ಕುವೈಟ್: ಪ್ರಧಾನಿಯಾಗಿ ಶೇಖ್ ಸಬಾ ಮರುನೇಮಕ
ಕುವೈಟ್ ಸಿಟಿ, ನ.23: ಕುವೈಟ್ ನ ಪ್ರಧಾನಿಯನ್ನಾಗಿ ಶೇಖ್ ಸಬಾ ಅಲ್-ಖಾಲಿದ್ ರನ್ನು ಮರು ನೇಮಕಗೊಳಿಸಿದ್ದು ಅವರಿಗೆ
ಸಚಿವ ಸಂಪುಟ ರಚಿಸುವ ಹೊಣೆ ವಹಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ‘ಕುನಾ’ ಸುದ್ಧಿಸಂಸ್ಥೆ ವರದಿ ಮಾಡಿದೆ.
ಚುನಾಯಿತ ಸಂಸತ್ತಿನೊಂದಿಗಿನ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದ ಹಿನ್ನೆಲೆಯಲ್ಲಿ, 2019ರಿಂದ ಆಡಳಿತದಲ್ಲಿದ್ದ ಖಾಲಿದ್ ನೇತೃತ್ವದ ಸರಕಾರ ನವೆಂಬರ್ 8ರಂದು ರಾಜೀನಾಮೆ ನೀಡಿತ್ತು. ಇದೀಗ ಅವರನ್ನು ಮತ್ತೆ ಪ್ರಧಾನಮಂತ್ರಿಯಾಗಿ ನೇಮಿಸಿ ರಾಜಕುಮಾರ ಶೇಖ್ ಮೆಶಲ್ ಅಲ್ಅಹ್ಮದ್ ಅಲ್ ಸಬಾ ರಾಜಾಜ್ಞೆ ಜಾರಿಗೊಳಿಸಿದ್ದಾರೆ. ಕಳೆದ ವಾರ ಕುವೈಟ್‌ನ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್ ಸಬಾ ತಮ್ಮ ಕೆಲವು ಪ್ರಮುಖ ಸಾಂವಿಧಾನಿಕ ಕರ್ತವ್ಯಗಳನ್ನು (ಪ್ರಧಾನಿಯ ಆಯ್ಕೆ, ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸುವುದು ಸೇರಿದಂತೆ) ತಮ್ಮ ನಿಯೋಜಿತ ಉತ್ತರಾಧಿಕಾರಿ ಶೇಖ್ ಮೆಶಲ್ ಅಲ್ಅಹ್ಮದ್ ಅಲ್ ಸಬಾಗೆ ವಹಿಸಿದ್ದರು.
ಇದಕ್ಕೂ ಮುನ್ನ, ಸರಕಾರ ಹಾಗೂ ವಿಪಕ್ಷಗಳ ಸಂಸದರ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸುವ ಕ್ರಮವಾಗಿ ಸರಕಾರದ ರಾಜೀನಾಮೆಯನ್ನು ಸ್ವೀಕರಿಸಿದ್ದರು ಹಾಗೂ ರಾಜಕೀಯ ವಿರೋಧಿಗಳಿಗೆ ಕ್ಷಮಾದಾನ ಘೋಷಿಸಿದ್ದರು.
ಕೊರೋನ ಸೋಂಕು ನಿರ್ವಹಣೆ ಬಗ್ಗೆ ಹಾಗೂ ಭ್ರಷ್ಟಾಚಾರದ ಆರೋಪದ ವಿಷಯದಲ್ಲಿ ಸರಕಾರದ ವಿರುದ್ಧ ವಿಪಕ್ಷದ ಹಲವು ಸಂಸದರು ಟೀಕೆ ನಡೆಸಿದ್ದರು. ಇದರಿಂದ ಕುವೈಟ್ ನ ಆರ್ಥಿಕ ಸುಧಾರಣೆಯ ಪ್ರಯತ್ನಗಳಿಗೆ ಹಿನ್ನಡೆಯಾಗಿತ್ತು.