ಸೌದಿ ಚಿತ್ರೋತ್ಸವದಲ್ಲಿ ಗಮನ ಸೆಳೆದ ಜೋರ್ಡಾನ್ ಸಿನೆಮ
ಜೆದ್ದಾ, ಡಿ.12: ಸೌದಿ ಅರೆಬಿಯಾದಲ್ಲಿ ಆಯೋಜಿಸಲಾಗಿರುವ ರೆಡ್‌ಸೀ ಅಂತರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ 16 ಅರೆಬಿಕ್ ಮತ್ತು ಅಂತರಾಷ್ಟ್ರೀಯ ಸಿನೆಮಗಳು ಪ್ರದರ್ಶನಗೊಳ್ಳಲಿದ್ದು ಇದರಲ್ಲಿ ಜೋರ್ಡಾನ್ ನ 'ದಿ ಅಲೀಸ್' ಸಿನೆಮಾ ಕೂಡಾ ಸೇರಿದೆ.
ಪೂರ್ವ ಅಮ್ಮಾನ್ನ ಗಲ್ಲಿಯೊಂದರಲ್ಲಿ ನಡೆಯುವ ವದಂತಿ ಮತ್ತು ಆ ಬಳಿಕದ ಹಿಂಸಾಚಾರದ ಕತೆಯನ್ನು ಈ ಸಿನೆಮ ಒಳಗೊಂಡಿದೆ. ಬಾಸೆಲ್ ಘಾಂಡೌರ್ ನಿರ್ದೇಶನ, ನಜೀ ಅಬು ನವರ್ ನಿರ್ಮಾಪಕರಾಗಿರುವ ಈ ಸಿನೆಮ ಆಲಿ ಎಂಬ ಕಠಿಣ ಪರಿಶ್ರಮಿ ಹಾಗೂ ಲಾನಾ ಎಂಬ ಆತನ ಪ್ರೇಯಸಿಯ ಕುರಿತಾಗಿದೆ. ಆದಷ್ಟು ಬೇಗ ಹಣ ಸಂಪಾದಿಸಿ ಲಾನಾ ಜತೆಗಿನ ತನ್ನ ಸಂಬಂಧವನ್ನು ಅಧಿಕೃತಗೊಳಿಸುವ ಉದ್ದೇಶದಿಂದ ಆಲಿ ಕಷ್ಟಪಟ್ಟು ದುಡಿಯುತ್ತಿರುತ್ತಾನೆ. ಈ ಮಧ್ಯೆ ಆಲಿ-ಲಾನಾರು ಒಟ್ಟಿಗೆ ಇರುವ ವೀಡಿಯೊ ತಮ್ಮಲ್ಲಿದೆ ಎಂದು ಕೆಲವು ವ್ಯಕ್ತಿಗಳು ಲಾನಾಳ ತಾಯಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಆಲಿ ತನ್ನ ಪರಿಚಯದ ವ್ಯಕ್ತಿಯ ಮೊರೆ ಹೋಗುತ್ತಾನೆ. ಆದರೆ ಇದು ಮತ್ತೊಂದು ಸಮಸ್ಯೆಗೆ ನಾಂದಿ ಹಾಡುತ್ತದೆ.. ಹೀಗೆ ಸಿನೆಮ ಮುಂದುವರಿಯುತ್ತದೆ.
ಈ ಸಿನೆಮಕ್ಕೆ ಜೋರ್ಡನ್ ಸಿನೆಮ ನಿಧಿಯ ನೆರವು, ಕತರ್ನ ದೋಹಾ ಫಿಲ್ಮ್ ಇನ್ಸ್ಟಿಟ್ಯೂಟ್ ಹಾಗೂ ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನ ನೆರವು ಸಿಕ್ಕಿದೆ. 2021ರಲ್ಲಿ ಝೆಕ್ ಗಣರಾಜ್ಯದ ಕಾರ್ಲೋವಿ ವೇರಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತೀರ್ಪುಗಾರರ ಪ್ರಶಸ್ತಿ ದೊರಕಿದೆ. ಅಲ್ಲದೆ ಕೈರೋ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿಯೂ ಸಂದಿದೆ. ಜೋರ್ಡಾನ್ ನಟ ಮಾಂಧರ್ ರಯಾಹ್ನೆ, ಮುಹಮ್ಮದ್ ಗೀಝವಿ, ಇಮಾದ್ ಆಝ್ಮಿ, ಜೋರ್ಡಾನ್ ನಟಿ ಬರಾಕಾ ಅಲ್ ರಹ್ಮಾನಿ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.