ಸೌದಿ ಅರೇಬಿಯಾ: ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ, ತಪ್ಪಿದ್ದಲ್ಲಿ ಭಾರೀ ದಂಡ!
Update: 2021-12-29 11:45 GMT
ರಿಯಾದ್: ಒಳಾಂಗಣ ಹಾಗೂ ಹೊರಾಂಗಣದ ಎಲ್ಲಾ ಕಾರ್ಯಕ್ರಮಗಳಲ್ಲೂ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವುದನ್ನು ಸೌದಿ ಅರೇಬಿಯಾ ಸರ್ಕಾರ ಖಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಡಿಸೆಂಬರ್ 30 ರ ಬೆಳಗ್ಗೆ 7 ಗಂಟೆಯಿಂದ ಈ ಆದೇಶ ಜಾರಿಯಲ್ಲಿರುವುದಾಗಿ ಸರ್ಕಾರದ ಪ್ರಕಟನೆ ತಿಳಿಸಿದೆ.
ಸೌದಿ ಪ್ರೆಸ್ ಏಜೆನ್ಸಿ ಪ್ರಕಾರ, ಕೋವಿಡ್ -19 ರ ನೂತನ ರೂಪಾಂತರಿಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಆರೋಗ್ಯ ಅಧಿಕಾರಿಗಳು ನೀಡಿದ ಸಲಹೆ ಅನ್ವಯ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಜಾಗತಿಕ ಹಾಗೂ ಸ್ಥಳೀಯ ಕೋವಿಡ್ ಪರಿಸ್ಥಿತಿಗಳನ್ನು ಆಧರಿಸಿ ಈ ಆದೇಶ ಹೊರಡಿಸಲಾಗಿರುವುದಾಗಿ ಸರ್ಕಾರದ ಮೂಲ ತಿಳಿಸಿದೆ. ಸೌದಿ ಅರೇಬಿಯಾದಲ್ಲಿ ವಾಸಿಸುವ ಎಲ್ಲರೂ ಹೊಸ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದ್ದು, ತಪ್ಪಿದ್ದಲ್ಲಿ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ ಎಂದೂ ಎಚ್ಚರಿಸಲಾಗಿದೆ.