ತಾನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಕಗೊಂಡರೆ ಮಾನವ ಹಕ್ಕುಗಳಿಗೆ ಸಕ್ರಿಯ ಬೆಂಬಲ: ಎರಿಕ್ ಗಾರ್ಸೆಟ್ಟಿ

Update: 2021-12-15 14:55 GMT
Photo : PTI

ಹೊಸದಿಲ್ಲಿ,ಡಿ.15: ತಾನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಕಗೊಂಡರೆ ಮಾನವ ಹಕ್ಕುಗಳನ್ನು ಸಕ್ರಿಯವಾಗಿ ಬೆಂಬಲಿಸುವುದಾಗಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಹಾಲಿ ಲಾಸ್ ಏಂಜಲಿಸ್ ನಗರದ ಮೇಯರ್ ಆಗಿರುವ ಗಾರ್ಸೆಟ್ಟಿ ಭಾರತಕ್ಕೆ ಮುಂದಿನ ರಾಯಭಾರಿಯಾಗಿ ನೇಮಕಗೊಳಿಸಲು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಆಯ್ಕೆಯಾಗಿದ್ದಾರೆ.

ಮಂಗಳವಾರ ಸೆನೆಟ್ ವಿದೇಶ ಸಂಬಂಧಗಳ ಸಮಿತಿಯೆದುರು ದೃಢೀಕರಣ ಸಂದರ್ಶನಕ್ಕೆ ಹಾಜರಾಗಿದ್ದ ರಾಯಭಾರಿ ಹುದ್ದೆಗೆ ನಾಮನಿರ್ದೇಶಿತರಾಗಿರುವ ಗಾರ್ಸೆಟ್ಟಿ, ಭಾರತದಲ್ಲಿ ಮಾನವ ಹಕ್ಕುಗಳಿಗಾಗಿ ಸಕ್ರಿಯವಾಗಿ ಹೋರಾಡುತ್ತಿರುವ ನಾಗರಿಕ ಸಮಾಜದ ಗುಂಪುಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ತಾನು ಉದ್ದೇಶಿಸಿದ್ದೇನೆ ಎಂದು ತಿಳಿಸಿದರು.

ರಾಯಭಾರಿ ಹುದ್ದೆಗೆ ನೇಮಕಗೊಂಡರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಇತ್ಯಾದಿಗಳ ಮೂಲಕ ಭಾರತದಲ್ಲಿ ಮುಸ್ಲಿಮರ ವಿರುದ್ಧದ ತಾರತಮ್ಯದ ವಿಷಯವನ್ನೂ ತಾನು ಎತ್ತುವುದಾಗಿ ಅವರು ಸಮಿತಿಗೆ ತಿಳಿಸಿದರು. ಮಾನವ ಹಕ್ಕುಗಳಿಗೆ ಗೌರವ ಮತ್ತು ಸದೃಢವಾದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ಮುಖ್ಯವಾಗಿವೆ ಎಂದ ಅವರು, ಈ ವಿಷಯಗಳಲ್ಲಿ ತಾನು ಭಾರತ ಸರಕಾರದೊಂದಿಗೆ ‘ಗೌರವಪೂರ್ವಕವಾಗಿ’ ತೊಡಗಿಸಿಕೊಳ್ಳುವುದಾಗಿ ಹೇಳಿದರು.

 ‘ಭಾರತದ ಪ್ರಜಾಸತ್ತಾತ್ಮಕ ಹಿನ್ನಡೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ' ವನ್ನು ಬೆಟ್ಟು ಮಾಡಿದ ಸಮಿತಿಯ ಅಧ್ಯಕ್ಷ ಸೆನೆಟರ್ ಬಾಬ್ ಮೆನೆಂಡೆಝ್ ಅವರು,‘ಭಾರತವು ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಆಳವಾಗಿಸಲು ಬಯಸಿದರೆ ಅದು ಅಮೆರಿಕದ ಕಳವಳಗಳನ್ನು ನಿವಾರಿಸಬೇಕಾಗುತ್ತದೆ ’ ಎಂದರು.

ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಕರು,ಅಲ್ಪಸಂಖ್ಯಾತರು ಮತ್ತು ಆಡಳಿತಾರೂಢ ಬಿಜೆಪಿ ಸರಕಾರದ ಟೀಕಾಕಾರರು ಹೆಚ್ಚುತ್ತಿರುವ ಕಿರುಕುಳಗಳನ್ನು ಎದುರಿಸುತ್ತಿರುವ ನಡುವೆಯೇ ಗಾರ್ಸೆಟ್ಟಿ ಮತ್ತು ಮೆನೆಂಡೆಝ್ ಅವರ ಹೇಳಿಕೆಗಳು ಹೊರಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News