2022ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ರಾಜ್ಯದ ಸಾಧಕರ ಹೆಸರು ಶಿಫಾರಸು
ಬೆಂಗಳೂರು, ಡಿ.25: 2022ನೇ ಸಾಲಿನ ಪದ್ಮ ಪ್ರಶಸ್ತಿಗೆ ಇಸ್ಕಾನ್‌ನ ಮಧು ಪಂಡಿತ್ ದಾಸ್, ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ದಿವಂಗತ ಡಾ ಸಿದ್ದಲಿಂಗಯ್ಯ, ನಾಡೋಜ ಚನ್ನವೀರ ಕಣವಿ, ಶಿವಮೊಗ್ಗ ಸುಬ್ಬಣ್ಣ, ನಟ ಅನಂತನಾಗ್ ಮತ್ತು ಶಿವರಾಜ್‌ಕುಮಾರ್ ಸೇರಿದಂತೆ ಹಲವು ಸಾಧಕರ ಹೆಸರುಗಳನ್ನು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡುವ ಸಂಬಂಧ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಸಾಧಕರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಶಿಫಾರಸಾಗಿರುವ ಪಟ್ಟಿಯನ್ನು ‘the-file.in’ ಆರ್‌ಟಿಐ ಮೂಲಕ 2021ರ ಡಿಸೆಂಬರ್ 24ರಂದು ಪಡೆದುಕೊಂಡಿದೆ.
ವಿಶೇಷವೆಂದರೆ 2021ರ ಜುಲೈ 29ರಂದು ನಡೆದಿದ್ದ ಸಭೆಯಲ್ಲಿ ಅಂತಿಮಗೊಳಿಸಿದ್ದ ಪಟ್ಟಿಯಲ್ಲಿ ಸಾಹಿತ್ಯ ವಿಭಾಗದಿಂದ ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ಡಾ.ಎಚ್. ಸುದರ್ಶನ್ ಅವರ ಹೆಸರು ಇದೆಯಾದರೂ ಕೇಂದ್ರ ಸರಕಾರಕ್ಕೆ 2021ರ ಸೆಪ್ಟಂಬರ್ 17ರಂದು ಶಿಫಾರಸು ಮಾಡಿರುವ ಪಟ್ಟಿಯಲ್ಲಿ ಅವರಿಬ್ಬರ ಹೆಸರು ಇಲ್ಲದಿರುವುದು ಲಭ್ಯವಿರುವ ಪಟ್ಟಿಯಿಂದ ತಿಳಿದು ಬಂದಿದೆ.
ಸೆಪ್ಟಂಬರ್ 17ರಂದು ಕೇಂದ್ರ ಸರಕಾರಕ್ಕೆ ಕಳುಹಿಸಿರುವ ಶಿಫಾರಸು ಪಟ್ಟಿಯಲ್ಲಿ ಒಟ್ಟು 19 ಹೆಸರುಗಳು ಇವೆ. ಈ ಪೈಕಿ ಪದ್ಮಭೂಷಣ ಪ್ರಶಸ್ತಿಗೆ ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಇಸ್ಕಾನ್‌ನ ಮಧುಪಂಡಿತ್ ದಾಸ್ ಅವರ ಹೆಸರುಗಳನ್ನು ಕ್ರಮವಾಗಿ ಶಿಕ್ಷಣ ಮತ್ತು ಸಮಾಜಸೇವೆ ವಿಭಾಗದಿಂದ ಶಿಫಾರಸು ಮಾಡಲಾಗಿದೆ. ಜುಲೈ 29ರಂದು ನಡೆದಿದ್ದ ಸಭೆಯಲ್ಲಿ ಒಟ್ಟು 36 ಮಂದಿ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು.
ಕಳೆದೆರೆಡು ಸಾಲಿನಿಂದಲೂ ಬೆಂಗಳೂರಿನ ವೆಂಕಟಾಚಲಪತಿ(ಶಿಲ್ಪಕಲೆ), ಕೋಲಾರದ ಹರಿಕಥಾ ವಿದ್ವಾಂಸರಾದ ಎನ್.ಆರ್. ಜ್ಞಾನಮೂರ್ತಿ, ಯಕ್ಷಗಾನ ಭಾಗವತ ತುಮಕೂರಿನ ಕಲ್ಮನೆ ನಂಜಪ್ಪ, ಡಾ.ಲಕ್ಷ್ಮಣದಾಸ್, ಸಾಹಿತ್ಯ ವಿಭಾಗದಿಂದ ಎಚ್.ಎಸ್.ವೆಂಕಟೇಶ್‌ಮೂರ್ತಿ, ದಕ್ಷಿಣ ಕನ್ನಡದ ಡಾ.ಮೋಹನ್ ಆಳ್ವ(ಶಿಕ್ಷಣ), ವೈ.ಕೆ. ಮುದ್ದುಕೃಷ್ಣ (ಸುಗಮ ಸಂಗೀತ), ಡಾ.ಸಿ. ರಾಮಚಂದ್ರ(ವೈದ್ಯಕೀಯ) ಅವರ ಹೆಸರುಗಳನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗುತ್ತಿರುವುದು ಪಟ್ಟಿಯಿಂದ ಗೊತ್ತಾಗಿದೆ.
2022ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸಾಗಿರುವ ಪಟ್ಟಿ: ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ (ಶಿಕ್ಷಣ, ಸಮಾಜ ಸೇವೆ), ಮಧುಪಂಡಿತ್ ದಾಸ್ (ಸಮಾಜಸೇವೆ)
ಪದ್ಮಶ್ರೀ ಶಿಫಾರಸಿನ ಪಟ್ಟಿ: ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ (ಸಮಾಜಸೇವೆ), ಅಬ್ದುಲ್ ಖಾದರ್ ಇಮಾಂ ಸಾಬ್, ನಾಡಕಟ್ಟೀನ್ ಧಾರವಾಡ (ವಿಜ್ಞಾನ, ಇಂಜಿನಿಯರಿಂಗ್), ವಿನಯ್ ಹೆಗಡೆ, ಮಂಗಳೂರು (ಶಿಕ್ಷಣ), ಡಾ.ರಾಮಚಂದ್ರ ಚೌಡಪ್ಪ (ವೈದ್ಯಕೀಯ), ಡಾ.ಪಿ.ದಯಾನಂದ ಪೈ (ಶಿಕ್ಷಣ), ಅನಂತನಾಗ್ (ಕಲೆ), ನಾಡೋಜ ಚನ್ನವೀರ ಕಣವಿ(ಸಾಹಿತ್ಯ), ಡಾ.ಮೋಹನ್ ಆಳ್ವ (ವೈದ್ಯಕೀಯ, ಸಾಹಿತ್ಯ), ಶಿವಮೊಗ್ಗ ಸುಬ್ಬಣ್ಣ (ಇತರ), ಏರ್ ಮಾರ್ಷಲ್ ಕೆ.ಸಿ. ಕಾರಿಯಪ್ಪ (ಸಮಾಜ ಸೇವೆ), ಡಾ.ಮುಹಮದ್ ಮಜೀದ್ (ವೈದ್ಯಕೀಯ), ವಾಣಿ ಗಣಪತಿ (ಕಲೆ), ನಾಡೋಜ ಜಿ.ಎಸ್. ಖಂಡೇರಾವ್ (ಕಲೆ), ಶಿವರಾಜ್‌ಕುಮಾರ್ (ಕಲೆ), ವಿರೂಪಾಕ್ಷ ಕಲ್ಯಾಣದೇವರು (ಕಲೆ), ಬಸವಲಿಂಗ ಪಟ್ಟದದೇವರು (ಸಾಹಿತ್ಯ, ಶಿಕ್ಷಣ), ಡಾ.ಸಿದ್ದಲಿಂಗಯ್ಯ (ಸಾಹಿತ್ಯ).