ಉತ್ತರಪ್ರದೇಶ: ಶವಾಗಾರದ ಫ್ರೀಝರ್ ನಲ್ಲಿದ್ದ ‘ಮೃತ ವ್ಯಕ್ತಿ’ 7 ಗಂಟೆಗಳ ಬಳಿಕ ಜೀವಂತ

Update: 2021-11-21 17:32 GMT

ಮೊರದಾಬಾದ್ (ಉ.ಪ್ರ.), ನ. 21: ಮೃತಪಟ್ಟನೆಂದು ಶವಾಗಾರದ ಫ್ರೀಝರ್ನಲ್ಲಿ ಇರಿಸಲಾಗಿದ್ದ 40 ವರ್ಷದ ವ್ಯಕ್ತಿಯೋರ್ವರನ್ನು ಸುಮಾರು 7 ಗಂಟೆಗಳ ಬಳಿಕ ಜೀವಂತವಾಗಿ ಹೊರತೆಗೆದ ವಿಲಕ್ಷಣ ಘಟನೆ ಮೊರದಾಬಾದ್ ನಲ್ಲಿ ನಡೆದಿದೆ.

ಗುರುವಾರ ರಾತ್ರಿ ಮೋಟಾರು ಬೈಕ್ ಢಿಕ್ಕಿಯಾಗಿ ಎಲೆಕ್ಟ್ರಿಷಿಯನ್ ಶ್ರೀಕೇಶ್ ಕುಮಾರ್ ಅವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಮರು ದಿನ ಆಸ್ಪತ್ರೆಯ ಸಿಬ್ಬಂದಿ ಮೃತದೇಹವನ್ನು ಶವಾಗಾರದ ಫ್ರೀಝರ್ ನಲ್ಲಿ ಇರಿಸಿದ್ದರು.

ಮೃತದೇಹವನ್ನು ಗುರುತಿಸಿ ಹಾಗೂ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿ ಕುಟುಂಬದ ಸದಸ್ಯರು ಸಹಿ ಹಾಕಿದ ದಾಖಲೆಗಳನ್ನು ಪೊಲೀಸರಿಗೆ ಸಮಾರು 7 ಗಂಟೆಯ ಬಳಿಕ ಸಲ್ಲಿಸಬೇಕಾಗಿತ್ತು. ಈ ನಡುವೆ ಶ್ರೀಕೇಶ್ ಕುಮಾರ್ ಅವರ ಅತ್ತಿಗೆ ಮಧು ಬಾಲ ಎಂಬವರು ಕುಮಾರ್ ಅವರ ಮೃತದೇಹದಲ್ಲಿ ಚಲನೆ ಗುರುತಿಸಿದರು.

ವೈರಲ್ ಆದ ವೀಡಿಯೊದಲ್ಲಿ ಮಧು ಬಾಲಾ, ‘‘ಅವರು ಸತ್ತಿಲ್ಲ. ಇದು ಹೇಗೆ ಸಂಭವಿಸಿತು? ನೋಡಿ, ಅವರು ಏನನ್ನೋ ಹೇಳಲು ಬಯಸುತ್ತಿದ್ದಾರೆ, ಅವರು ಉಸಿರಾಡುತ್ತಿದ್ದಾರೆ’’ ಎಂದು ಹೇಳುವುದು ಕೇಳಿ ಬಂದಿದೆ.

‘‘ತುರ್ತು ನಿಗಾ ಘಟಕದ ವೈದ್ಯಕೀಯ ಅಧಿಕಾರಿ ಮುಂಜಾನೆ 3 ಗಂಟೆಗೆ ರೋಗಿಯನ್ನು ಪರೀಕ್ಷಿಸಿದ್ದಾರೆ. ಆಗ ಹೃದಯ ಬಡಿತ ಇರಲಿಲ್ಲ. ಅವರು ಹಲವು ಬಾರಿ ಪರೀಕ್ಷೆ ಮಾಡಿದ್ದಾರೆ. ಅನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಆದರೆ, ಬೆಳಗ್ಗೆ ಪೊಲೀಸರ ತಂಡ ಹಾಗೂ ಅವರ ಕುಟುಂಬ ಕುಮಾರ್ ಜೀವಂತ ಇರುವುದನ್ನು ಪತ್ತೆ ಮಾಡಿದರು. ತನಿಖೆಗೆ ಆದೇಶಿಸಲಾಗಿದೆ. ಈಗ ಕುಮಾರ್ ಅವರ ಜೀವ ಉಳಿಸುವುದು ನಮ್ಮ ಆದ್ಯತೆ’’ ಎಂದು ಮೊರದಾಬಾದ್ನ ಮುಖ್ಯ ವೈದ್ಯಾಧಿಕಾರಿ ಡಾ. ಶಿವ ಸಿಂಗ್ ಅವರು ಹೇಳಿದ್ದಾರೆ.
 
ಇದು ಒಂದು ಅಪರೂಪದಲ್ಲಿ ಅಪರೂಪದ ಪ್ರಕರಣ. ಇದನ್ನು ನಾವು ನಿರ್ಲಕ್ಷ ಎಂದು ಕರೆಯಲು ಸಾಧ್ಯವಿಲ್ಲ. ಕುಮಾರ್ ಅವರು ಮೀರತ್ನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಅವರಿಗೆ ಇನ್ನಷ್ಟೇ ಪ್ರಜ್ಞೆ ಬರಬೇಕಾಗಿದೆ ಎಂದು ಮಧು ಬಾಲ ಹೇಳಿದ್ದಾರೆ. 

‘‘ಫ್ರೀಝರ್ ನಲ್ಲಿ ಇರಿಸಿ ಶ್ರೀಕೇಶ್ ಅವರನ್ನು ಬಹುತೇಕ ಕೊಂದ ವೈದ್ಯರ ನಿರ್ಲಕ್ಷದ ವಿರುದ್ಧ ನಾವು ದೂರು ದಾಖಲಿಸಲಿದ್ದೇವೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News