ಆಫ್ರಿಕಾದ 7 ದೇಶಗಳಿಂದ ಪ್ರಯಾಣ ನಿಷೇಧ: ನೂತನ ಮಾರ್ಗಸೂಚಿ ಪ್ರಕಟಿಸಿದ ಯುಎಇ
ಅಬುಧಾಬಿ, ನ.29: ಕೊರೋನ ಸೋಂಕಿನ ಹೊಸ ಪ್ರಬೇಧ ಒಮಿಕ್ರಾನ್ ಪತ್ತೆಯಾದ ಬಳಿಕ ನಡೆಯುತ್ತಿರುವ ಎಲ್ಲಾ ಬೆಳವಣಿಗೆಯ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಯುಎಇ ಅಧಿಕಾರಿಗಳು ಜನತೆಗೆ ಭರವಸೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ, ನಮೀಬಿಯಾ, ಬೋಟ್ಸ್ವಾನ, ಲೆಸೊಋಒ, ಎಸ್ವಾಟಿನಿ, ಮೊಝಾಂಬಿಕ್ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ನಿಷೇಧ ವಿಧಿಸಲಾಗಿದೆ. ಜೊತೆಗೆ, ಯುಎಇಗೆ ಪ್ರಯಾಣಿಸುವ 14 ದಿನ ಮೊದಲು ಈ ದೇಶಗಳಿಗೆ ಆಗಮಿಸಿದ್ದರೆ ಅಂತಹ ಪ್ರಯಾಣಿಕರಿಗೂ ನಿಷೇಧ ವಿಧಿಸಲಾಗಿದೆ.
ಯುಎಇ ಪ್ರಜೆಗಳು, ರಾಜತಾಂತ್ರಿಕ ನಿಯೋಗದವರು, ಯುಇಎ ಹಾಗೂ ಇತರ ದೇಶಗಳ ನಡುವಿನ ಅಧಿಕೃತ ನಿಯೋಗ, ಗೋಲ್ಡನ್ ವೀಸಾ ಹೊಂದಿದವರಿಗೆ ಇದರಿಂದ ವಿನಾಯಿತಿ ಇದೆ. ಆದರೆ ಇವರು ಪ್ರಯಾಣಕ್ಕಿಂತ 48 ಗಂಟೆ ನಡೆಸಿದ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು. ಅಲ್ಲದೆ, ಹೊರಡುವ ವಿಮಾನ ನಿಲ್ದಾಣದಲ್ಲಿ ಪ್ರಯಾಣಕ್ಕಿಂತ 6 ಗಂಟೆ ಮೊದಲು ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಯುಎಇಗೆ ಬಂದ ಮೇಲೆ ಮತ್ತೊಂದು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಯುಇಎ ಪ್ರಜೆಗಳಿಗೆ, ರಾಜತಾಂತ್ರಿಕ ನಿಯೋಗದವರಿಗೆ ಮತ್ತು ಗೋಲ್ಡನ್ ವೀಸಾ ಹೊಂದಿದವರಿಗೆ 10 ದಿನದ ಕ್ವಾರಂಟೈನ್ ಮತ್ತು ದೇಶ ಪ್ರವೇಶಿಸಿದ 9ನೇ ದಿನ ಪಿಸಿಆರ್ ಪರೀಕ್ಷೆ ಕಡ್ಡಾಯ. ಆದರೆ ಅಧಿಕೃತ ನಿಯೋಗದವರು , ಪರೀಕ್ಷೆಯ ವರದಿ ಬರುವವರೆಗೆ ವಿಮಾನ ನಿಲ್ದಾಣದಲ್ಲಿ ಕ್ವಾರಂಟೈನ್‌ಗೆ ಒಳಪಡಬೇಕು. ಇವರಿಗೆ 10 ದಿನದ ಕ್ವಾರಂಟೈನ್ ಇರುವುದಿಲ್ಲ.
ಪ್ರಯಾಣ ನಿಷೇಧ ಪಟ್ಟಿಯಲ್ಲಿರುವ 7 ದೇಶಗಳ ಪ್ರಯಾಣಿಕರು ಬೇರೊಂದು ದೇಶದ ಮೂಲಕ ಯುಇಎ ಪ್ರವೇಶಿಸಬೇಕಿದ್ದರೆ, ಅವರು 3ನೇ ದೇಶದಲ್ಲಿ ಕನಿಷ್ಟ 14 ದಿನ ಇದ್ದ ಬಳಿಕ ಯುಎಇಗೆ ಆಗಮಿಸಬೇಕು.
ತುರ್ತು ಚಿಕಿತ್ಸೆ ಸಂದರ್ಭ, ಸರಕಾರಿ ನಿಯೋಗ ಅಥವಾ ಸ್ಕಾಲರ್‌ಶಿಪ್ ಸಂಬಂಧಿಸಿದ ಪ್ರಯಾಣ ಹೊರತುಪಡಿಸಿ, ಉಳಿದಂತೆ ಯುಎಇ ಪ್ರಜೆಗಳು ಈ 7 ದೇಶಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಯುಇಎ ವಿಮಾನಯಾನ ಸಂಸ್ಥೆ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ಮ ಡರ್ಬನ್ ಮತ್ತು ಕೇಪ್‌ಟೌನ್, ಝಿಂಬಾಬ್ವೆಯ ಹರಾರೆ ಮತ್ತು ಝಾಂಬಿಯಾದ ಲುಸಾಕಾ ವಿಮಾನ ನಿಲ್ದಾಣಕ್ಕೆ ವಿಮಾನ ಪ್ರಯಾಣವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.