ಅಹಿಂದ ಹಿಂದಿಕ್ಕಿ ಮುಂದೆ ಹೋದ ಜಾಲಪ್ಪ!

Update: 2021-12-17 19:30 GMT

ನಾಲ್ಕು ವರ್ಷಗಳ ಹಿಂದೆ ಆರ್.ಎಲ್.ಜಾಲಪ್ಪನವರಿಗೆ ಫೋನ್ ಮಾಡಿ, ‘‘ಸರ್, ದೇವರಾಜ ಅರಸು ಕುರಿತು ಪುಸ್ತಕ ರಚಿಸುತ್ತಿದ್ದೇನೆ. ನೀವು ಅವರನ್ನು ಹತ್ತಿರದಿಂದ ಬಲ್ಲವರು. ಅವರೊಂದಿಗಿನ ಒಡನಾಟವನ್ನು ಹಂಚಿಕೊಳ್ಳಬಹುದಾ? ನಿಮಗೆ ಅನುಕೂಲವಾದ ಸ್ಥಳ ಮತ್ತು ಸಮಯ ನಿಗದಿಪಡಿಸಿದರೆ, ಅಲ್ಲಿಗೇ ಬರುತ್ತೇನೆ’’ ಎಂದಿದ್ದೆ.

‘‘ದೇವರಾಜ ಅರಸು ಬಹಳ ದೊಡ್ಡ ಮನುಷ್ಯ. ಅವರ ಬಗ್ಗೆ ಮಾತನಾಡಲಿಲ್ಲವೆಂದರೆ, ನಾನು ರಾಜಕಾರಣಕ್ಕೆ ಬಂದದ್ದು ವ್ಯರ್ಥ. ಆದರೆ ನನ್ನ ಆರೋಗ್ಯ ಅಷ್ಟು ಸರಿಯಿಲ್ಲ. ಡಯಾಬಿಟಿಸ್ ಕೈಮೀರಿ ಕಣ್ಣು ಕಾಣುತ್ತಿಲ್ಲ. ಆದರೂ ಸಹಾಯಕರ ಸಹಾಯ ಪಡೆದು ಪ್ರತಿ ಮಂಗಳವಾರ ಬೆಂಗಳೂರಿನ ಡಾಲರ್ಸ್ ಕಾಲನಿಯ ಮನೆಗೆ ಬರುತ್ತೇನೆ. ಬನ್ನಿ.. ಮಾತನಾಡುವ’’ ಎಂದರು.

ಅವರು ಹೇಳಿದ ಸಮಯಕ್ಕೆ ಸರಿಯಾಗಿ ಹೋದೆ. ಜಾಲಪ್ಪನವರು ಹಣ್ಣಾಗಿದ್ದರು. ನಾನು ನೋಡಿದ ಜಾಲಪ್ಪನವರು, 90ರ ದಶಕದಲ್ಲಿ ಮಣ್ಣಿನ ಬಣ್ಣದ ಸಫಾರಿ ಸೂಟ್‌ನಲ್ಲಿ ಖಡಕ್ಕಾಗಿ ಕಾಣುತ್ತಿದ್ದ ಇವರೇನಾ ಎನ್ನುವಷ್ಟು ಕುಗ್ಗಿಹೋಗಿದ್ದರು. ದೇಹ ಜರ್ಜರಿತವಾಗಿತ್ತು. ಕಣ್ಣು ಕಾಣಿಸುತ್ತಿರಲಿಲ್ಲ. ಕಿವಿಯೂ ಮಂದ ಎಂದರು ಸಹಾಯಕರು.

ನಾನು ಬಂದದ್ದನ್ನು ಅವರ ಸಹಾಯಕರು ತಿಳಿಸಿದರು. ಕೂರಲು, ಕಾಫಿ ಕೊಡಲು ಹೇಳಿದರು. ಅಷ್ಟೇ ಅವರಿಂದ ಬಂದ ಮಾತು. ಕೂರಲೂ ಆಗದೆ, ಮಲಗಲೂ ಆಗದೆ ಕಷ್ಟಪಡುತ್ತಿದ್ದಂತೆ ಕಾಣುತ್ತಿತ್ತು. ಅವರ ಸ್ಥಿತಿ ನೋಡಿ, ಅವರೊಂದಿಗೆ ಹತ್ತು ನಿಮಿಷ ಕೂಡ ಕಳೆಯಲಾಗಲಿಲ್ಲ. ಇನ್ನು ಕೂತು ಮಾತನಾಡುವುದು ಎಲ್ಲಿಂದ? ‘ಆರೋಗ್ಯ ಸುಧಾರಿಸಿದಾಗ ಫೋನ್ ಮಾಡಿ ಸಾರ್, ಬರುತ್ತೇನೆ’ ಎಂದು ಎದ್ದೆ. ‘‘ಸ್ಸಾರಿ’’ ಎಂದಷ್ಟೇ ಹೇಳಿ ಮತ್ತೆ ಮೌನವಾದರು.

ಇಂತಹ ಜಾಲಪ್ಪ ಇವತ್ತಿಲ್ಲ. ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ 1925ರಲ್ಲಿ ಜನಿಸಿದ ಜಾಲಪ್ಪನವರು ರಾಜಕಾರಣಕ್ಕೆ ಬಂದದ್ದು, ಕಾಂಗ್ರೆಸ್ ಪಕ್ಷದಿಂದ 1980ರಲ್ಲಿ ವಿಧಾನ ಪರಿಷತ್ ಸದಸ್ಯರಾಗುವ ಮೂಲಕ. ಆನಂತರ, 1983ರಲ್ಲಿ ಜನತಾ ಪರಿವಾರ ಸೇರಿ, ವಿಧಾನಸಭೆಗೆ ಆರಿಸಿ ಬಂದರು. ರಾಮಕೃಷ್ಣ ಹೆಗಡೆಯವರ ಕ್ಯಾಬಿನೆಟ್ ನಲ್ಲಿ ಸಹಕಾರ ಮತ್ತು ಗೃಹ ಸಚಿವರಾದರು.

ನನ್ನ ತಲೆಮಾರಿನ ಹೆಚ್ಚಿನವರಿಗೆ ಜಾಲಪ್ಪ ಎಂದಾಕ್ಷಣ ನೆನಪಾಗುವುದು, 1987ರಲ್ಲಿ ಗೃಹ ಸಚಿವರಾಗಿದ್ದಾಗ ನಡೆದ ಕೇರಳದ ವಕೀಲ ರಶೀದ್ ಕೊಲೆ ಕೇಸು. ರಶೀದ್ ಅವರನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಇದರ ಹಿಂದೆ ಜಾಲಪ್ಪ ಅವರ ಕೈವಾಡ ಇದ್ದು (ವೈದ್ಯಕೀಯ ಕಾಲೇಜಿನ ಆರಂಭಕ್ಕೆ ಸಂಬಂಧಿಸಿದಂತೆ) ಇದಕ್ಕೆ ಪೊಲೀಸರೂ ಸಹಕಾರ ನೀಡಿದ್ದಾರೆ ಎನ್ನುವ ಅನುಮಾನ ಆಗ ದಟ್ಟವಾಗಿ ಹಬ್ಬಿತ್ತು. ಈ ಕೇಸನ್ನು ಸಿಬಿಐಗೆ ವಹಿಸುವ ಮೂಲಕ, ಸಿಬಿಐಗೆ ವಹಿಸಿದ ಮೊದಲ ಕೇಸು ಎಂದು ದೇಶದಾದ್ಯಂತ ಸುದ್ದಿಯಾಗಿತ್ತು. ಆಗ ಲಂಕೇಶ್ ಪತ್ರಿಕೆಯ ವರದಿಗಾರರಾಗಿದ್ದ ಸಿ.ಎಸ್.ದ್ವಾರಕಾನಾಥ್, ಈ ಕೇಸಿನ ಜಾಡು ಹಿಡಿದು ಇಂಚಿಂಚು ಜಾಲಾಡಿದ್ದರು. ಆಗಿನ ಗೃಹ ಮಂತ್ರಿ ಜಾಲಪ್ಪ ಮತ್ತು ರಾಮಕೃಷ್ಣ ಹೆಗಡೆಯವರ ಸರಕಾರವನ್ನು ಸಂಕಷ್ಟಕ್ಕೀಡುಮಾಡಿದ್ದರು. ಕೊನೆಗೆ ಸಿಬಿಐ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದೆ, ಹೆಗಡೆ-ಜಾಲಪ್ಪ ಬಚಾವಾದರು. ಮೂರನೇ ವ್ಯಕ್ತಿ ಬಲಿಯಾದರು.

ಬಚಾವಾದ ಜಾಲಪ್ಪನವರು ರಾಜಕೀಯವಾಗಿ ಗಟ್ಟಿಗೊಳ್ಳತೊಡಗಿದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಪ್ರಭಾವಿ ರಾಜಕಾರಣಿಯಾದರು. ಜನತಾದಳದಲ್ಲಿ ಹೆಗಡೆ ವರ್ಚಸ್ಸು ಕಳೆಗುಂದಿ ದೇವೇಗೌಡರು ಪ್ರವರ್ಧಮಾನಕ್ಕೆ ಬಂದಾಗ, ಗೌಡರ ಪಾಳೆಯ ಸೇರಿದರು. 1994ರಲ್ಲಿ ಗೌಡರು ಮುಖ್ಯಮಂತ್ರಿಯಾದಾಗ ಜಾಲಪ್ಪನವರಿಗೆ ಭಾರೀ ತೂಕದ ಕಂದಾಯ ಖಾತೆಯನ್ನು ಕೊಟ್ಟು, ಗೌಡರು ಪಕ್ಕಕ್ಕಿಟ್ಟುಕೊಂಡರು. ಅದೂ ಸಾಲದೆಂದು, ದೇವೇಗೌಡರು ದೇಶದ ಪ್ರಧಾನಿಯಾಗಿ ದಿಲ್ಲಿಗೆ ಹೋದಾಗ, ಜಾಲಪ್ಪನವರನ್ನು ಲೋಕಸಭೆಗೆ ನಿಲ್ಲಿಸಿ, ಗೆಲ್ಲಿಸಿಕೊಂಡರು. ಕೇಂದ್ರದ ಜವಳಿ ಖಾತೆ ಸಚಿವರನ್ನಾಗಿ ಮಾಡಿದರು. 1996ರಿಂದ 98ರವರೆಗೆ, ಎರಡು ವರ್ಷಗಳ ಕಾಲ ಜಾಲಪ್ಪನವರು ದಿಲ್ಲಿಯಲ್ಲೂ ದರ್ಬಾರು ನಡೆಸಿದರು.

ಆ ನಂತರ, ದೇವೇಗೌಡರ ಸರಕಾರ ಬಿದ್ದು, ಜಾಲಪ್ಪನವರು ಸಚಿವ ಸ್ಥಾನ ಕಳೆದುಕೊಂಡರು. ಹಾಗೆಯೇ ಜನತಾ ದಳದಿಂದಲೂ ದೂರವಾದರು. ಕಾಂಗ್ರೆಸ್ ಸೇರಿ ಮತ್ತೆ ಮೂರು ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಏತನ್ಮಧ್ಯೆ ಕೋಲಾರದಲ್ಲಿ ದೇವರಾಜ ಅರಸು ಹೆಸರಲ್ಲಿ ವೈದ್ಯಕೀಯ ಕಾಜೇಜು, ಆಸ್ಪತ್ರೆ ಆರಂಭಿಸಿದರು. ಜಾಲಪ್ಪನವರು 2005ರವರೆಗೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದರು, ಆನಂತರ ಬದಲಾದ ರಾಜಕಾರಣಕ್ಕೆ ಒಗ್ಗಿಕೊಳ್ಳಲಾಗದೆ, ಆರೋಗ್ಯವೂ ಕೈಕೊಟ್ಟು ರಾಜಕಾರಣದಿಂದ ದೂರಾದರು.

ಈಡಿಗ ಸಮುದಾಯದ ಪ್ರಭಾವಿ ನಾಯಕರಾದ ಜಾಲಪ್ಪನವರು, 1996ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ, ಆಗತಾನೆ ಹುಟ್ಟಿ ತಳಸಮುದಾಯಗಳಲ್ಲಿ ಭರವಸೆ ಹುಟ್ಟಿಸಿದ್ದ ಅಹಿಂದ ಸಂಘಟನೆಯನ್ನು ಅನಾಮತ್ತಾಗಿ ಖರೀದಿಸುವ ಮೂಲಕ, ಅಹಿಂದ ಸಂಘಟಕರನ್ನು ಹಾದಿತಪ್ಪಿಸಿದರು. ಭರವಸೆಯ ಬೆಳಕನ್ನೇ ಇಲ್ಲವಾಗಿಸಿದರು. ಅದೇ ಅಹಿಂದವನ್ನೇ ಮೆಟ್ಟಿಲಿನಂತೆ ಬಳಸಿಕೊಂಡು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ರಾಜಕಾರಣದಲ್ಲಿ ನೆಲೆಗೊಂಡರು. ತಾವು, ತಮ್ಮ ಕುಟುಂಬ ಚೆನ್ನಾಗಿ ಬೆಳೆದು ಬೆಟ್ಟವಾದರೂ, ತಳ ಸಮುದಾಯಗಳತ್ತ ತಿರುಗಿ ನೋಡಲಿಲ್ಲ. ಆ ಅಪವಾದ ಕಳೆದುಕೊಳ್ಳಲೋ ಏನೋ, ಕೊನೆಯ ದಿನಗಳಲ್ಲಿ, ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿರುವ ಸೋಲೂರು ಬಳಿ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗಾಗಿಯೇ ಬೃಹತ್ ತರಬೇತಿ ಸಂಸ್ಥೆ ತೆರೆದರು. ಇದೂ ಕೂಡ ಈಗ ಈಡಿಗ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ. ಜಾಲಪ್ಪನವರ ಸ್ವಂತ ಆಸ್ತಿಯಾಗಿದೆ.

ಇಷ್ಟಾದರೂ, ಇತ್ತೀಚಿನ ಕೋಲಾರ ಮತ್ತು ಚಿಕ್ಕಬಳ್ಳಾಪುರದ ರಾಕ್ಷಸ ರಾಜಕಾರಣ ಮತ್ತು ಅಲ್ಲಿಂದ ಎದ್ದುಬರುತ್ತಿರುವ ರಾಜಕಾರಣಿಗಳನ್ನು ನೋಡಿದರೆ, ಜಾಲಪ್ಪ ಸಹಿಸಬಲ್ಲ ರಾಜಕಾರಣಿಯಂತೆ ಕಾಣುತ್ತಾರೆ. ಆದರೆ ಹಿಂದುಳಿದ ವರ್ಗಕ್ಕೆ ಭರವಸೆಯ ಬೆಳಕಾಗಿದ್ದ ಅಹಿಂದವನ್ನು ಹಾದಿತಪ್ಪಿಸಿದ್ದು, ಬಳಸಿಕೊಂಡು ಬಿಸಾಕಿದ್ದು ಕ್ಷಮಿಸಲಾರದು.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News