ಜಾಹೀರಾತುಗಳನ್ನು ಪಡೆಯಬೇಕಾದರೆ ಹೆಚ್ಚು ಸಕಾರಾತ್ಮಕ ಸುದ್ದಿಗಳನ್ನು ತೋರಿಸಿ: ಪತ್ರಿಕೆಗಳಿಗೆ ಮಮತಾ ಸೂಚನೆ

Update: 2021-12-06 09:47 GMT

ಕೋಲ್ಕತಾ: ಪತ್ರಕರ್ತರೊಂದಿಗಿನ ಸಂವಾದದ ಸಂದರ್ಭದಲ್ಲಿ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳೀಯ ಪತ್ರಿಕೆಗಳು ಸರಕಾರದ ಬಗ್ಗೆ ಹೆಚ್ಚು “ಸಕಾರಾತ್ಮಕ ಸುದ್ದಿ” ಪ್ರಕಟಿಸಿದರೆ ಹೆಚ್ಚಿನ ಜಾಹೀರಾತುಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ ಎಂದು newslaundry.com ವರದಿ ಮಾಡಿದೆ.

ಸ್ಥಳೀಯ ಪತ್ರಕರ್ತರೊಬ್ಬರು ತಮ್ಮ ಗ್ರಾಮೀಣ ಪತ್ರಿಕೆಗೆ ಹೆಚ್ಚಿನ ಜಾಹೀರಾತು ಸಿಗುವುದಿಲ್ಲ ಎಂದು ಹೇಳಿದ್ದಕ್ಕೆ ಬ್ಯಾನರ್ಜಿ ಈರೀತಿ  ಪ್ರತಿಕ್ರಿಯೆ ನೀಡಿದರು.

"ಸರಕಾರ ಮಾಡುತ್ತಿರುವ ವಿಷಯಗಳ ಬಗ್ಗೆ ನೀವು ಹೆಚ್ಚು ಸಕಾರಾತ್ಮಕ ಸುದ್ದಿಗಳನ್ನು ಪ್ರಕಟಿಸಿದರೆ, ನಿಮಗೆ ಹೆಚ್ಚಿನ ಜಾಹೀರಾತುಗಳನ್ನು ನೀಡುವಂತೆ ನಾನು ವೈಯಕ್ತಿಕವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಹೇಳುತ್ತೇನೆ" ಎಂದು ಬ್ಯಾನರ್ಜಿ ಬಂಗಾಳಿಯಲ್ಲಿ ಉತ್ತರಿಸಿದರು. ಈ ಸಂವಾದವು ಯಾವಾಗ ನಡೆಯಿತು ಎಂಬುದನ್ನು ‘ನ್ಯೂಸ್‌ ಲಾಂಡ್ರಿʼ ಪರಿಶೀಲಿಸಿಲ್ಲ, ಆದರೂ ಅದರ ಕುರಿತು ವರದಿಯನ್ನು ನವೆಂಬರ್ 22 ರಂದು ಟ್ವೀಟ್ ಮಾಡಲಾಗಿದೆ. ಸರಕಾರ ಯಾವಾಗಲೂ ತನ್ನ ಒಳ್ಳೆಯ ಕಾರ್ಯಗಳು ಹಾಗೂ  ಕೆಲಸಗಳನ್ನು ಪ್ರಚಾರ ಮಾಡಲು ತನ್ನದೇ ಆದ ಯಂತ್ರೋಪಕರಣಗಳನ್ನು ಬಳಸುವುದಿಲ್ಲ ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.

"ಈ ಕಾರ್ಯಕ್ರಮವನ್ನು ಟಿವಿ ಮಾಧ್ಯಮಗಳು ಒಮ್ಮೆ ತೋರಿಸುತ್ತವೆ ಹಾಗೂ ಅಲ್ಲಿಗೆ ಬಿಡುತ್ತವೆ. ಆದರೆ ಗ್ರಾಮೀಣ ಪತ್ರಿಕೆಗಳು ಪ್ರತಿ ಮೂಲೆ ಮೂಲೆಯನ್ನು ತಲುಪಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

"ನೀವು ಧನಾತ್ಮಕ ಅಥವಾ ಋಣಾತ್ಮಕ ಸುದ್ದಿಗಳನ್ನು ಪ್ರಕಟಿಸುತ್ತೀರಾ ಎಂದು ನಿರ್ಣಯಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಪತ್ರಿಕೆಯ ಪ್ರತಿಯನ್ನು ಕಳುಹಿಸಿ" ಎಂದು ಅವರು ವರದಿಗಾರರಿಗೆ ತಿಳಿಸಿದರು., ನಂತರ ಮಾಧ್ಯಮ ಸಂಸ್ಥೆಯು ಹೆಚ್ಚಿನ ಜಾಹೀರಾತುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News