ಸಂಸತ್ ಅಧಿವೇಶನದ ವೇಳೆ ಕಾಂಗ್ರೆಸ್ ನಿಂದ ಮೆಗಾ ರ‍್ಯಾಲಿ: ಪ್ರಿಯಾಂಕಾ ಗಾಂಧಿ ಯೋಜನೆ
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವಾಗಲೇ ಡಿಸೆಂಬರ್ ಮೊದಲ ವಾರದಲ್ಲಿ ಇಂಧನ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆಯ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ದಿಲ್ಲಿಯಲ್ಲಿ ಮೆಗಾ ರ‍್ಯಾಲಿ ನಡೆಸಲು ಯೋಜಿಸಿದೆ. ಇದು 2019 ರ ಬಳಿಕ ಕಾಂಗ್ರೆಸ್ ನ ಮೊದಲ ದೊಡ್ಡ ರ್ಯಾಲಿಯಾಗಲಿದೆ.
ನರೇಂದ್ರ ಮೋದಿ ಸರಕಾರದ ಅಡಿಯಲ್ಲಿ ಹಣದುಬ್ಬರದ ವಿರುದ್ಧದ ಕಾಂಗ್ರೆಸ್ ಪಕ್ಷದ ಎರಡು ವಾರಗಳ ಜನ ಜಾಗರಣ ಅಭಿಯಾನವನ್ನು ಈ ರ್ಯಾಲಿಯು ಮುಕ್ತಾಯಗೊಳಿಸಲಿದೆ.
ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರ್ಯಾಲಿಯನ್ನು ಯೋಜಿಸಲು ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿದರು.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು, ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಪಕ್ಷದ ನಾಯಕ ಸಚಿನ್ ಪೈಲಟ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ರ‍್ಯಾಲಿಗಾಗಿ ರಾಮಲೀಲಾ ಮೈದಾನಕ್ಕಾಗಿ ಕಾಂಗ್ರೆಸ್‌ನ ಮನವಿಯನ್ನು ಕೇಂದ್ರವು ಇನ್ನೂ ಪುರಸ್ಕರಿಸಿಲ್ಲ. ಅನುಮತಿ ಸಿಗದಿದ್ದರೆ ದ್ವಾರಕಾ ಮೈದಾನಕ್ಕೆ ತೆರಳಿ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ಯೋಜಿಸಿದೆ.