ಕೋವಿಡ್ ಲಸಿಕೆಯ ಕನಿಷ್ಠ 1 ಡೋಸ್ ಪಡೆದವರಿಗೆ ಸೌದಿ ಪ್ರವೇಶಿಸಲು ಅನುಮತಿ
ಕೈರೋ, ನ.28: ಕೋವಿಡ್19 ನಿರೋಧಕ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ಎಲ್ಲಾ ಪ್ರವಾಸಿಗರಿಗೆ ದೇಶವನ್ನು ಪ್ರವೇಶಿಸಲು ಅವಕಾಶ ನೀಡುವುದಾಗಿ ಸೌದಿ ಆರೇಬಿಯ ಶನಿವಾರ ತಿಳಿಸಿದೆ. ಒಮಿಕ್ರಾನ್ ಪ್ರಭೇದದ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸೌದಿ ಆರೇಬಿಯವು ಶನಿವಾರದಿಂದ ಏಳು ಆಫ್ರಿಕ ರಾಷ್ಟ್ರಗಳಿಂದ ವಿಮಾನ ಹಾರಾಟವನ್ನು ನಿಷೇಧಿಸಿದೆ.
ಮುಂದಿನ ಶನಿವಾರದಿಂದ ಪ್ರಯಾಣಿಕರಿಗೆ ಸೌದಿ ಆರೇಬಿಯ ಪ್ರವೇಶಿಸಲು ಅನುಮತಿ ನೀಡಲಾಗುವುದು ಹಾಗೂ ಮೂರು ದಿನಗಳ ಕಾಲ ಅವರು ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯವಿರುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೆ ಆಫ್ರಿಕದ ಏಳು ದೇಶಗಳಿಗೆ ವಿಮಾನಯಾನ ಅಮಾನತಿನಲ್ಲಿಟ್ಟಿರುವ ಬಗ್ಗೆ ಯಾವುದೇ ವಿವರಣೆಯನ್ನು ಅದು ನೀಡಿಲ್ಲ.
ಒಮಿಕ್ರಾನ್ ರೂಪಾಂತರಿ ವೈರಸ್ ಹರಡುವ ಅಪಾಯದ ಹಿನ್ನೆಲೆಯಲ್ಲಿ ಸೌದಿ ಆರೇಬಿಯವು ಶುಕ್ರವಾರದಿಂದ ಆಫ್ರಿಕನ್ ರಾಷ್ಟ್ರಗಳಾದ ದಕ್ಷಿಣ ಆಫ್ರಿಕ, ನಮೀಬಿಯ, ಬೊಟ್ಸ್‌ವಾನ, ಝಿಂಬಾಬ್ವೆ, ಮೊಝಾಂಬಿಕ್, ಲೆಸೊಥೊ ಹಾಗೂ ಎಸ್ವಾಟಿನಿಯಿಂದ ವಿಮಾನಗಳ ಹಾರಾಟವನ್ನು ಅಮಾನತಿನಲ್ಲಿರಿಸಿದೆ.