ಮಧ್ಯಪ್ರದೇಶದಲ್ಲಿ ಮೃತವ್ಯಕ್ತಿಗೆ ಲಸಿಕೆ ಪ್ರಮಾಣಪತ್ರ ವಿತರಣೆ!

Update: 2021-12-11 15:23 GMT

ರಾಜಗಡ(ಮ.ಪ್ರ),ಡಿ.11: ರಾಜಗಡ ಜಿಲ್ಲೆಯ ಬಿಯಾವೋರಾ ಪಟ್ಟಣದ ನಿವಾಸಿಯಾಗಿದ್ದ ಹಿರಿಯ ನಾಗರಿಕರೋರ್ವರಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿರುವ ಬಗ್ಗೆ ಸಂದೇಶ ಮತ್ತು ಪ್ರಮಾಣ ಪತ್ರ ಲಭಿಸಿವೆ.

ಪುರುಷೋತ್ತಮ ಶಾಕ್ಯವರ (78) ಅವರು ಮೇ ತಿಂಗಳಿನಲ್ಲಿ ನಿಧನರಾಗಿದ್ದಾರೆ. ಆದರೆ ಡಿ.1ರಂದು ಅವರು ಲಸಿಕೆಯ ಎರಡನೇ ಡೋಸ್ ಅನ್ನು ಪಡೆದಿದ್ದಾರೆ ಎಂಬ ಸಂದೇಶವು ಅವರ ಮೊಬೈಲ್ ಫೋನ್‌ಗೆ ಬಂದಿದೆ. ಈ ಅವಾಂತರ ಕಂಪ್ಯೂಟರ್ ದೋಷದಿಂದ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿ.3ರಂದು ಮೊಬೈಲ್ ಗೆ ಸಂದೇಶ ಬಂದಿತ್ತು ಮತ್ತು ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲೂ ಸಾಧ್ಯವಾಗಿದೆ ಎಂದು ತಿಳಿಸಿದ ಶಾಕ್ಯವರ ಪುತ್ರ ಫೂಲಸಿಂಗ್ ಶಾಕ್ಯವರ್,ತನ್ನ ತಂದೆ ಎ.8ರಂದು ಲಸಿಕೆಯ ಮೊದಲ ಡೋಸ್ ಪಡೆದಿದ್ದರು,ಮೇ 24ರಂದು ಇಂದೋರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದರು ಎಂದು ಹೇಳಿದರು.

ಈ ಬಗ್ಗೆ ತನಗೆ ಮಾಹಿತಿ ಲಭಿಸಿದೆ ಮತ್ತು ಅದರ ಕುರಿತು ವಿಚಾರಣೆ ನಡೆಯುತ್ತಿದೆ. ಕಂಪ್ಯೂಟರ್‌ನಲ್ಲಿಯ ತಾಂತ್ರಿಕ ದೋಷ ಇಂತಹ ಸಂದೇಶ ರವಾನೆಗೆ ಕಾರಣವಾಗಿರಬಹುದು ಎಂದು ಜಿಲ್ಲಾ ಲಸಿಕೆ ಅಧಿಕಾರಿ ಡಾ.ಪಿ.ಎಲ್.ಭಗೋಡಿಯಾ ಹೇಳಿದರು.

ಲಸಿಕೆ ನೀಡಿಕೆಯ ಬಗ್ಗೆ ತಪ್ಪು ದತ್ತಾಂಶಗಳನ್ನು ಒದಗಿಸುವ ಮೂಲಕ ರಾಜ್ಯ ಸರಕಾರವು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿರುವ ಬಿಯಾವೋರಾ ಕಾಂಗ್ರೆಸ್ ಶಾಸಕ ರಾಮಚಂದ್ರ ಡಾಂಗಿ ಅವರು,ಇಂತಹ ಘಟನೆಗಳು ಸರಕಾರದ ಹೇಳಿಕೆಗಳನ್ನು ಬಯಲಿಗೆಳೆಯುತ್ತಿವೆ ಮತ್ತು ಇಂತಹ ಎಲ್ಲ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News