ಹಿಂದುಳಿದ ವರ್ಗಗಳ ಅಗ್ರಣಿಗಳೇಕೆ ವೌನವಾಗಿದ್ದಾರೆ!?

Update: 2021-12-13 19:30 GMT

ಪಂಚಾಯತ್‌ರಾಜ್ ಇಲಾಖೆಯು, ಪರಿಶೀಲನಾ ಅಂಶಗಳನ್ನು ನೀಡುವುದರ ಮೂಲಕ ಒಂದು ಆಯೋಗವನ್ನು ರಚಿಸಿ, ಕರ್ನಾಟಕದಲ್ಲಿ ಅಸ್ಮಿತೆ ಕಂಡುಕೊಂಡಿರುವ ಜಾತಿ-ಉಪಜಾತಿಗಳಲ್ಲಿ ರಾಜಕೀಯವಾಗಿ ಹಿಂದುಳಿದವುಗಳನ್ನು ಗುರುತಿಸುವ ಕೆಲಸ ಮಾಡಬೇಕಾಗಿತ್ತು. ಹಾಗೆ ಮಾಡದಿರುವುದೂ ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಎಸಗಿದ ಘನಘೋರ ಅನ್ಯಾಯ. ಸರಕಾರದ ಈ ಅನ್ಯಾಯವನ್ನು ಹಿಂದುಳಿದ ವರ್ಗಗಳ ಸಂಘಟನೆಗಳಾಗಲೀ ಅಥವಾ ಅಗ್ರಣಿಗಳಾಗಲೀ ಪ್ರಶ್ನಿಸದಿರುವುದು ಅವರ ಅರಿವಿನ ಕೊರತೆಯೋ ಅಥವಾ ಜಾಣ ಮೌನವೋ ಏನೆಂದು ತಿಳಿಯದು. ಹಾಗಾಗಿ ಅಮಾಯಕ ಹಿಂದುಳಿದ ವರ್ಗಗಳ ಸಮುದಾಯಗಳಲ್ಲಿಯೂ ಮೌನ ಆವರಿಸಿಕೊಂಡಿದೆ. ಇದು ರಾಜಕೀಯ ಇತಿಹಾಸದಲ್ಲಿ ದಾಖಲಿಸಬೇಕಾದ ಪ್ರಮಾದವಾಗಿದೆ.


‘‘ರಾಜಕೀಯ ಶಕ್ತಿಯು ನೀವು ಪ್ರತಿಯೊಂದು ಬೀಗವನ್ನು ತೆರೆಯುವ ಪ್ರಮುಖ ಕೀಲಿಕೈ ಆಗಿದೆ’’ ಎಂಬ ಬಾಬಾ ಸಾಹೇಬರ ಮಾತುಗಳು ಸಮಕಾಲೀನ ರಾಜಕೀಯ ಪರಿಸ್ಥಿತಿಗೆ ಹೆಚ್ಚು ಪ್ರಸ್ತುತವೆನಿಸುವೆ. ಬಹುಶಃ ಪ್ರತಿಯೊಂದು ಜಾತಿ ವರ್ಗಗಳ ರಾಜಕೀಯ ಹಪಾಪಿಯೇ ಆ ಮಾತುಗಳಿಗೆ ಸಾಕ್ಷಿಯಾಗಿದೆ. ಬಹುಸಂಖ್ಯಾತ ಕೋಮುಗಳ ಪ್ರಾಬಲ್ಯದಿಂದಾಗಿ ತಳಸಮುದಾಯಗಳು ರಾಜಕೀಯ ಅವಕಾಶಗಳಿಂದ ವಂಚಿತವಾಗಿವೆ. ಈ ದಿಶೆಯಲ್ಲಿ ಸಂವಿಧಾನ ಕರ್ತೃಗಳು ಪರಿಶಿಷ್ಟ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಮೀಸಲಾತಿ ಎಂಬ ಅಸ್ತ್ರವನ್ನು ಒದಗಿಸಿಕೊಟ್ಟರು. ಆದರೆ, ಹಿಂದುಳಿದ ವರ್ಗಗಳಿಗೆ ಅದು ಇಂದಿಗೂ ಗಗನ ಕುಸುಮವಾಗಿಯೇ ಉಳಿದಿದೆ.

ಹಿಂದುಳಿದ ವರ್ಗಗಳು ಸಾರ್ವಜನಿಕ ವಲಯಗಳಲ್ಲಿ ಉದ್ಯೋಗ ಪಡೆಯಲು ಸುಗಮ- ಸಾಧ್ಯವಾಗುವಂತೆ ಮೀಸಲಾತಿ ನೀಡುವ ನಿಟ್ಟಿನಲ್ಲಿ, ಸಂವಿಧಾನ ನಿರ್ಮಾತೃಗಳು ಕರಡು ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಿದ್ದರು. ಕರಡು ಅನುಚ್ಛೇದ10(3)ರಲ್ಲಿ ಅದಕ್ಕೆ ಅವಕಾಶವೀಯಲಾಗಿತ್ತು. ಸಂವಿಧಾನ ರಚನಾ ಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ದೆಸೆಯಲ್ಲಿ ಈ ಅನುಚ್ಛೇದದ ಮೇಲೆ ಚರ್ಚೆಯಲ್ಲಿ ಭಾಗವಹಿಸಿದವರಲ್ಲಿ ದಾಮೋದರ್ ಸ್ವರೂಪ್ ಸೇಠ್ ಅವರು, ಆಡಳಿತ ದಕ್ಷತೆಗೆ ಮತ್ತು ಉತ್ತಮ ಸರಕಾರ ನೀಡುವಲ್ಲಿ, ಮೀಸಲಾತಿ ಮಾರಕವಾಗುತ್ತದೆ ಹಾಗೂ ಜಾತೀಯತೆಯನ್ನೂ ಉದ್ದೀಪನಗೊಳಿಸುತ್ತದೆ ಎಂಬ ವಾದ ಮಂಡಿಸುತ್ತಾರೆ. ಹಾಗೆಯೇ, ಪಂಡಿತ್ ಹೃದಯನಾಥ್ ಕುಂಜರು ಅವರು ಮೀಸಲಾತಿಯನ್ನು ಬೆಂಬಲಿಸಿದರೂ, ಅದು ಹತ್ತು ವರ್ಷಕ್ಕಷ್ಟೇ ಸೀಮಿತವಾಗಿರಬೇಕು ಹಾಗೂ ‘ಹಿಂದುಳಿದ’ ಪದದ ನಿಷ್ಕಷ್ಟಾರ್ಥ(define)ವನ್ನು ತಿಳಿಸಬೇಕು ಎಂಬ ವಾದವನ್ನೂ ಮುಂದಿಟ್ಟರು. ಅಂತಿಮವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕೆ.ಎಂ.ಮುನ್ಸಿ ಅವರು ಮುಂದಿಟ್ಟ ವಾದ ಮೇಲುಗೈ ಪಡೆದುಕೊಳ್ಳುತ್ತದೆ. ಹಾಗಾಗಿ, ‘ಹಿಂದುಳಿದ’ ಪದವನ್ನು ಬಿಡುವುದು ಅಥವಾ ಅದನ್ನು ಬದಲಾವಣೆ ಮಾಡುವುದು, ಇವ್ಯಾವುದೂ ಕಾರ್ಯಗತವಾಗುವುದಿಲ್ಲ.

ಪ್ರಸ್ತುತ, ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು ಸಂವಿಧಾನದ ಅನುಚ್ಛೇದ 16 (4) ಎಂದು ಸ್ಥಾನ ಪಡೆದುಕೊಂಡಿದೆ. ಚರ್ಚಾ ಸಭೆಯಲ್ಲಿ ಹಿಂದುಳಿದ ವರ್ಗ ಅಂದರೆ ಯಾವುದು ಮತ್ತು ಅದನ್ನು ಗುರುತಿಸುವ ಮಾನದಂಡಗಳೇನು ಎಂಬುದು ಚರ್ಚೆಗೆ ಬಂದಿತ್ತಾದರೂ, ಅದು ಸಂವಿಧಾನದಲ್ಲಿ ಸೇರಲು ಮಾತ್ರ ಸಾಧ್ಯವಾಗಲಿಲ್ಲ. ಸಂವಿಧಾನ ಜಾರಿಗೊಂಡ ನಂತರದಲ್ಲಿ, ಚಂಪಕಮ್ ದೊರೈರಾಜ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ, ಸಂವಿಧಾನದ ಮೊದಲನೇ ತಿದ್ದುಪಡಿಯಾಗಿ ಅನುಚ್ಛೇದ 15(4) ಅಸ್ತಿತ್ವ ಪಡೆದುಕೊಂಡಿತು. ನಾಗರಿಕರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರೆಂದು ಪರಿಗಣಿಸಿದ ವರ್ಗವನ್ನು ಅನುಚ್ಛೇದ 16(4)ರ (ಸಾರ್ವಜನಿಕ ಕ್ಷೇತ್ರದ ಉದ್ಯೋಗ) ಉದ್ದೇಶಕ್ಕಾಗಿ ‘ಹಿಂದುಳಿದ ವರ್ಗ’ಗಳು ಎಂದು ಅದರಲ್ಲಿ ಸ್ಪಷ್ಟಪಡಿಸಲಾಗಿದೆ. 1951ರಲ್ಲಿ ಈ ತಿದ್ದುಪಡಿಯಾದರೂ ಹಿಂದುಳಿದ ವರ್ಗಗಳು ಕೇಂದ್ರ ಸರಕಾರದ ಉದ್ಯೋಗಗಳಿಗೆ ಮೀಸಲಾತಿ ಪಡೆಯಲು ಸುಮಾರು 42 ವರ್ಷಗಳ ಕಾಲ ಕಾಯಬೇಕಾಯಿತು ಎಂಬುದು ಅಂದಿನ ಸರಕಾರಗಳು ಈ ವರ್ಗಗಳ ಮೇಲೆ ಹೊಂದಿದ್ದ ಅನಾದರಣೆಯನ್ನು ಎತ್ತಿ ತೋರಿಸುತ್ತದೆ.

ಹಿಂದುಳಿದ ವರ್ಗಗಳಿಗೆ ಶಾಸನ ಸಭೆಗಳ ಸದಸ್ಯತ್ವಕ್ಕೂ ಮೀಸಲಾತಿ ನೀಡಬೇಕೆಂಬ ಕೂಗು ಕೇಳಿ ಬರುತ್ತಿದ್ದರೂ, ಈ ನಿಟ್ಟಿನಲ್ಲಿ ಸರಕಾರಗಳು ಮುಂದಾಗಲಿಲ್ಲ. ರಾಜಕೀಯ ಪ್ರಾಬಲ್ಯವನ್ನು ಪಡೆದಿರುವ ಬಹುಸಂಖ್ಯಾತ ಕೋಮುಗಳ ವಿರೋಧದಿಂದ ಅದು ಸಾಧ್ಯವಾಗಿಲ್ಲ. ಈ ಮಧ್ಯೆ ಕೇಂದ್ರ ಸರಕಾರ ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಬಡತನ ನಿವಾರಣಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ವ್ಯವಸ್ಥೆ ಹೇಗಿರಬೇಕು ಎಂದು ಸಲಹೆ ನೀಡುವ ಸಲುವಾಗಿ ಡಾ.ವಿ.ಕೆ.ಆರ್.ವಿ. ರಾವ್ ಸಮಿತಿ ರಚಿಸಿತು. ಸಮಿತಿ ನೀಡಿದ ಶಿಫಾರಸುಗಳ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಮತ್ತೆ, 1986ರಲ್ಲಿ ಡಾ.ಎಲ್.ಎಂ. ಸಿಂಗ್ವಿ ಸಮಿತಿಯನ್ನು ನೇಮಿಸಿದರು. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ಕೊಡಬೇಕು ಎಂದು ಸಿಂಗ್ವಿ ಸಮಿತಿ ಪ್ರತಿಪಾದಿಸಿತು. 1989ರಲ್ಲಿ ಲೋಕಸಭೆಯಲ್ಲಿ ತಿದ್ದುಪಡಿ ಅಂಗೀಕಾರವಾದರೂ, ರಾಜ್ಯ ಸಭೆಯಲ್ಲಿ ಅದು ವಿಫಲವಾಯಿತು. ರಾಜೀವ್ ಗಾಂಧಿ ಅವರ ಜೀವಿತ ಕಾಲದಲ್ಲಿ ಅವರ ಗ್ರಾಮ ಸ್ವರಾಜ್ಯದ ಕನಸು ಈಡೇರಲಿಲ್ಲ. ಮುಂದೆ, ಡಿಸೆಂಬರ್ 1992ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ಸಂಸತ್ತಿನಲ್ಲಿ ಅಂಗೀಕೃತವಾದವು. ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕೆಂಬುದು ಸಂವಿಧಾನ ತಿದ್ದುಪಡಿಯ ಒಂದು ಭಾಗವಾಯಿತು.

ಸಂವಿಧಾನ ತಿದ್ದುಪಡಿಗಳನ್ನು ಅನುಸರಿಸಿ ಕರ್ನಾಟಕ ಸರಕಾರ ಯಾವುದೇ ಪಂಚಾಯತ್ ಮತ್ತು ಪುರಸಭೆಗಳಲ್ಲಿ ಸ್ಥಾನಗಳು ಮತ್ತು ಹುದ್ದೆಗಳನ್ನು ಹಿಂದುಳಿದ ವರ್ಗಗಳಿಗೆ ಕಾಯ್ದಿರಿಸಲು ಕ್ರಮಕೈಗೊಂಡಿತು. ಕಾಯ್ದೆ(ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ,1993) ಕಲಂ 2(2 )ರಲ್ಲಿ, ಮೀಸಲಾತಿಯ ಉದ್ದೇಶಕ್ಕಾಗಿ ಕಾಲಕಾಲಕ್ಕೆ ಸರಕಾರದಿಂದ ಎ ಮತ್ತು ಬಿ ಪ್ರವರ್ಗಗಳೆಂಬುದಾಗಿ ವರ್ಗೀಕರಿಸಬಹುದಾದ ಮತ್ತು ಅಧಿಸೂಚಿಸಬಹುದಾದ ಅಂತಹ ವರ್ಗ ಅಥವಾ ವರ್ಗಗಳ ನಾಗರಿಕರು ಎಂಬ ಅರ್ಥ ವಿವರಣೆ (definition) ಇದೆ. ಆ ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳ ನಿಯಮಗಳು, 1993ನ್ನು ಸರಕಾರ ಜಾರಿಗೆ ತಂದಿದೆ. ನಿಯಮದ ಪ್ರಕಾರ ಸರಕಾರ 1986ರಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ( ಎಸ್‌ಡಬ್ಲ್ಯೂ ಎಲ್ 66 ಬಿ ಸಿ ಎ 86) ಇರುವ ಪ್ರವರ್ಗವಾರು ಪಟ್ಟಿಯನ್ನೇ ಪಂಚಾಯತ್ ಸ್ಥಾನಗಳು ಮತ್ತು ಹುದ್ದೆಗಳಿಗಾಗಿ ‘ಹಿಂದುಳಿದ ವರ್ಗಗಳು’ ಎಂದು ಪರಿಗಣಿಸಿದೆ. ಕಾಲಕಾಲಕ್ಕೆ ಹಿಂದುಳಿದ ವರ್ಗಗಳ ಪಟ್ಟಿ ಬದಲಾವಣೆಗೊಂಡರೂ ಅದನ್ನು ಹಾಗೆಯೇ ಅಳವಡಿಸಿಕೊಳ್ಳಲು ಸಹ ನಿಯಮದಲ್ಲಿ ಹೇಳಲಾಗಿದೆ.

ನಿಯಮದನ್ವಯ 1986ರಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ್ದ ಹಾಗೂ ಹಿಂದುಳಿದ ವರ್ಗಗಳನ್ನು 5 ಪ್ರವರ್ಗಗಳಾಗಿ ವಿಂಗಡಿಸಲಾಗಿದ್ದ ಜಾತಿ-ಉಪಜಾತಿಗಳನ್ನು ಕಾಯ್ದೆಯ ಕಲಂ 2(2) ರನ್ವಯ ಎ ಮತ್ತು ಬಿ ಎಂಬ ಎರಡು ಗುಂಪುಗಳನ್ನಾಗಿ ಮಾಡಿ ಪಂಚಾಯತ್ ಸ್ಥಾನಗಳು ಮತ್ತು ಹುದ್ದೆಗಳಿಗಾಗಿ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ. ಹಾಗೆಯೇ, 1994ರಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ್ದ (ಎಸ್‌ಡಬ್ಲೂಡಿ 150 ಬಿಸಿಎ 1994) 3 ಪ್ರವರ್ಗಗಳ ಪಟ್ಟಿಯನ್ನು, ಮೇಲೆ ಹೇಳಿರುವ ಮಾದರಿಯಲ್ಲಿಯೇ ಅಳವಡಿಸಿಕೊಳ್ಳಲಾಗಿದೆ(ಆರ್‌ಡಿಪಿ 5 ಝಡ್‌ಪಿಎಸ್ 65). ಹೀಗೆ, ಪಂಚಾಯತ್ ರಾಜ್ ಇಲಾಖೆಯು, ಬೇರೊಂದು ಉದ್ದೇಶಕ್ಕಾಗಿ ಹಿಂದುಳಿದ ವರ್ಗಗಳೆಂದು ಸಮಾಜ ಕಲ್ಯಾಣ ಇಲಾಖೆ ಪ್ರವರ್ಗವಾರು ಸಿದ್ಧಪಡಿಸಿದ್ದ ಜಾತಿ- ಉಪಜಾತಿಗಳ ಪಟ್ಟಿಯನ್ನು ಸರಳ ವಿಧಾನ ಅನುಸರಿಸಿ, ಪರಿವರ್ತಿಸಿ ಕೊಂಡಿರುವುದು ಕಂಡು ಬರುತ್ತದೆ. ಸಮಾಜ ಕಲ್ಯಾಣ ಇಲಾಖೆಯು ಸಂವಿಧಾನದ ವಿಧಿ16(4)ರ ಉದ್ದೇಶಕ್ಕಾಗಿ ವಿಧಿ15(4) ರ ರೀತಿಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ್ಗವೆಂದು ಸಿದ್ಧ ಪಡಿಸಲಾಗಿದ್ದ ಪಟ್ಟಿಯನ್ನು, ಪಂಚಾಯತ್‌ರಾಜ್ ಇಲಾಖೆಯು ‘ರಾಜಕೀಯವಾಗಿ ಹಿಂದುಳಿದ ವರ್ಗಗಳು’ ಎಂದು ಪರಿಗಣಿಸಿರುವುದು ಸಂವಿಧಾನ ವಿರೋಧಿಯಾಗಿದೆ.

ವಾಸ್ತವವಾಗಿ, ಪಂಚಾಯತ್‌ರಾಜ್ ಇಲಾಖೆಯು, ಪರಿಶೀಲನಾ ಅಂಶಗಳನ್ನು ನೀಡುವುದರ ಮೂಲಕ ಒಂದು ಆಯೋಗವನ್ನು ರಚಿಸಿ, ಕರ್ನಾಟಕದಲ್ಲಿ ಅಸ್ಮಿತೆ ಕಂಡುಕೊಂಡಿರುವ ಜಾತಿ-ಉಪಜಾತಿಗಳಲ್ಲಿ ರಾಜಕೀಯವಾಗಿ ಹಿಂದುಳಿದವುಗಳನ್ನು ಗುರುತಿಸುವ ಕೆಲಸ ಮಾಡಬೇಕಾಗಿತ್ತು. ಹಾಗೆ ಮಾಡದಿರುವುದೂ ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಎಸಗಿದ ಘನಘೋರ ಅನ್ಯಾಯ. ಸರಕಾರದ ಈ ಅನ್ಯಾಯವನ್ನು ಹಿಂದುಳಿದ ವರ್ಗಗಳ ಸಂಘಟನೆಗಳಾಗಲೀ ಅಥವಾ ಅಗ್ರಣಿಗಳಾಗಲೀ ಪ್ರಶ್ನಿಸದಿರುವುದು ಅವರ ಅರಿವಿನ ಕೊರತೆಯೋ ಅಥವಾ ಜಾಣ ಮೌನವೋ ಏನೆಂದು ತಿಳಿಯದು. ಹಾಗಾಗಿ ಅಮಾಯಕ ಹಿಂದುಳಿದ ವರ್ಗಗಳ ಸಮುದಾಯಗಳಲ್ಲಿಯೂ ಮೌನ ಆವರಿಸಿಕೊಂಡಿದೆ. ಇದು ರಾಜಕೀಯ ಇತಿಹಾಸದಲ್ಲಿ ದಾಖಲಿಸಬೇಕಾದ ಪ್ರಮಾದವಾಗಿದೆ.

ಸರಕಾರದ ಈ ನ್ಯಾಯೋಚಿತವಲ್ಲದ ನಡೆಯು, ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲೂ ಕೂಡ ಬೇರೆ ಸಂದರ್ಭಗಳಲ್ಲಿ ಚರ್ಚಿತವಾಗಿದೆ.ಹಾಗೆಯೇ ಆ ದೆಸೆಯಲ್ಲಿ ತೀರ್ಪುಗಳೂ ಕೂಡ ಹೊರ ಬಂದಿವೆ. ಮೊದಲನೆಯದಾಗಿ, ಸರ್ವೋಚ್ಚ ನ್ಯಾಯಾಲಯ 11.5.2010ರಂದು ನ್ಯಾ.ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಪೀಠ ಪ್ರಕರಣವೊಂದರ ತೀರ್ಪಿನಲ್ಲಿ ಈ ರೀತಿ ಹೇಳಿದೆ -
The nature and purpose of reservations in the context of local self government is considerably different from that of higher education and public employment. In this sense, Articles 243-D and 243-T form a distinct and independent constitutional basis for affirmative action and the principles that have been evolved in relation to the reservation policies enabled by articles 15( 4) and 16 (4) cannot be readily applied in the context of local self government....."( K. Krishnamurti Vs Union of India)
ಮತ್ತೆ, ಇಂತಹದೇ ಪ್ರಕರಣವೊಂದರಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ.ಜೆ.ಎಸ್.ಖೇಹರ್ ನೇತೃತ್ವದ ವಿಭಾಗೀಯ ಪೀಠ 25.11.2010ರ ತೀರ್ಪಿನಲ್ಲಿ (ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ Vs ರಾಜ್ಯ ಸರಕಾರ ಮತ್ತು ಇತರರು) ಕೆಲವು ಪ್ರಮುಖ ಅಂಶಗಳನ್ನು ನಮೂದಿಸಿದೆ. ಪಂಚಾಯತ್ ರಾಜ್ ಕಾಯ್ದೆ ಕಲಂ 2(2)ನ್ನಾಗಲೀ ಅಥವಾ ರಾಜ್ಯ ಸರಕಾರ ಸಿದ್ಧಪಡಿಸಿರುವ ಹಿಂದುಳಿದ ವರ್ಗಗಳ ಪಟ್ಟಿಯನ್ನಾಗಲೀ ಯಾರೂ ಪ್ರಶ್ನಿಸಿರುವುದಿಲ್ಲ. ಹಾಗೆಯೇ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳನ್ನು ಸೇರಿಸಿರುವ ಹಿನ್ನೆಲೆಯಲ್ಲಿ, ಆ ಸಮುದಾಯಗಳು 2010ರಲ್ಲಿ ಹೊಂದಿರುವ ರಾಜಕೀಯ ಪ್ರಾತಿನಿಧ್ಯಗಳ ದತ್ತಾಂಶಗಳನ್ನು ದಾಖಲಿಸಿದೆ. ಆ ಪ್ರಕಾರ, ವಿಧಾನಸಭೆಯಲ್ಲಿ (ಒಟ್ಟು 224) ಲಿಂಗಾಯತ-57, ಒಕ್ಕಲಿಗ-43 ಸದಸ್ಯರನ್ನು, ವಿಧಾನಪರಿಷತ್‌ನಲ್ಲಿ (ಒಟ್ಟು 75) ಲಿಂಗಾಯತ -24, ಒಕ್ಕಲಿಗ -13 ಸದಸ್ಯರನ್ನು ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ (ಒಟ್ಟು 863) ಲಿಂಗಾಯತ-254 ಮತ್ತು ಒಕ್ಕಲಿಗ- 187 ಸದಸ್ಯರು ಸ್ಥಾನ ಪಡೆದುಕೊಂಡಿರುವರು. ಹೀಗಾಗಿ ಆ ಸಮುದಾಯಗಳು ಹೊಂದಿರುವ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು, ರಾಜಕೀಯವಾಗಿ ಅಧಿಪತ್ಯ (ಟಞಜ್ಞಿಠಿಛಿ) ಪಡೆದಿವೆ ಎಂಬ ಅಂಶ ದಾಖಲಿಸಿ ಹೀಗೆ ಅಭಿಪ್ರಾಯಪಟ್ಟಿದೆ "-"....It would be legitimate for the state government to exclude all the known accepted and acclaimed 'politicaly advanced' castes from the list of backward classes for the purpose of reservation in the ensuing elections''  ಈ ತೀರ್ಪು ಹೊರಬಿದ್ದು, ಒಂದು ದಶಕವೇ ಕಳೆದು ಹೋಗಿದ್ದರೂ, ಸರಕಾರ ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಹೆಜ್ಜೆ ಇಡದಿರುವುದು ಮತ್ತು ಯಥಾಸ್ಥಿತಿಯಲ್ಲಿಯೇ ಪಂಚಾಯತ್ ಚುನಾವಣೆಗಳನ್ನು ನಡೆಸಿಕೊಂಡು ಬರುತ್ತಿರುವುದು ನ್ಯಾಯಾಂಗದ ಬಗ್ಗೆ ಅದು ತಳೆದಿರುವ ಗೌರವಾದರದ ದ್ಯೋತಕ!

ಇಷ್ಟಾದರೂ, ಹಿಂದುಳಿದ ವರ್ಗಗಳಿಗೆ ಸೇರಿರುವ ಅಗ್ರಣಿಗಳು, ಕಾನೂನು ಹೋರಾಟಕ್ಕಿಳಿಯದೆ ಏನೂ ತಿಳಿಯದಂತಿರುವುದು ಮಾತ್ರ ಸೋಜಿಗ ತರದಿರದು.

Writer - ಕೆ. ಎನ್. ಲಿಂಗಪ್ಪ

contributor

Editor - ಕೆ. ಎನ್. ಲಿಂಗಪ್ಪ

contributor

Similar News