ದಾಮೋದರ್ ಮೌಝೋಗೆ ಜ್ಞಾನಪೀಠ ಪ್ರಶಸ್ತಿ ಮತ್ತು ಬಲಪಂಥೀಯ ಉಗ್ರವಾದ
ಶ್ರೇಷ್ಠ ಸಾಹಿತ್ಯಕ್ಕಾಗಿ ನೀಡಲಾಗುವ ಜ್ಞಾನಪೀಠ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ಕೊಂಕಣಿ ಕಾದಂಬರಿಕಾರ ಹಾಗೂ ಸಣ್ಣಕತೆಗಾರ ದಾಮೋದರ್ ಮೌರೊಗೆ ನೀಡಲಾಗಿದೆ. ಅಸ್ಸಾಮ್‌ನ ಶ್ರೇಷ್ಠ ಕವಿ ನೀಲಮಣಿ ಫೂಕನ್ ಜೂನಿಯರ್ ಅವರಿಗೂ 2020ರ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ. ‘‘ಸಾಹಿತ್ಯಕ್ಕೆ ಅವರು ನೀಡಿರುವ ಅಮೋಘ ಕೊಡುಗೆ’’ಯನ್ನು ನಾವು ಸಂಭ್ರಮಿಸುತ್ತಲೇ, ನಮ್ಮ ಚರ್ಚೆಯು ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗಿರಲಾರದು ಎಂದು ನಾನು ಆಶಿಸುತ್ತೇನೆ.
ತನ್ನ 1980ರ ಕಾದಂಬರಿ ‘ಕಾರ್ಮೆಲಿನ್’ನಲ್ಲಿ, ಮೌರೊ ಮಧ್ಯಪ್ರಾಚ್ಯಕ್ಕೆ ಮನೆಗೆಲಸದವರಾಗಿ ಕೆಲಸ ಮಾಡಲು ಹೋಗುವ ಮಹಿಳೆಯರ ಶೋಷಣೆಯ ಬಗ್ಗೆ ಬರೆಯುತ್ತಾರೆ. ಈ ವಿಷಯದ ಬಗ್ಗೆ ಪ್ರತಿಯೊಬ್ಬರೂ ಚರ್ಚಿಸಲು ಆರಂಭಿಸುವ ತುಂಬಾ ಮೊದಲೇ ಈ ಕಾದಂಬರಿ ಪ್ರಕಟಗೊಂಡಿತ್ತು. ಅವರ ಕತೆ ‘ದ ಬರ್ಗರ್’ ಶಾಲೆಗೆ ಹೋಗುವ ಇಬ್ಬರು ಸ್ನೇಹಿತೆಯರಾದ ಐರೀನ್ ಮತ್ತು ಶರ್ಮಿಳಾರನ್ನು ಕುರಿತಾಗಿದೆ. ಬೀಫ್ ಬರ್ಗರ್ ನೀಡಿ ಶರ್ಮಿಳಾಳನ್ನು ‘ಅಪವಿತ್ರಗೊಳಿಸಿದ’ ಬಗ್ಗೆ ಪುಟ್ಟ ಐರೀನ್ ಪಡುವ ನೋವು ಮತ್ತು ತಪ್ಪಿತಸ್ಥ ಭಾವನೆಯು ಕತೆಯ ತಿರುಳಾಗಿದೆ. ಇನ್ನೊಂದು ಕತೆಯು, ’ಗೋರಕ್ಷಕರು’ ದಲಿತ ಯುವಕನೋರ್ವನನ್ನು ಬೆದರಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಈ ವಿದ್ಯಮಾನದ ಬಗ್ಗೆ ಇತರರು ಮಾತನಾಡಲು ಆರಂಭಿಸುವ ತುಂಬಾ ಮೊದಲೇ ಲೇಖಕರು ಈ ಕತೆಯನ್ನು ಬರೆದಿದ್ದರು.
ಬಹುಷಃ ಮೌರೊ ಈಗಿನ ವಿದ್ಯಮಾನಗಳನ್ನು ಮೀರಿ ಅದರಾಚೆಗೆ ನೋಡಬಲ್ಲರು. ಅದುವೇ ಇಡೀ ಸಮಾಜದ ಕಳವಳಕ್ಕೆ ಕಾರಣವಾಗುವ ವಿಷಯಗಳಲ್ಲಿ ಅವರ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ. ಆ ಸಾಮಾಜಿಕ ಒಡನಾಟದಿಂದಾಗಿಯೇ ಬಲಪಂಥದ ರೂಪದಲ್ಲಿ ನಮ್ಮ ಸಮಾಜವನ್ನು ಕಾಡುತ್ತಿರುವ ಅಪಾಯಗಳನ್ನು ಮುಂಚಿತವಾಗಿಯೇ ಗ್ರಹಿಸಲು ಅವರಿಗೆ ಸಾಧ್ಯವಾಯಿತು. ಅದುವೇ ಈ ಅಪಾಯಗಳ ವಿರುದ್ಧ ದಿಟ್ಟವಾಗಿ ಮಾತನಾಡುವುದರಿಂದ ಹಿಂದೆ ಸರಿಯದಿರಲು ಅವರಿಗೆ ಧೈರ್ಯ ನೀಡಿತು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿರುವುದಕ್ಕಾಗಿ 2015ರಲ್ಲಿ ವಿಚಾರವಾದಿ ಎಮ್.ಎಮ್. ಕಲಬುರ್ಗಿಯ ಹತ್ಯೆ ನಡೆದ ಬಳಿಕ ಮೌರೊ ತೆಗೆದುಕೊಂಡ ನಿಲುವನ್ನು ಜ್ಞಾಪಿಸಿಕೊಳ್ಳಿ. ಸಾಹಿತ್ಯ ಅಕಾಡಮಿಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, ಈ ದಮನದ ವಿರುದ್ಧ ಸಾಹಿತಿಗಳು ಎದ್ದು ನಿಲ್ಲಬೇಕು ಎಂದು ಒತ್ತಾಯಿಸಿದರು ಹಾಗೂ ಏಕ ಸಂಸ್ಕೃತಿಯ ಪ್ರತಿಪಾದಕರ ನೈತಿಕ ಪೊಲೀಸ್‌ಗಿರಿಯನ್ನು ಖಂಡಿಸಿದರು.
2016 ಜನವರಿಯಲ್ಲಿ ಗುಜರಾತ್‌ನ ದಾಂಡಿಯಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಭಾಷಣ ಮಾಡಿದ ಅವರು, ಬೆದರಿಕೆಗಳ ಹೊರತಾಗಿಯೂ ಸನಾತನ ಸಂಸ್ಥೆಯನ್ನು ನೇರವಾಗಿ ಟೀಕಿಸಿದರು. ಬಳಿಕ, 2019ರ ಲೋಕಸಭಾ ಚುನಾವಣೆಯ ಮುನ್ನಾ ದಿನದಂದು ಫ್ಯಾಶಿಸ್ಟ್ ಸರಕಾರವನ್ನು ಸೋಲಿಸುವಂತೆ ಜನತೆಗೆ ಮನವಿ ಮಾಡಿದರು.
ಗೋವಾದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಪ್ರಬಲವಾಗಿವೆ. ಬಲಪಂಥೀಯ ತೀವ್ರವಾದವನ್ನು ಬಿತ್ತರಿಸುವುದಕ್ಕಾಗಿ ಮತ್ತು ಅದರಲ್ಲಿ ಭಾಗವಹಿಸಿರುವುದಕ್ಕಾಗಿ ಈ ಸಂಘಟನೆಗಳ ಚಟುವಟಿಕೆಗಳ ಮೇಲೆ ಒಂದು ದಶಕದ ಅವಧಿಯಲ್ಲಿ ನಿಗಾ ಇಡಲಾಗಿತ್ತು. ಅವರಿಗೆ ನಿರಂತರವಾಗಿ ದೊರೆಯುತ್ತಿದ್ದ ರಾಜಕೀಯ ಆಶ್ರಯದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ.
ಬಲಪಂಥೀಯ ಉಗ್ರವಾದಕ್ಕೆ ಸೈದ್ಧಾಂತಿಕ ವಿರೋಧವನ್ನು ವ್ಯಕ್ತಪಡಿಸಿರುವುದಕ್ಕಾಗಿ ಈ ಸಂಘಟನೆಗಳು ಅವರನ್ನು ತಮ್ಮ ಹಿಟ್ ಲಿಸ್ಟ್‌ಗೆ ಸೇರಿಸಿರುವುದು ಬಳಿಕ ನಮ್ಮ ಗಮನಕ್ಕೆ ಬಂದಿದೆ. ಕೋಮುವಾದದ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದ ಕರ್ನಾಟಕ ಭಯೋತ್ಪಾದನೆ ನಿಗ್ರಹ ದಳವು ಈ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ 10ಕ್ಕೂ ಅಧಿಕ ವ್ಯಕ್ತಿಗಳನ್ನು ಬಂಧಿಸಿತು. ಬಂಧಿತರ ಹಿಟ್ ಲಿಸ್ಟ್‌ನಲ್ಲಿ ಲಂಕೇಶ್, ದಿವಂಗತ ಗಿರೀಶ್ ಕಾರ್ನಾಡ್, ವಿಚಾರವಾದಿ ಹಾಗೂ ಕನ್ನಡ ಲೇಖಕ ಕೆ.ಎಸ್. ಭಗವಾನ್, ಪತ್ರಕರ್ತ ನಿಖಿಲ್ ವಾಗ್ಲೆ, ಮೌರೊ ಮತ್ತು ಇತರರು ಇದ್ದಾರೆನ್ನುವುದು ಪೊಲೀಸರ ತನಿಖೆಯಲ್ಲಿ ಹೊರಬಿತ್ತು.
ಆದರೆ, ಇದರಿಂದ ಮೌರೊ ಧೃತಿಗೆಡಲಿಲ್ಲ. ಬಲಪಂಥೀಯ ಉಗ್ರವಾದದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಅವರಷ್ಟೇ ಅಲ್ಲ, ಇತರರೂ ಹೆದರಲಿಲ್ಲ. ಉದಾಹರಣೆಗೆ; ಹಿಟ್ ಲಿಸ್ಟ್ ಬಹಿರಂಗಗೊಂಡ ಬಳಿಕ ವಾಗ್ಲೆ ಪ್ರಶ್ನಿಸಿದರು: ‘‘ಭಾರತ ಸರಕಾರಕ್ಕೆ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯ) ಮತ್ತು ಝಾಕಿರ್ ನಾಕ್‌ರ ಸಂಘಟನೆಗಳನ್ನು ನಿಷೇಧಿಸಲು ಸಾಧ್ಯವಾದರೆ, ಹಿಂದುತ್ವ ಉಗ್ರಗಾಮಿ ಗುಂಪುಗಳನ್ನು ನಿಷೇಧಿಸುವುದರಿಂದ ಅದನ್ನು ಯಾರು ತಡೆಯುತ್ತಿದ್ದಾರೆ? ಈ ಸಂಘಟನೆಗಳು ಹಿಂದೂ ಗುಂಪು ಆಗಿರುವ ಕಾರಣಕ್ಕೆ ಅವುಗಳಿಗೆ ಕಾನೂನಿನಿಂದ ವಿನಾಯಿತಿ ಇದೆಯೇ?’’
ಈ ಹಿಟ್‌ಲಿಸ್ಟ್‌ನಲ್ಲಿದ್ದ ಹೆಚ್ಚಿನವರಿಗೆ ನೀಡಿದಂತೆ, ಮೌರೊ ಬಯಸದಿದ್ದರೂ ಸರಕಾರವು ಅವರಿಗೆ ದಿನದ 24 ಗಂಟೆಯ ಪೊಲೀಸ್ ಭದ್ರತೆಯನ್ನು ಒದಗಿಸಿತು. ಭಾರತದಲ್ಲಿ ಚಿಂತಕರನ್ನು ಕೊಲ್ಲುವ ಹಂತಕ ಪಡೆಗಳಿವೆ ಹಾಗೂ ಅವುಗಳು ಹಿಟ್ ಲಿಸ್ಟ್‌ಗಳನ್ನು ಹೊಂದಿವೆ ಎನ್ನುವ ಆಘಾತವು ಕಾಲಕ್ರಮೇಣ ಮರೆತುಹೋಗಬಹುದು. ಆದರೆ, ಹಿಂಸಾತ್ಮಕ ಅಥವಾ ಉಗ್ರವಾದಿ ಗುಂಪುಗಳು ಲೇಖಕರು, ಚಿಂತಕರ ಮೇಲೆ ದಾಳಿ ನಡೆಸಬಹುದು ಹಾಗೂ ಉತ್ತಮ ಜಗತ್ತನ್ನು ನಿರ್ಮಿಸಲು ಕೆಲಸ ಮಾಡುವ ಹೋರಾಟಗಾರರ ಮೇಲೆ ದಾಳಿಯಾಗಬಹುದು ಎನ್ನುವ ಕಲ್ಪನೆಯೇ ಸಮಾಜಕ್ಕೆ ಬೆದರಿಕೆಯಾಗಿದೆ.
ಬಹುಸಂಖ್ಯಾತವಾದವು ದೇಶದಲ್ಲಿ ದಿನಗಳೆದಂತೆ ಸ್ವೀಕೃತವಾಗುತ್ತಾ ಹೋಗಬಹುದು. ಹಾಗಾಗಿ, ನಾವು ಪರಿಸ್ಥಿತಿಯ ಗಂಭೀರತೆಯನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಹಾಗೆ ಮಾಡಿದರೆ ಅದು ನಮ್ಮ ನಾಶಕ್ಕೆ ಕಾರಣವಾಗುತ್ತದೆ. ವಿಜೃಂಭಿಸುತ್ತಿರುವ ಆಕ್ರಮಣಕಾರಿ ಬಹುಸಂಖ್ಯಾತವಾದದೊಂದಿಗೆ ನಮ್ಮ ಸಾಮಾಜಿಕ ಹಂದರವು ಕುಸಿಯುತ್ತಾ ಸಾಗುತ್ತಿದೆ. ಮುಸ್ಲಿಮರು ಪ್ರಾರ್ಥನೆ ಮಾಡದಂತೆ ತಡೆಯಲು ಗುರ್ಗಾಂವ್ ಮತ್ತು ಹರ್ಯಾಣಗಳಲ್ಲಿ ಇತ್ತೀಚೆಗೆ ನಡೆಸಲಾದ ಪ್ರಯತ್ನಗಳಲ್ಲಿ ನಾವು ಇದನ್ನು ನೋಡಬಹುದಾಗಿದೆ. ಬಲಪಂಥೀಯರ ಗೂಂಡಾಗಿರಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಒಂದೋ ಸಾಧ್ಯವಾಗುತ್ತಿಲ್ಲ ಅಥವಾ ಅವರು ಅದನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದಾರೆ.
ಸದ್ಯಕ್ಕೆ ಪರಿಸ್ಥಿತಿ ಅಯೋಮಯವಾಗಿದೆ. ಮಹಾರಾಷ್ಟ್ರದ ಮುಂಬೈ, ಪುಣೆ, ಸತಾರ ಮತ್ತು ನಳಸೋಪರ (ಮುಂಬೈ)ದಲ್ಲಿ ಸ್ಫೋಟಗಳನ್ನು ನಡೆಸಲು ರೂಪಿಸಲಾಗಿರುವ ಸಂಚಿನಲ್ಲಿ ಸನಾತನ ಸಂಸ್ಥೆಯಂತಹ ಸಂಘಟನೆಗಳ ಕೆಲವು ಕಾರ್ಯಕರ್ತರು ಅಥವಾ ಅದರ ಬಗ್ಗೆ ಸಹಾನುಭೂತಿ ಹೊಂದಿದವರು ಭಾಗಿಯಾಗಿದ್ದಾರೆನ್ನಲಾಗಿದೆ. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ನಳಸೋಪರದಲ್ಲಿ ವೈಭವ್ ರಾವುತ್ ಮತ್ತು ಅವನ ಸಂಗಡಿಗರ ಮನೆಗಳಿಂದ ಬಾಂಬ್‌ಗಳು, ಜಿಲೆಟಿನ್ ಕಡ್ಡಿಗಳು, ಡಿಟೊನೇಟರ್‌ಗಳು, ಪತ್ರಿಕೆಯಲ್ಲಿ ಸುತ್ತಲಾದ ನಿಗೂಢ ಬಿಳಿ ಪುಡಿ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಸ್ವಾತಂತ್ರ್ಯ ದಿನಾಚರಣೆ, ಈದ್ ಮತ್ತು ಮರಾಠಾ ಚಳವಳಿಯ ಸಂದರ್ಭಗಳಲ್ಲಿ ಇಂತಹ ಕೃತ್ಯಗಳನ್ನು ನಡೆಸಲು ಸಂಚನ್ನು ರೂಪಿಸುವ ಅವರ ಧೈರ್ಯ ಎಚ್ಚರಿಕೆಯ ಕರೆಗಂಟೆಯಾಗಿದೆ. ಆದರೆ, ಇದು ಮೊದಲ ಬಾರಿಯೇನೂ ನಡೆದಿಲ್ಲ. ಆದರೆ, 2006ರಲ್ಲೇ ಈ ಸಂಘಟನೆಗಳು ಮಹಾರಾಷ್ಟ್ರದ ಪನ್ವೇಲ್ ಮತ್ತು ಥಾಣೆಯಲ್ಲಿ ಬಾಂಬ್‌ಗಳನ್ನು ಸಿಡಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು. ಮೊದಲು ಈ ಸ್ಫೋಟಗಳಿಗೆ ಇಸ್ಲಾಮಿಸ್ಟ್ ಉಗ್ರರನ್ನು ದೂರಲಾಗಿತ್ತು. ಇದೇ ಸಮಯದಲ್ಲಿ ಪೊಲೀಸ್ ಅಧಿಕಾರಿ ಹೇಮಂತ ಕರ್ಕರೆ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ಸಮಗ್ರ ತನಿಖೆಯ ಬಳಿಕ, ಈ ಬಲಪಂಥೀಯ ಸಂಘಟನೆಗಳನ್ನು ನಿಷೇಧಿಸಲು ಅವರು ಶಿಫಾರಸು ಮಾಡಿದ್ದರು.
ಈ ಬಾಂಬ್ ಸ್ಫೋಟಗಳಲ್ಲಿ ಮಂಗೇಶ್ ನಿಕಮ್, ಹರಿಭಾವು ದಿವೇಕರ್ ಮತ್ತು ಇತರರು ಶಾಮೀಲಾಗಿದ್ದನ್ನು ಭಯೋತ್ಪಾದನೆ ನಿಗ್ರಹ ದಳವು ಪತ್ತೆಹಚ್ಚಿತು. ಆದರೆ, ಅವರು ಕೇವಲ ಯೋಜನೆಯನ್ನು ಜಾರಿಗೊಳಿಸಿದ ಕಾಲಾಳುಗಳಾಗಿದ್ದರು. 2009ರಲ್ಲಿ, ಈ ಸಂಘಟನೆಗಳ ಕಾರ್ಯಕರ್ತರೆನ್ನಲಾದ ಮಾಲ್ಗೊಂಡ ಪಾಟೀಲ್ ಮತ್ತು ಯೋಗೇಶ್ ನಾಯಕ್ ಸ್ಕೂಟರ್‌ನಲ್ಲಿ ಬಾಂಬೊಂದನ್ನು ಸಾಗಿಸುತ್ತಿದ್ದಾಗ ಮೃತಪಟ್ಟರು. ಅವರು ಜನಪ್ರಿಯ ನರಕಾಸುರ ಹಬ್ಬಕ್ಕೆ ಬಾಂಬ್ ಸಾಗಿಸುತ್ತಿದ್ದರು ಎಂದು ಹೇಳಲಾಗಿತ್ತು. ಈ ಕೃತ್ಯದಲ್ಲಿ ಪಾಟೀಲ್ ಮತ್ತು ಅವನ ಸಂಗಡಿಗ ಯಶಸ್ವಿಯಾಗಿದ್ದರೆ ಹಲವು ಅಮಾಯಕರು ಸಾಯುತ್ತಿದ್ದರು. ಸನಾತನ ಸಂಸ್ಥೆಯು ನರಕಾಸುರ ಹಬ್ಬದ ವಿರುದ್ಧ ಅಭಿಯಾನದಲ್ಲಿ ತೊಡಗಿದೆ. ಈ ಹಬ್ಬವು ದುಷ್ಟಶಕ್ತಿಯನ್ನು ವೈಭವೀಕರಿಸುತ್ತದೆ ಎಂದು ಅದು ಹೇಳುತ್ತದೆ.
ಬಳಿಕ, ಮೃತ ಕಾರ್ಯಕರ್ತರೊಂದಿಗೆ ತನ್ನಗೆ ಯಾವ ಸಂಬಂಧವೂ ಇಲ್ಲ ಎಂಬುದಾಗಿ ಸನಾತನ ಸಂಸ್ಥೆ ಹೇಳಿತು. ಆದರೂ, ಆ ಸಮಯದಲ್ಲಿ ಡಾ. ನರೇಂದ್ರ ದಾಭೋಲ್ಕರ್ ಪ್ರಶ್ನಿಸಿದ್ದರು: ಸನಾತನ ಸಂಸ್ಥೆಯ ಕಾರ್ಯಕರ್ತರು ಅದೇ ‘ತಪ್ಪುಮಾರ್ಗ’ದಲ್ಲಿ ಎಷ್ಟು ಸಲ ಹೋಗಲು ಸಾಧ್ಯ? ಈ ತರ್ಕರಹಿತ ವಾದವನ್ನು ಇದ್ದ ಹಾಗೇ ಸ್ವೀಕರಿಸಲು ಹಾಗೂ ಆ ಮೂಲಕ ಸನಾತನ ಸಂಸ್ಥೆ ಪಾರಾಗಲು ಹೇಗೆ ಸಾಧ್ಯವಾಯಿತು? ನಿಗೂಢ ಸಂಘಟನೆಯಾಗಿರುವ ಸನಾತನ ಸಂಸ್ಥೆಯ ಕೆಲವು ಅಡ್ಡದಾರಿ ಹಿಡಿದ ಕಾರ್ಯಕರ್ತರು ಸಂಘಟನೆಯ ಯಾವುದೇ ಹಿರಿಯ ವ್ಯಕ್ತಿಗಳ ಶಾಮೀಲಾತಿಯಿಲ್ಲದೆ ಅಥವಾ ಅವರ ಗಮನಕ್ಕೆ ಬಾರದಂತೆ ಸ್ವತಂತ್ರವಾಗಿ ಸ್ಫೋಟಗಳನ್ನು ನಡೆಸಿದರು ಎನ್ನುವ ನಂಬಿಕೆ ತರ್ಕವನ್ನು ಉಲ್ಲಂಘಿಸುತ್ತದೆ.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸನಾತನ ಸಂಸ್ಥೆಯು 2012ರಲ್ಲಿ ಅಖಿಲ ಭಾರತ ಹಿಂದೂ ಸಮಾವೇಶವನ್ನು ಆರಂಭಿಸಿತು ಎನ್ನಲಾಗಿದೆ. ಬಳಿಕ ಪ್ರತಿ ವರ್ಷವೂ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ. ಆರು ತಿಂಗಳ ಹಿಂದೆ, ಕಂಟೆಂಟ್ ನೀತಿಗಳ ಉಲ್ಲಂಘನೆಗಾಗಿ ಫೇಸ್‌ಬುಕ್ ಸನಾತನ ಸಂಸ್ಥೆಯನ್ನು ನಿಷೇಧಿಸಿದಾಗ ಇದು ಸುದ್ದಿಯಾಯಿತು. (ಆದರೂ, ಫೇಸ್‌ಬುಕ್ ಸನಾತನ ಸಂಸ್ಥೆಯ ಹಲವು ಪುಟಗಳನ್ನು ತಿಂಗಳುಗಳ ಕಾಲ ಆನ್‌ಲೈನ್‌ನಲ್ಲಿ ಇರಿಸಿತು.) ಸನಾತನ ಸಂಸ್ಥೆಯನ್ನು ನಿಷೇಧಿಸುವ ನಿರ್ಧಾರ ಮತ್ತು ನಿಷೇಧವನ್ನು ಜಾರಿಗೆ ತರದಿರುವುದರ ನಡುವಿನ ಗೊಂದಲಕ್ಕೆ ರಾಜಕೀಯ ಒತ್ತಡವೇ ಕಾರಣ ಎಂದು ಹೇಳಲಾಗಿದೆ.
ಸಾಹಿತ್ಯ ಅಕಾಡಮಿ ಪತ್ರಗಳ ಉತ್ಸವದಲ್ಲಿ ಮಾಡಿರುವ ಭಾಷಣದಲ್ಲಿ ಮೌರೊ ಹೇಳಿರುವುದನ್ನು ನೆನಪಿಸಿಕೊಳ್ಳಲು ಬಹುಶಃ ಇದು ಸರಿಯಾದ ಸಮಯವಾಗಿದೆ. ‘‘ನಮ್ಮ ಮೌನವು ಮೊದಲು ಬಲಪಂಥದ ಪ್ರತಿರೋಧವಿಲ್ಲದ ಅಂಗೀಕಾರಕ್ಕೆ ಕಾರಣವಾಗುತ್ತದೆ ಹಾಗೂ ಬಳಿಕ ಅದು ಅವರನ್ನು ಉತ್ತೇಜಿಸುತ್ತದೆ’’ ಎಂದು ಅವರು ಹೇಳಿದ್ದರು. ಈ ಮೌನವನ್ನು ನಾವು ಮುರಿಯಬೇಕಾಗಿದೆ ಹಾಗೂ ಪ್ರತಿಯೊಂದು ಧ್ವನಿಗೂ ಬೆಲೆಯಿದೆ ಎನ್ನುವುದನ್ನು ನೆನಪಿಸಬೇಕಾಗಿದೆ.
ಕೃಪೆ : www.newsclick.in