ತೈಲ ಉತ್ಪಾದನೆ ಹೆಚ್ಚಳ: ಒಪೆಕ್ ಪ್ಲಸ್-ಅಮೆರಿಕ ಒಪ್ಪಂದ?
ರಿಯಾದ್,ಡಿ.3: ಗಗನಕ್ಕೇರುತ್ತಿರುವ ಕಚ್ಚಾ ತೈಲ ಬೆಲೆಯೇರಿಕೆ ನಿಯಂತ್ರಣ ಕುರಿತು ಅಮೆರಿಕ ಹಾಗೂ ಸೌದಿ ಆರೇಬಿಯ ನೇತೃತ್ವದ ಒಪೆಕ್ ಹಾಗೂ ಇತರ ತೈಲ ರಫ್ತುದಾರ ರಾಷ್ಟ್ರಗಳ ಒಕ್ಕೂಟದ ನಡುವೆ ಹಲವು ವಾರಗಳಿಂದ ಉಂಟಾಗಿದ್ದ ಬಿಕ್ಕಟ್ಟು ನಿವಾರಣೆಯಾಗಿದೆ. ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸುವುದಾಗಿ ಒಪೆಕ್ ಪ್ಲಸ್ ಒಕ್ಕೂಟ ಶುಕ್ರವಾರ ಘೋಷಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಜನವರಿಯಿಂದ ದಿನಕ್ಕೆ ನಾಲ್ಕು ಲಕ್ಷ ಬ್ಯಾರೆಲ್ ಹೆಚ್ಚುವರಿ ತೈಲವನ್ನು ಉತ್ಪಾದಿಸಲು ಸೌದಿ ಆರೇಬಿಯ ಹಾಗೂ ರಶ್ಯ ನೇತೃತ್ವದ ಒಪೆಕ್ ಪ್ಲಸ್ ಒಕ್ಕೂಟ ಪ್ರಕಟಿಸಿವೆ. ನೂತನ ಒಮೈಕ್ರಾನ್ ವೈರಸ್ ಹಾವಳಿ ಯಿಂದಾಗಿ ತೈಲಕ್ಕೆ ಬೇಡಿಕೆ ಕುಸಿಯುವ ಸಾಧ್ಯತೆಯ ಹೊರತಾಗಿಯೂ ಅವು ಈ ನಿರ್ಧಾರವನ್ನು ಘೋಷಿಸಿವೆ. ಆದರೆ ಒಂದು ವೇಳೆ ಪರಿಸ್ಥಿತಿಯಲ್ಲಿ ಬದಲಾವಣೆಯಾದಲ್ಲಿ ಯಾವುದೇ ಕ್ಷಣದಲ್ಲೂ ಒಪೆಕ್ ಪ್ಲಸ್ ಒಕ್ಕೂಟವು ತಮ್ಮ ನಿರ್ಧಾರವನ್ನು ಪರಾಮರ್ಶಿಸಲಿವೆಯೆಂದು ಮೂಲಗಳು ಹೇಳಿವೆ.
ತೈಲ ಬೆಲೆಯೇರಿಕೆಯನ್ನು ಇಳಿಸುವುದಕ್ಕಾಗಿ ಹೆಚ್ಚುವರಿ ತೈಲ ಉತ್ಪಾದಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಕರೆ ನೀಡಿದ್ದರೂ, ಒಪೆಕ್ ಅದಕ್ಕೆ ಹಿಂದೇಟು ಹಾಕುತ್ತಿತ್ತು. ಇದೀಗ ತೈಲ ಉತ್ಪಾದನೆಯಲ್ಲಿ ಹೆಚ್ಚಳದ ನಿರ್ಧಾರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ.