ಆತ್ಮಹತ್ಯಾ ದಾಳಿಯ ಸಂಚು: ಯೆಮನ್ ಪ್ರಜೆಗೆ ಸೌದಿಯಲ್ಲಿ ಗಲ್ಲುಶಿಕ್ಷೆ

Update: 2021-12-27 17:23 GMT
ಸಾಂದರ್ಭಿಕ ಚಿತ್ರ

ರಿಯಾದ್, ಡಿ.27: ದೇಶದಲ್ಲಿ ಆತ್ಮಹತ್ಯಾ ದಾಳಿಗೆ ಸಂಚು ಹೂಡಿದ ಮತ್ತು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಆರೋಪದಲ್ಲಿ ಯೆಮನ್ ನ ಪ್ರಜೆಯೊಬ್ಬನಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ಸೌದಿ ಅರೆಬಿಯಾ ಸೋಮವಾರ ಘೋಷಿಸಿದೆ.

ದಯೀಷ್(ಐಸಿಸ್) ಭಯೋತ್ಪಾದಕ ಸಂಘಟನೆಯ ಸೂಚನೆಯಡಿ ಯೆಮನ್ ನ ಪ್ರಜೆ ಮುಹಮ್ಮದ್ ಅಲ್ ಸದ್ದಾಮ್ ಸೌದಿ ಅರೆಬಿಯಾದ ಜನದಟ್ಟಣೆಯ ಸ್ಥಳಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿಗೆ ಪ್ರಯತ್ನಿಸಿದ್ದು ಈತನನ್ನು ಸೋಮವಾರ ರಿಯಾದ್ ನಗರದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಸೌದಿ ಅರೆಬಿಯಾದ ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.

ಐಸಿಸ್‌ಗೆ ನಿಷ್ಟೆ ಪ್ರಕಟಿಸಿರುವ ಈ ವ್ಯಕ್ತಿ ಸ್ಪೋಟಕ ಹೊಂದಿದ್ದ ಬೆಲ್ಟ್ ಧರಿಸಿ ಅದನ್ನು ಜನದಟ್ಟಣೆಯ ಸ್ಥಳದಲ್ಲಿ ಸ್ಫೋಟಿಸುವ ಯೋಜನೆ ಹಾಕಿಕೊಂಡಿದ್ದ ಎಂದು ಸಚಿವಾಲಯ ಹೇಳಿದೆ. ವಿಶ್ವದಲ್ಲಿ ಮರಣದಂಡನೆ ಪ್ರಮಾಣ ಅತ್ಯಧಿಕವಾಗಿರುವ ದೇಶವೆಂದು ಗುರುತಿಸಿಕೊಂಡಿರುವ ಸೌದಿ ಅರೆಬಿಯಾದಲ್ಲಿ 2019ರಲ್ಲಿ 184 ಮಂದಿಯನ್ನು ಗಲ್ಲಿಗೇರಿಸಲಾಗಿದ್ದರೆ 2020ರಲ್ಲಿ ಮರಣದಂಡನೆ ಶಿಕ್ಷೆಯ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೂ ಈ ವರ್ಷದ ಜನವರಿಯಿಂದ ಜುಲೈವರೆಗಿನ ಅವಧಿಯಲ್ಲಿ ಕನಿಷ್ಟ 40 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದೆ. ಸೌದಿಯಲ್ಲಿ ಈ ವರ್ಷ (ಇದುವರೆಗೆ) ಸುಮಾರು 70 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಎಎಫ್‌ಪಿ ಮಾಧ್ಯಮ ವರದಿ ಮಾಡಿದೆ.

2020ರಲ್ಲಿ 27 ಮಂದಿಯನ್ನು ಗಲ್ಲಿಗೇರಿಸಿದ ಮಾಹಿತಿಯಿದೆ ಎಂದು ಸೌದಿ ಅರೆಬಿಯಾದ ಮಾನವ ಹಕ್ಕು ಆಯೋಗ ಹೇಳಿದೆ. ಇದೀಗ ಸುಧಾರಣಾ ಕ್ರಮಗಳಿಗೆ ತೆರೆದುಕೊಂಡಿರುವ ಸೌದಿ ಅರೆಬಿಯಾ ನ್ಯಾಯಾಲಯದ ಛಡಿ ಏಟಿನ ಶಿಕ್ಷೆಯನ್ನು ರದ್ದುಗೊಳಿಸಿದ್ದು ಈ ಕ್ರಮವನ್ನು ಮಾನವ ಹಕ್ಕುಗಳ ಪ್ರತಿಪಾದಕರು ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News