ದ್ವೇಷ ಭಾಷಣಕ್ಕೆ ಕಡಿವಾಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತಮ್ಮ ರಾಜಕೀಯ ಮತ್ತು ಸಿದ್ಧಾಂತಗಳ ಸ್ವಾರ್ಥ ಮತ್ತು ಸಮರ್ಥನೆಗಾಗಿ ಜನಸಾಮಾನ್ಯರ ನಡುವೆ ದ್ವೇಷದ ವಿಷ ಬೀಜ ಬಿತ್ತುವ, ಉರಿಯುವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ವ್ಯಾಧಿ ಭಾರತದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ವಿಧ್ವಂಸಕರು ನೆಲಸಮಗೊಳಿಸಿದ ನಂತರ ಅದರ ರಾಜಕೀಯ ಲಾಭ ಪಡೆದು ಅಧಿಕಾರ ಸೂತ್ರ ಹಿಡಿದ ದುಷ್ಟಶಕ್ತಿಗಳು ದೇವರು, ಧರ್ಮದ ಹೆಸರಿನಲ್ಲಿ ನಿರಂತರವಾಗಿ ವಿಷ ಕಕ್ಕುವ ದಂಧೆಯನ್ನು ಮುಂದುವರಿಸಿವೆ. ಕೆಲ ಸನ್ಯಾಸಿಗಳು, ಮಠಾಧೀಶರು, ಧರ್ಮ ಗುರುಗಳು ಕೂಡ ಇಂತಹ ಪ್ರಚೋದನಾಕಾರಿ ಮಾತುಗಳನ್ನಾಡುತ್ತಾ ಸಾಮಾಜಿಕ ಶಾಂತಿಯನ್ನು ಕದಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಮೂರು ರಾಜ್ಯಗಳಿಗೆ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ. ಇಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದೂ, ಅಲ್ಲದೆಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿರುವುದು ಸ್ವಾಗತಾರ್ಹ ಮಧ್ಯಪ್ರವೇಶವಾಗಿದೆ.
ದಿಲ್ಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ನಡೆದಿದ್ದ ಧರ್ಮ ಸಂಸತ್ ಕಾರ್ಯಕ್ರಮಗಳಲ್ಲಿ ಕೆಲ ಸ್ವಾಮಿಗಳು ಮತ್ತು ಸ್ವಯಂ ಘೋಷಿತ ಧರ್ಮ ರಕ್ಷಕರು ಮುಸ್ಲಿಮ್ ಸಮುದಾಯದವರ ವಿರುದ್ಧ ಮಾಡಿದ್ದ ದ್ವೇಷ ಪೂರಿತ ಭಾಷಣಗಳು ಹಾಗೂ ಕರೆಗಳ ಹಿನ್ನೆಲೆಯಲ್ಲಿ ಶಾಹೀನ್ ಅಬ್ದುಲ್ಲಾ ಅವರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಋಷಿಕೇಶ ರಾಯ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ ‘‘ಸಂವಿಧಾನದ 51ನೇ ‘ಎ’ ವಿಧಿಯು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳುತ್ತದೆ. ಆದರೆ 21ನೇ ಶತಮಾನದಲ್ಲಿ ನಾವು ಧರ್ಮದ ಹೆಸರಿನಲ್ಲಿ ಎಷ್ಟು ಸಂಕುಚಿತರಾಗಿದ್ದೇವೆ? ಧರ್ಮ ಸಂಸತ್ ನಲ್ಲಿ ಕೆಲವರ ಹೇಳಿಕೆಗಳು ಎಷ್ಟು ವಿಚ್ಛಿದ್ರಕಾರಿಯಾಗಿವೆ’’ ಎಂದು ಆಘಾತ ವ್ಯಕ್ತಪಡಿಸಿದೆ.
ಇಂತಹ ಪ್ರಚೋದನಾಕಾರಿ ಹೇಳಿಕೆಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು, ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು ಎಂದು ಅರ್ಜಿದಾರರು ಪ್ರತಿವಾದಿಗಳನ್ನಾಗಿ ನಮೂದಿಸಿದ್ದ ದಿಲ್ಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ದೇಶದ ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯ ಕರ್ತವ್ಯ ತನ್ನದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದ್ವೇಷ ಭಾಷಣಗಳ ದೂರುಗಳು ಕಳೆದ ಕೆಲ ದಶಕಗಳಿಂದ ಬರುತ್ತಲೇ ಇವೆ.ಕಾನೂನು, ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರಗಳು ಜಾಣ ಮೌನವನ್ನು ತಾಳಿವೆ. ಸಂಬಂಧಿಸಿದವರು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದರಿಂದ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪ್ರಚೋದನಾಕಾರಿ ದ್ವೇಷ ಭಾಷಣಗಳು ಹೆಚ್ಚಾಗುತ್ತಲೇ ಇವೆ. ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸಬೇಕು ಎಂಬುದು ಈಗ ಬರೀ ಭಾಷಣವಾಗಿ ಉಳಿದಿಲ್ಲ. ಕರ್ನಾಟಕ ಮುಂತಾದ ಕಡೆ ಕೆಲ ಜಾತ್ರೆ, ಉತ್ಸವಗಳಲ್ಲಿ ಜಾರಿಗೂ ಬಂದಿದೆ. ಮುಸ್ಲಿಮರ ಅಂಗಡಿಗಳನ್ನು ಗೂಂಡಾಗಿರಿಯಿಂದ ಮುಚ್ಚಿಸಲಾಗಿದೆ. ಇಷ್ಟೇ ಅಲ್ಲ ‘‘ಮುಸಲ್ಮಾನರ ಕತ್ತು ಸೀಳಬೇಕು, ಕೈ ಕಾಲು ಮುರಿಯಬೇಕು’’ ಎಂಬ ಪ್ರಚೋದನಾಕಾರಿ ಮಾತುಗಳು ಬಹಿರಂಗವಾಗಿ ಕೇಳಿ ಬರುತ್ತಿವೆ. ಈ ಬಗ್ಗೆ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಕೂಡ ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಕೆಲವರು ಮಾಡಿದ ಪ್ರಚೋದನಾಕಾರಿ ಭಾಷಣಗಳ ನಂತರ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಆದರೂ ಈ ಪ್ರಚೋದನಾಕಾರಿ ಚಟುವಟಿಕೆಗಳು ನಿಂತಿಲ್ಲ. ಕೋಮುವಾದಿ ಸಂಘಟನೆಗಳು ನಡೆಸುವ ಧಾರ್ಮಿಕ ಸಮಾವೇಶಗಳು, ಧರ್ಮ ಸಂಸತ್‌ಗಳು, ಮಾತ್ರವಲ್ಲ ಸಾಂಪ್ರದಾಯಿಕವಾಗಿ ನಡೆಯುವ ಹಿಂದೂ ಧಾರ್ಮಿಕ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ನುಸುಳುವ ಗಲಭೆಕೋರ, ಕೋಮುವಾದಿ ಶಕ್ತಿಗಳು ಅಲ್ಲಿ ಜನಸಾಮಾನ್ಯರ ನಡುವೆ ಕೋಮು ಕಲಹದ ವಿಷ ಬೀಜವನ್ನು ಬಿತ್ತುತ್ತವೆ. ಅಮಾಯಕ ಜನರನ್ನು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಎತ್ತಿ ಕಟ್ಟುತ್ತವೆ. ಹೀಗಾಗಿ ಹಿಂದೆಲ್ಲಾ ಶಾಂತಿಯುತವಾಗಿ ನಡೆಯುತ್ತಿದ್ದ ಜಾತ್ರೆ, ಉತ್ಸವಗಳು ಈಗ ಗಲಭೆ, ಹಿಂಸಾಚಾರಗಳಲ್ಲಿ ಅಂತ್ಯವಾಗುತ್ತಿವೆ. ಕಾನೂನು ಪಾಲನೆ ಮಾಡಬೇಕಾದ ಮಂತ್ರಿಗಳೇ ಪ್ರಚೋದನಾಕಾರಿ ಮಾತುಗಳನ್ನು ಆಡುವುದು ಇತ್ತೀಚಿನ ಹೊಸ ಪ್ರವೃತ್ತಿಯಾಗಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಕೂಡ ಗಮನಿಸಬೇಕಾಗಿದೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸಮಾಜದಲ್ಲಿ ಶಾಂತಿ, ನೆಮ್ಮದಿಮತ್ತು ಸೌಹಾರ್ದವನ್ನು ಕಾಪಾಡಬೇಕಾದ ಕೆಲ ಮಾಧ್ಯಮಗಳು ಅದರಲ್ಲೂ ಖಾಸಗಿ ಟಿವಿ ಮಾಧ್ಯಮಗಳು ಕೂಡ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ಉರಿಯುವ ಬೆಂಕಿಗೆ ತುಪ್ಪಸುರಿಯುವಂತೆ ಕೋಮುವಾದಿ ಸಂಘಟನೆಗಳ ಮುಖಂಡರನ್ನು ಸ್ಟುಡಿಯೋಗಳಿಗೆ ಕರೆಸಿ ಸಂವಾದದ ಹೆಸರಿನಲ್ಲಿ ಅವರಿಂದ ಪ್ರಚೋದನಾಕಾರಿ ಮಾತುಗಳನ್ನಾಡಿಸಿ ಪ್ರಸಾರ ಮಾಡುತ್ತಿವೆ. ಅನೇಕ ಕಡೆ ಗಲಭೆ, ಹಿಂಸಾಚಾರಗಳಿಗೆ ಟಿವಿ ಮಾಧ್ಯಮಗಳ ಕೊಡುಗೆಯೂ ಸಾಕಷ್ಟಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಕೂಡ ಗಮನ ಹರಿಸಬೇಕಾಗಿದೆ
ಮುಸ್ಲಿಮ್ ಮತ್ತಿತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಕೋಮುವಾದಿ ಮುಖಂಡರ ಹಾಗೂ ನಕಲಿ ಸನ್ಯಾಸಿಗಳ ಪ್ರಚೋದನಾಕಾರಿ ಭಾಷಣಗಳು ಒಂದೆಡೆ ನಡೆದರೆ, ಇನ್ನೊಂದೆಡೆ ಆಡಳಿತಾಂಗದಲ್ಲಿ ಕೆಲವರಲ್ಲಿ ಇರುವ ಕೋಮುವಾದಿ ಪೂರ್ವಾಗ್ರಹ ಭಾವನೆಯೂ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೂಡ ಕೋಮು ಪೂರ್ವಾಗ್ರಹ ಭಾವನೆ ವ್ಯಾಪಕವಾಗಿದೆ. ಕೆಲವು ಸೂಕ್ಷ್ಮ ಸಂದರ್ಭಗಳಲ್ಲಿ ಇಲಾಖೆ ಹೇಗೆ ವರ್ತಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸುಪ್ರೀಂ ಕೋರ್ಟ್ ಈ ಎಲ್ಲದರ ಬಗ್ಗೆ ನಿಗಾ ವಹಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಇಲಾಖೆಗಳ ಲೋಪ ದೋಷಗಳನ್ನು ಸರಿಪಡಿಸಬೇಕು. ಈಗಾಗಲೇ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಇನ್ನಷ್ಟು ಹದಗೆಡುವುದನ್ನು ತಡೆಯುವುದು ತುರ್ತು ಅಗತ್ಯವಾಗಿದೆ.