ಯುಎಇ ಯುವರಾಜ-ಇಸ್ರೇಲ್ ಪ್ರಧಾನಿ ಭೇಟಿ
ಅಬುಧಾಬಿ, ಡಿ.13: ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಸೋಮವಾರ ಯುಇಎ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಇದು ಯೆಹೂದಿ ದೇಶ ಇಸ್ರೇಲ್ ನ ಪ್ರಧಾನಿಯೊಬ್ಬರು ಯುಎಇಗೆ ನೀಡಿದ ಪ್ರಥಮ ಭೇಟಿಯಾಗಿದೆ.
ಉನ್ನತ ನಿಯೋಗದ ಸಹಿತ ಬೆನೆಟ್ ಯುಎಇಗೆ ರವಿವಾರ ಆಗಮಿಸಿದ್ದರು. ಸೋಮವಾರ ಯುವರಾಜರ ಖಾಸಗಿ ಅರಮನೆಯಲ್ಲಿ ಉಭಯ ಮುಖಂಡರ ಮಧ್ಯೆ ಮಾತುಕತೆ ನಡೆದಿದೆ. ಹಲವು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ಅರಬ್ ಒಮ್ಮತ ನಿರ್ಧಾರದಿಂದ ಕಳೆದ ವರ್ಷ ಹಿಂದೆ ಯುಎಇ ಹಿಂದೆ ಸರಿದಿದೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಿಸಿದೆ. ಪ್ರಸ್ತುತ ಭೇಟಿಯ ಸಂದರ್ಭ ವ್ಯಾಪಾರ ಸಂಬಂಧ ವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆನೆಟ್ ಆದ್ಯತೆ ನೀಡಲಿದ್ದಾರೆ. ಈ ಭೇಟಿಯು ಗಲ್ಫ್ ವಲಯದಲ್ಲಿ ಹೊಸ ವಾಸ್ತವತೆಯ ಪ್ರತಿಫಲನವಾಗಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.
ಉಭಯ ದೇಶಗಳ ನಡುವಿನ, ಅಪರಿಮಿತ ಅಭಿವೃದ್ಧಿ ಅವಕಾಶವಿರುವ ಪರಸ್ಪರ ವ್ಯಾಪಾರದ ಪ್ರಮಾಣ ಕೆಲ ತಿಂಗಳಲ್ಲೇ ವೃದ್ಧಿಸಲಿದೆ. ಈ ವಲಯದಲ್ಲಿ ಹೊಸ ವಾಸ್ತವತೆ ಸಾಕಾರಗೊಳ್ಳಲಿದೆ ಮತ್ತು ಮಕ್ಕಳ ಉತ್ತಮ ಭವಿಷ್ಯವನ್ನು ಖಾತರಿಪಡಿಸಲು ಜತೆಗೂಡಿ ಕಾರ್ಯನಿರ್ವಹಿಸಲಿದ್ದೇವೆ. ಯುಎಇ ದೇಶದಂತೆಯೇ ಇಸ್ರೇಲ್ ಕೂಡಾ ವ್ಯಾಪಾರದ ಪ್ರಾದೇಶಿಕ ಕೇಂದ್ರವಾಗಿದೆ. ಎರಡೂ ದೇಶಗಳ ನಡುವಿನ ಸಹಕಾರವು ನಮಗೆ ಮಾತ್ರವಲ್ಲ, ಇನ್ನಷ್ಟು ದೇಶಗಳಿಗೆ ಅಭೂತಪೂರ್ವ ಆರ್ಥಿಕ ಅವಕಾಶಗಳನ್ನು ಒದಗಿಸಲಿದೆ ಎಂದು ಬೆನೆಟ್ ಹೇಳಿರುವುದಾಗಿ ಯುಎಇ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ‘ವ್ಯಾಮ್’ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇಸ್ರೇಲ್ ಅಧ್ಯಕ್ಷರು ಯುಎಇಯ ಸಾರಿಗೆ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಯುಎಇ ಅಧಿಕಾರಿಗಳು ಹೇಳಿದ್ದಾರೆ.