ಕೊರೋನ ಸಂದರ್ಭದಲ್ಲಿ ಆಸ್ಪತ್ರೆಗಳಿಂದ ಅಧಿಕ ಶುಲ್ಕ ವಸೂಲಿ: ಅಧಿವೇಶನದಲ್ಲಿ ಉತ್ತರ ನೀಡದ ಸಚಿವರು
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಅಧಿಕ ಶುಲ್ಕ ವಸೂಲಿ ಮಾಡಿರುವ ಆಸ್ಪತ್ರೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಡಿ.13ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಅಧಿವೇಶನ ಪೂರ್ಣ ಗೊಂಡರೂ ಉತ್ತರ ನೀಡಿಲ್ಲ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಪ್ಪಟ್ಟು ಹಣವನ್ನು ವಸೂಲು ಮಾಡಿವೆ ಎಂಬ ಬಲವಾದ ಆರೋಪಗಳು ಕೇಳಿಬಂದಿದ್ದರೂ ಉತ್ತರವನ್ನು ಒದಗಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಿರುವ ಕುರಿತು ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲೂ ಅಲ್ಲಿನ ಸದಸ್ಯರೊಬ್ಬರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಸರಕಾರ ಕೋವಿಡ್ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಿದ್ದ ಆಸ್ಪತ್ರೆಗಳಿಂದ 36 ಕೋಟಿ ರೂ.ನ್ನು ರೋಗಿಗಳಿಗೆ ಮರು ಪಾವತಿ ಮಾಡಲಾಗಿದೆ ಎಂದು ವಿಧಾನ ರಿಷತ್‌ನಲ್ಲಿ ಡಿ.24ರಂದು ಉತ್ತರಿಸಿದೆ.
ಇದೇ ರೀತಿಯ ಪ್ರಶ್ನೆಯನ್ನು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾದ ದಿನದಂದೇ(ಡಿ.13) ಕರ್ನಾಟಕ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ್ದರು. ಅವರು ಕೇಳಿದ್ದ ಪ್ರಶ್ನೆಗಳು ಇಂತಿವೆ:
ಕೋವಿಡ್ ಸಂದರ್ಭದಲ್ಲಿ ನಿಗದಿತಗಿಂತ ಅಧಿಕ ಶುಲ್ಕ ವಸೂಲು ಮಾಡಿರುವ ಆಸ್ಪತ್ರೆಗಳ ಬಗ್ಗೆ ದೂರುಗಳು ಬಂದಿವೆಯೇ, ಬಂದಿದ್ದಲ್ಲಿ ಅಂತಹ ಆಸ್ಪತ್ರೆಗಳ ವಿವರಗಳನ್ನು ಒದಗಿಸುವುದು. ಈವರೆಗೆ ಎಷ್ಟು ಜನ ಕೊರೋನಪೀಡಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ? ಎಷ್ಟು ಜನರಿಗೆ ಸರಕಾರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗಿದೆ? ಯಾವ ಯಾವ ಆಸ್ಪತ್ರೆಗಳಿಗೆ ಎಷ್ಟು ಮೊತ್ತದ ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗಿದೆ? ನಿಗದಿಗಿಂತ ಅಧಿಕ ಶುಲ್ಕ ವಸೂಲು ಮಾಡಿದ ಆಸ್ಪತ್ರೆಗಳ ಮೇಲೆ ಸರಕಾರ ಕೈಗೊಂಡಿರುವ ಕ್ರಮಗಳೇನು?
ಅಧಿವೇಶನ ಪೂರ್ಣಗೊಂಡರೂ ಈ ಯಾವ ಪ್ರಶ್ನೆಗಳಿಗೂ ಸಚಿವ ಸುಧಾಕರ್ ಉತ್ತರವನ್ನು ನೀಡಿಲ್ಲ. ಅಲ್ಲದೆ ಕರ್ನಾಟಕ ವಿಧಾನ ಪರಿಷತ್‌ನ ಅಧಿಕೃತ ಜಾಲತಾಣದಲೂ್ಲ ಉತ್ತರವನ್ನು ಅಪ್ಲೋಡ್ ಮಾಡಿಲ್ಲ.
ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡಿವೆ ಎಂಬ ಗುರುತರ ಆರೋಪಗಳು ಕೇಳಿಬಂದಿದ್ದವು. ಈ ನಡುವೆಯೇ ರಾಜ್ಯ ಸರಕಾರವು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್ 23ರ ಅಂತ್ಯಕ್ಕೆ 62,458 ಪ್ರಕರಣಗಳಿಗೆ 203.24 ಕೋಟಿ ರೂ. ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ರಸ್ತಾವ ಸಲ್ಲಿಸಿತ್ತು. ಇದರಲ್ಲಿ 49,751 ಪ್ರಕರಣಗಳಿಗೆ 166.42 ಕೋಟಿ ರೂ.ನ್ನು ಭರಿಸಿರುವ ಸರಕಾರ 12,707 ಪ್ರಕರಣಗಳಿಗೆ ವೆಚ್ಚ ಪಾವತಿಸಲು ಈಗಾಗಲೇ ಅನುಮೋದಿಸಿದೆ. ಹಾಗೆಯೇ 36.82 ಕೋಟಿ ರೂ. ಪಾವತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. 30 ಜಿಲ್ಲೆಗಳಲ್ಲಿನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ ಒಟ್ಟು 26,692 ಪ್ರಕರಣಗಳಿಗೆ 139.89 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಬೇಕಿದೆ ಎಂದು ದಾಖಲೆಯಿಂದ ತಿಳಿದು ಬಂದಿದೆ.
ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಪ್ರಭಾಕರ್ ಕೋರೆ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಧರ್ಮಸ್ಥಳ ಮಂಜುನಾಥ ಎಜುಕೇಶನ್ ಸೊಸೈಟಿ, ಆದಿಚುಂಚನಗಿರಿ, ಜಗದ್ಗುರು ಶಿವರಾತ್ರೀಶ್ವರ ಸೇರಿದಂತೆ ರಾಜಕೀಯ ನಂಟು ಹೊಂದಿರುವ ಖಾಸಗಿ ಆಸ್ಪತ್ರೆಗಳೂ ಈ ಪಟ್ಟಿಯಲ್ಲಿವೆ.
ರೋಗಿಗಳಿಗೆ ಚಿಕಿತ್ಸೆ ನೀಡಿರುವ ಕಾರ್ಪೊರೇಟ್ ಸೇರಿದಂತೆ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ನ.23 ಅಂತ್ಯಕ್ಕೆ 145 ಕೋಟಿ ರೂ. ಈಗಾಗಲೇ ಪಾವತಿ ಆಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿರುವ ಖಾಸಗಿ ಅಸ್ಪತ್ರೆಗಳು ಸಿಂಹಪಾಲು ಪಡೆದಿವೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಪಾವತಿ ಆಗಲು ಅನುಮತಿಗೆ 2,183.34 ಲಕ್ಷ ರೂ. ಬಾಕಿ ಇದ್ದರೆ, ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿ 7,581.09 ಲಕ್ಷ ರೂ. ಮೊತ್ತದ ಬಿಲ್ಲುಗಳಿವೆ. ಇದೆಲ್ಲ ಸೇರಿದಂತೆ ಒಟ್ಟಾರೆ 21,343.87 ಲಕ್ಷ ರೂ. ಈಗಾಗಲೇ ಪಾವತಿಯಾಗಿದೆ ಎಂದು ತಿಳಿದು ಬಂದಿದೆ.
ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಕೋಟಾದಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿರಲಿಲ್ಲ. ಕೇವಲ ಕೋವಿಡ್‌ಗೆ ಚಿಕಿತ್ಸೆ ನೀಡುತ್ತಾರೆ ಇತರ ಅನಾರೋಗ್ಯ ಸಮಸ್ಯೆಗಳು (ಹೃದ್ರೋಗ, ಮೂತ್ರಪಿಂಡ ಸಮಸ್ಯೆ) ಇದ್ದರೆ ಮತ್ತೆ ಸರಕಾರಿ ಆಸ್ಪತ್ರೆಗೆ ವರ್ಗಾಯಿಸಿಕೊಳ್ಳಬೇಕು ಅಥವಾ ಹೆಚ್ಚುವರಿ ಹಣ ನೀಡಬೇಕಿದೆ. ಜತೆಗೆ ಆಹಾರ ಪೂರೈಕೆ, ಸಿಬ್ಬಂದಿ ನೆರವು, ಮಾನಸಿಕ ಆರೋಗ್ಯ ಕಾಪಾಡುವ ಕೌನ್ಸೆಲಿಂಗ್, ಸೋಂಕಿತರ ಆರೋಗ್ಯ ಸ್ಥಿತಿ ಕುರಿತು ಸಂಬಂಧಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದನ್ನು ಸ್ಮರಿಸಬಹುದು.