ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಶೇ. 700ಕ್ಕೂ ಅಧಿಕ ಏರಿಕೆ: ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರಕಾರ
ಹೊಸದಿಲ್ಲಿ, ಡಿ. 4: ಕಳೆದ 14 ದಿನಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅತ್ಯಧಿಕ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಹಲವು ಪತ್ರಗಳನ್ನು ಬರೆದಿದೆ.
ಈ ರಾಜ್ಯಗಳ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿಂದ ಅತ್ಯಧಿಕ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ದೇಶದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಗೆ ಶೇ. 55.87 ಪಾಲು ನೀಡಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಪತ್ರದಲ್ಲಿ ಹೇಳಿದ್ದಾರೆ.
ಕೊರೋನ ವೈರಸ್ ರೂಪಾಂತರಿ ಒಮೈಕ್ರಾನ್‌ನ ಮೊದಲ ಎರಡು ಪ್ರಕರಣಗಳು ಪತ್ತೆಯಾದ ಕರ್ನಾಟಕಕ್ಕೆ ಕೂಡ ಪತ್ರ ಬರೆಯಲಾಗಿದೆ.
‘‘ಬೆಂಗಳೂರು ನಗರದಲ್ಲಿ ವಾರದಲ್ಲಿ ಹೊಸ ಸಾವಿನ ಪಕರಣಗಳು ಏರಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ. ನವೆಂಬರ್ 25ರಂದು ಅಂತ್ಯಗೊಂಡ ವಾರದಲ್ಲಿ 8 ಹೊಸ ಸಾವಿನ ಪ್ರಕರಣಗಳು ವರದಿಯಾಗಿದ್ದರೆ, ಡಿಸೆಂಬರ್ 2ರಂದು ಅಂತ್ಯಗೊಂಡ ವಾರದಲ್ಲಿ 14 ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ’’ ಎಂದು ರಾಜೇಶ್ ಭೂಷಣ್ ಪತ್ರದಲ್ಲಿ ಹೇಳಿದ್ದಾರೆ.
ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನವೆಂಬರ್ 25ರಂದು ಅಂತ್ಯಗೊಂಡ ವಾರದಿಂದ ಡಿಸೆಂಬರ್ 2ರಂದು ಅಂತ್ಯಗೊಂಡ ವಾರದ ವರೆಗೆ ಕೋವಿಡ್ ಪ್ರಕರಣಗಳಲ್ಲಿ ಶೇ. 152ಕ್ಕೆ ಏರಿಕೆಯಾಗಿರುವುದು ವರದಿಯಾಗಿದೆ.
ಕರ್ನಾಟಕ ಅಲ್ಲದೆ, ಒಡಿಶಾ, ಜಮ್ಮು ಹಾಗೂ ಕಾಶ್ಮೀರ, ಮಿರೆರಾಂ, ಕೇರಳ, ತಮಿಳುನಾಡಿಗೆ ಕೂಡ ಆರೋಗ್ಯ ಸಚಿವಾಲಯ ಪತ್ರ ರವಾನಿಸಿದೆ. ಮಿರೆರಾಂನ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಅತ್ಯಧಿಕ ಶೇ. 17ಕ್ಕೆ ಏರಿಕೆಯಾಗಿದೆ. ಚಂಪಾಯಿ ಅಂತಹ ಒಂದು ಜಿಲ್ಲೆ.
‘‘ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸೀಕಾಕರಣ-ಕೋವಿಡ್ ಸೂಕ್ತ ನಡಳಿಕೆಯ ತಂತ್ರಕ್ಕೆ ಅನುಗುಣವಾಗಿ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುವುದು ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಹಾಗೂ ಸಾವಿನ ಪ್ರಮಾಣವನ್ನು ಇಳಿಕೆ ಮಾಡಲು ಅಗತ್ಯವಾಗಿದೆ’’ ಎಂದು ಭೂಷಣ್ ಅವರು ಮಿಝೊರಾಂ ಆರೋಗ್ಯ ಕಾರ್ಯದರ್ಶಿಗೆ ರವಾನಿಸಿದ ಪತ್ರದಲ್ಲಿ ಹೇಳಿದ್ದಾರೆ.
ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ. 666ಕ್ಕೆ ಏರಿಕೆಯಾಗಿದೆ. ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ. 736ಕ್ಕೆ ಏರಿಕೆಯಾಗಿದೆ ಎಂದು ಭೂಷಣ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.