಿಸಲು ಮೂರು ತಂಡಗಳನ್ನು ರೂಪಿಸಿದ್ದರು. ಆರೋಪಿಗಳಲ್ಲಿ ಚಂದನ್ ಸಿಂಗ್ ಲೋಧಿಯಾಲ್, ಉಮೇಶ್ ಮೆಹ್ತಾ, ರಾಜ್ಕುಮಾರ್ ಮೆಹ್ತಾ, ಕೃಷ್ಣ ಸಿಂಗ್ ಬಿಸ್ತ್ ರಾಜ್ ಕುಮಾರ್ ಮೆಹ್ತಾರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ತಾನು ಮತ್ತು ತನ್ನ ಸಹವರ್ತಿಗಳು ಖುರ್ಷಿದ್ ಅವರ ಮನೆಯ ಒಳಗೆ ಅವರ ಪ್ರತಿಕೃತಿ ದಹಿಸಿದೆವು ಹಾಗೂ ಘೋಷಣೆಗಳನ್ನು ಕೂಗಿದೆವು ಎಂದು ಬಂಧಿತ ಆರೋಪಿಯಲ್ಲಿ ಓರ್ವ ಪೊಲೀಸರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News