ಪ್ರತ್ಯೇಕ ದಾಳಿ ಪ್ರಕರಣ: ಸೌದಿಯಲ್ಲಿ 2, ಯೆಮನ್ ನಲ್ಲಿ 3 ಮಂದಿ ಸಾವು

Update: 2021-12-25 15:57 GMT
ಸಾಂದರ್ಭಿಕ ಚಿತ್ರ:PTI

ರಿಯಾದ್, ಡಿ.25: ಯೆಮನ್‌ನಲ್ಲಿ ಸೌದಿ ಅರೆಬಿಯಾ ನೇತೃತ್ವದ ಮೈತ್ರಿಪಡೆ ನಡೆಸಿದ ವಾಯುದಾಳಿಯಲ್ಲಿ 3 ಮಂದಿ ಮೃತರಾಗಿದ್ದರೆ, ಯೆಮನ್‌ನ ಹೌದಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಿಂದ ಸೌದಿ ಅರೆಬಿಯಾದ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಸೌದಿ ಅರೆಬಿಯಾದ ದಕ್ಷಿಣದಲ್ಲಿರುವ, ಯೆಮನ್ ಗಡಿಗೆ ಸನಿಹದ ಜಝಾನ್ ಪ್ರದೇಶದ ಮುಖ್ಯ ರಸ್ತೆಯಲ್ಲಿದ್ದ ವಾಣಿಜ್ಯ ಮಳಿಗೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಸೌದಿಯ ಓರ್ವ ಮತ್ತು ಯೆಮನ್‌ನ ಓರ್ವ ಮೃತಪಟ್ಟಿದ್ದು ಇತರ 7 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ಅರೆಬಿಯಾ ಹೇಳಿದೆ.

ಯೆಮನ್‌ನಲ್ಲಿ ಬಂಡುಗೋರರ ಹಿಡಿತದಲ್ಲಿರುವ ರಾಜಧಾನಿ ಸನಾದ ಬಳಿಯಿರುವ ಅಜಾಮ ನಗರದ ಮೇಲೆ ಮಿತ್ರರಾಷ್ಟ್ರಗಳ ಪಡೆ ನಡೆಸಿದ ವಾಯುದಾಳಿಯಲ್ಲಿ 3 ಮಂದಿ ಮೃತರಾಗಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಾಧಿಕಾರಿಗಳ ಸಂಘ ಹೇಳಿದೆ.

ಯೆಮನ್‌ನಲ್ಲಿ 2014ರಿಂದ ಅಂತರ್ಯುದ್ಧ ಭುಗಿಲೆದ್ದಿದ್ದು ಅಂತರಾಷ್ಟ್ರೀಯ ಮಾನ್ಯತೆ ಪಡೆದ, ಸೌದಿ ಅರೆಬಿಯಾ ನೇತೃತ್ವದ ಮೈತ್ರಿಪಡೆ ಬೆಂಬಲಿತ ಯೆಮನ್ ಸರಕಾರದ ವಿರುದ್ಧ ಇರಾನ್ ಬೆಂಬಲಿತ ಹೌದಿ ಬಂಡುಗೋರರು ಸಂಘರ್ಷ ನಡೆಸುತ್ತಿದ್ದಾರೆ. ಇದೀಗ ಸಂಘರ್ಷ ತೀವ್ರ ಸ್ವರೂಪಕ್ಕೆ ತಿರುಗಿದ್ದು ಶುಕ್ರವಾರ ಮಿತ್ರರಾಷ್ಟ್ರಗಳ ಪಡೆ ಸನಾವನ್ನು ಗುರಿಯಾಗಿಸಿ ನಡೆಸಿದ ವಾಯುದಾಳಿಯಲ್ಲಿ ಸೇನಾ ಶಿಬಿರ ಧ್ವಂಸವಾಗಿದೆ ಎಂದು ಸೌದಿಯ ಮಾಧ್ಯಮಗಳು ವರದಿ ಮಾಡಿವೆ. ವಾಯುದಾಳಿಯಿಂದ ಜನವಸತಿ ಪ್ರದೇಶದಲ್ಲಿನ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಹೌದಿ ಮಾಧ್ಯಮ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News