3 ವರ್ಷಗಳಿಂದ ಹಲವು ಪ್ರಮುಖ ದೇವಸ್ಥಾನಗಳ ಲೆಕ್ಕ ಪರಿಶೋಧನೆಯೇ ಆಗಿಲ್ಲ

Update: 2022-01-05 02:25 GMT

ಬೆಂಗಳೂರು, ಜ.4: ಚಿಕ್ಕಮಗಳೂರು ಜಿಲ್ಲೆಯ ಗುರು ದತ್ತಾತ್ರೇಯ ಬಾಬಾ ಬುಡಾನ್ ಸ್ವಾಮಿ ದರ್ಗಾ, ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಶಿರಸಿಯ ಮಾರಿಕಾಂಬಾ, ಗೋಕರ್ಣದ ಮಹಾಗಣಪತಿ, ಚಾಮರಾಜನಗರದ ಬಿಳಿಗಿರಿ ರಂಗನಾಥ ದೇವಸ್ಥಾನಗಳಲ್ಲಿ ಕಳೆದ ಮೂರು ವರ್ಷಗಳಿಂದಲೂ ಲೆಕ್ಕ ಪರಿಶೋಧನೆಯನ್ನೇ ನಡೆಸದಿ ರುವುದು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 37(2)ರ ಅನ್ವಯ 5 ಲಕ್ಷ ರೂ. ಅಥವಾ ಹೆಚ್ಚು ಒಟ್ಟು ವಾರ್ಷಿಕ ಆದಾಯವಿರುವ ಸಂಘಗಳ ಸಂದರ್ಭದಲ್ಲಿ ಲೆಕ್ಕಪತ್ರಗಳನ್ನು ರಾಜ್ಯ ಲೆಕ್ಕಪತ್ರ ಇಲಾಖೆಯಿಂದ ಲೆಕ್ಕ ಪರಿಶೋಧನೆ ಮಾಡಿಸಬೇಕು. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ನೂರಾರು ದೇವಸ್ಥಾನಗಳು ಕಳೆದ 3 ವರ್ಷಗಳಲ್ಲಿ ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ. ರಾಜ್ಯದಲ್ಲಿರುವ ದೇವಸ್ಥಾನಗಳನ್ನು ಸ್ವತಂತ್ರಗೊಳಿಸಿ ಮತ್ತು ಅವುಗಳನ್ನು ಸ್ವಾಯತ್ತಗೊಳಿಸಲು ರಾಜ್ಯ ಬಿಜೆಪಿ ಸರಕಾರ ಮುಂದಾಗಿರುವ ಬೆನ್ನಲ್ಲೇ ಕಳೆದ ಮೂರು ವರ್ಷಗಳಿಂ ದಲೂ ರಾಜ್ಯದ ಹಲವು ದೇವಸ್ಥಾನಗಳು ಲೆಕ್ಕ ಪರಿಶೋಧನೆ ಯನ್ನೇ ನಡೆಸದಿರುವ ವಿಚಾರ ಮುನ್ನೆಲೆಗೆ ಬಂದಿದೆ.

'ಲೆಕ್ಕ ಪರಿಶೋಧನ್ನೆ ನಡೆಸದಿರುವ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹಲವು ದೇವಸ್ಥಾನಗಳಿದ್ದು ಇಂತಹ ದೇವಸ್ಥಾನಗಳ ಪಟ್ಟಿ 'The-File' ಗೆ ಲಭ್ಯವಾಗಿದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ದೇವಾಲಯಗಳಿಗೆ ವರ್ಷಾಸನ ಮತ್ತು ತಸ್ತಿಕ್ ರೂಪದಲ್ಲಿ 150.92 ಕೋ.ರೂ. ಮತ್ತು ಭಕ್ತಾದಿಗಳಿಂದ ದೇವಸ್ಥಾನಗಳು ಲಕ್ಷಾಂತರ ರೂ.ನ್ನು ಸಂಗ್ರಹಿಸುತ್ತಿವೆ. ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿರುವುದು ಮತ್ತು ಸರಕಾರ ಪ್ರತಿ ವರ್ಷವೂ ನೀಡುತ್ತಿರುವ ಅನುದಾನವು ಹೇಗೆ ಬಳಕೆಯಾಗಿದೆ ಎಂಬುದರ ಲೆಕ್ಕ ನಿರ್ವಹಣೆ ನಡೆಯುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕಿದ್ದ ಪ್ರತಿಷ್ಠಿತ ಮತ್ತು ಅಪಾರ ಭಕ್ತವೃಂದವನ್ನು ಹೊಂದಿರುವ ದೇವಸ್ಥಾನಗಳು ಕಳೆದ 3 ವರ್ಷಗಳಿಂದಲೂ ಲೆಕ್ಕ ಪರಿಶೋಧನೆಯನ್ನೇ ನಡೆಸ ದಿರುವ ದೇಗುಲಗಳ ಆಡಳಿತ ಮಂಡಳಿಯ ಧೋರಣೆಯು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 ದೇವಸ್ಥಾನಗಳ ಲೆಕ್ಕ ಪರಿಶೋಧನಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ನಿಯಮಗಳಲ್ಲಿ ಅವಕಾಶಗಳಿಲ್ಲದಿದ್ದರೂ ಲೆಕ್ಕ ಪರಿಶೋಧನೆ ವರದಿಗೆ ಅನುಪಾಲನ ವರದಿ ಸಲ್ಲಿಸಬೇಕು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 39(1)ರ ಅನ್ವಯ ಲೆಕ್ಕ ಪರಿಶೋಧಕನು ಸೂಚಿಸಿದ ಯಾವುದೇ ದೋಷಗಳು ಮತ್ತು ಅಕ್ರಮಗಳನ್ನು ಸರಿಪಡಿಸಿ ಆ ಬಗೆಗಿನ ವರದಿಯನ್ನು ತನ್ನ ವಿವರಣೆ ಮತ್ತು ಅಗತ್ಯಪಡಿಸಲಾದ ಯಾವೊಬ್ಬ ಇತರ ವ್ಯಕ್ತಿಯ ವಿವರಣೆಯೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸುವುದು ಅಂಥ ಅಧ್ಯಕ್ಷ, ವ್ಯವಸ್ಥಾಪಕ ಅಥವಾ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಇತರ ವ್ಯಕ್ತಿಯ ಕರ್ತವ್ಯವೂ ಹೌದು.

 ಅದರನ್ವಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ಅಧಿಸೂಚಿತ ದೇವಾಲಯಗಳ ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರಸ್ತಾಪಿಸಿರುವ ಆಕ್ಷೇಪ ಕಂಡಿಕೆಗಳಿಗೆ ಅನುಪಾಲನ ವರದಿ ಸಲ್ಲಿಸಲು ಹಾಗೂ ವಸೂಲಾತಿಗೆ ಸೂಚಿಸಿರುವ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ಸಂಸ್ಥೆಗೆ ಪಾವತಿಸಬೇಕು. ಎಂದು 2020ರ ಮಾರ್ಚ್ 6ರಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪತ್ರ ಬರೆದಿರುವುದು ತಿಳಿದು ಬಂದಿದೆ.

ಅದೇ ರೀತಿ 2021ರ ನವೆಂಬರ್ 16ರಂದು ನಡೆದಿರುವ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯಾಯ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಡಿಟ್ ವರದಿಗಳಲ್ಲಿನ ಆಕ್ಷೇಪಗಳಿಗೆ ಅನುಪಾಲನಾ ವರದಿಯಲ್ಲಿನ ಜನವರಿ 2022ರೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅದೇರೀತಿ ದೇವಾಲಯಕ್ಕೆ ಆರ್ಥಿಕ ನಷ್ಟಕ ಉಂಟಾಗಿರುವ ಮೊತ್ತವನ್ನು ಆಯಾಯ ಅಧಿಕಾರಿ, ಸಿಬ್ಬಂದಿಯಿಂದಲೇ ವಸೂಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಕರಾವಳಿಯ ಪ್ರವರ್ಗ ಎ ದೇವಾಲಯಗಳ ವಿವರ

ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರಿನ ಶರವೂರು ದುರ್ಗಾಪರಮೇಶ್ವರಿ, ಸೋಮೇಶ್ವರದ ಸೋಮನಾಥ, ಕದ್ರಿಯ ಮಂಜುನಾಥ, ಪಣಂಬೂರಿನ ನಂದನೇಶ್ವರ, ಪಾಂಡೇಶ್ವರದ ಮಹಾಲಿಂಗೇಶ್ವರ, ಬೋಳಾರದ ಮಾರಿಯಮ್ಮ ಮಹಿಷಮರ್ದಿನಿ, ಹಳೆಯಂಗಡಿಯ ಸುಬ್ರಹ್ಮಣ್ಯ, ಶಿಬರೂರು ದೇಲಂತಬೆಟ್ಟು ಕೊಡಮಂತಾಯ ದೈವಸ್ಥಾನ, ಬಂಟ್ವಾಳ ತಾಲೂಕಿನ ಪೊಳಲಿಯ ರಾಜಾರಾಜೇಶ್ವರಿ, ನಂದಾವರದ ವಿನಾಯಕ ಶಂಕರನಾರಾಯಣ, ಕಾವಳಮುಡ್ನೂರು ಕಾರಿಂಜೇಶ್ವರ, ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ, ಬಂಟ್ವಾಳದ ಪಣೋಲಿಬೈಲ್ ಕಲ್ಲುರ್ಟಿ, ಆದ್ಯಪಾಡಿಯ ಆದಿನಾಥೇಶ್ವರ, ತಲಪಾಡಿಯ ದುರ್ಗಾಪರಮೇಶ್ವರಿ, ಕಂಕನಾಡಿ ಕಾವುಬೈಲು ಪಂಚಲಿಂಗೇಶ್ವರ, ಬಜಿಲಕೇರಿ ಕಾರ್ಣೀಯ ಹನುಮಂತ, ಇಡ್ಯಾದ ಮಹಾಲಿಂಗೇಶ್ವರ, ಕೇಮಂತೂರು ಶ್ರೀ ಆದಿ ಜನಾದರ್ನ, ಕುಂದಾಪುರದ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ, ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ, ಉಪ್ಪುಂದದ ದುರ್ಗಾಪರಮೇಶ್ವರಿ, ಅಂಬಲಪಾಡಿಯ ಜನಾದರ್ನ ಮತ್ತು ಮಹಾಕಾಳಿ, ಉಡುಪಿಯ ಅನಂತೇಶ್ವರ ಚಂದ್ರಮೌಳೇಶ್ವರ, ಪಡುಬಿದ್ರೆಯ ಮಹಾಲಿಂಗೇಶ್ವರ, ಬ್ರಹ್ಮಾವರದ ನೀಲಾವರದ ಮಹಿಷ ಮರ್ದಿನಿ, ಕೋಟದ ಅಮೃತೇಶ್ವರಿ, ಹಿರಿಯಡ್ಕದ ವೀರಭದ್ರ, ಕಾಪು ಜನಾರ್ದನ, ಎಲ್ಲೂರಿನ ವಿಶ್ವೇಶ್ವರ, ಕಡಿಯಾಳಿಯ ಮಹಿಷ ಮರ್ದಿನಿ, ಗುಡ್ಡೆಟ್ಟು ಶ್ರೀ ವಿನಾಯಕ, ಸೇನಾಪುರದ ಸುಬ್ರಹ್ಮಣ್ಯ, ಮುಂಡ್ಕೂರಿನ ದುರ್ಗಾಪರಮೇಶ್ವರಿ, ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನಗಳಲ್ಲಿ 2018-19, 2019-20, 2020-21ನೇ ಸಾಲಿನ ಮೂರೂ ವರ್ಷಗಳಲ್ಲೂ ಲೆಕ್ಕ ಪರಿಶೋಧನೆ ಆಗಿಲ್ಲ.

ಸುಳ್ಯದ ಚನ್ನಕೇಶವ ದೇವಸ್ಥಾನ, ತೋಡಿಕಾನದ ಮಲ್ಲಿಕಾರ್ಜುನ ದೇವಸ್ಥಾನ, ಪರಿವಾರ ಪಂಚಲಿಂಗೇಶ್ವರ, ಹರಿಹರೇಶ್ವರ ದೇವಸ್ಥಾನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2019-20 ಮತ್ತು 2020-21ನೇ ಸಾಲಿನ ಲೆಕ್ಕ ಪರಿಶೋಧನೆ ಆಗಿಲ್ಲ.

ಅದೇರೀತಿ ಕಟೀಲು ಶ್ರೀ ದುರ್ಗಾಪರಮೇಶ್ವರಿ, ಬೋಳಾರದ ಮಂಗಳಾದೇವಿ ದೇವಾಲಯ ಮತ್ತು ಕುಡುಪು ಅನಂತ ಪದ್ಮನಾಭ ದೇವಾಲಯದಲ್ಲಿ 2020-21ನೇ ಸಾಲಿನ ಲೆಕ್ಕ ಪರಿಶೋಧನೆ ನಡೆದಿಲ್ಲ. ಬಪ್ಪನಾಡು ದುರ್ಗಾಪರಮೇಶ್ವರಿ, ಕಾವೂರು ಮಹಾಲಿಂಗೇಶ್ವರ, ವಾಮಂಜೂರಿನ ಅಮೃತೇಶ್ವರ, ಕುಳಾಯಿಯ ಚಿತ್ರಾಪುರ ದುರ್ಗಾಪರಮೇಶ್ವರಿ ದೇಗುಲದಲ್ಲಿ 2019-20, 2020-21ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆ ಆಗಿಲ್ಲ.

ಮಂಗಳೂರು ತಾಲೂಕಿನ ಸೂರಿಂಜೆಯ ಪೊನ್ನಗಿರಿ ಮಹಾಲಿಂಗೇಶ್ವರ, ಸುರತ್ಕಲ್‌ನ ಸದಾಶಿವ, ಎಕ್ಕಾರು ಕೋಡಮಣಿತ್ತಾಯ, ಅತ್ತಾವರ ಚಕ್ರಪಾಣಿ ಗೋಪಾಲಕೃಷ್ಣ, ಬೆಳ್ತಂಗಡಿಯ ಆರಂಬೋಡಿಯ ಪಂಚದುರ್ಗಾ ಪರಮೇಶ್ವರಿ, ಪುತ್ತೂರು ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೇವಸ್ಥಾನದಲ್ಲಿ ಲೆಕ್ಕ ಪರಿಶೋಧನೆ ನಡೆದಿಲ್ಲ.

 ಕುಂದಾಪುರದ ಕಾಳಾವರದ ಮಹಾಲಿಂಗೇಶ್ವರ, ಮರವಂತೆಯ ಮಹಾರಾಜಸ್ವಾಮಿ, ಎಲ್ಲಾರೆಯ ಕಾರ್ಕಳ ತಾಲೂಕಿನ ಲಕ್ಷ್ಮೀ ಜನಾರ್ದನ, ಕಾರ್ಕಳದ ಸೋಮೇಶ್ವರದ ನಾಡ್ವಾಲ್ ಮಹಾಗಣಪತಿ, ಮಿಯ್ಯಾರು ಮಹಾಲಿಂಗೇಸ್ವರ, ಕೆಮ್ಮಣ್ಣು ದುರ್ಗಾಪರಮೇಶ್ವರಿ, ಕಾಪು ಮೂರನೇ ಮಾರಿಯಮ್ಮ, ಕುಂಜೂರು ಪಣಿಯಾರು ದುರ್ಗಾಪರಮೇಶ್ವರಿ, ಆರೂರು ವಿಷ್ಣುಮೂರ್ತಿ, ಕಾರ್ಕಳದ ಮಾರಿಯಮ್ಮ, ಕುಂದಾಪುರದ ನಂದಿಕೂರು ದುರ್ಗಾಪರಮೇಶ್ವರಿ, ಕನ್ನರ್ಪಾಡಿಯ ಜಯ ದುರ್ಗಾಪರಮೇಶ್ವರಿ, ಶಂಕರನಾರಾಯಣ, ಕುಂದೇಶ್ವರಸ್ವಾಮಿ, ಬನ್ನಂಜೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಮೂರು ವರ್ಷಗಳಿಂದಲೂ ಲೆಕ್ಕ ಪರಿಶೋಧನೆ ಅಗಿಲ್ಲ.

 ಲೆಕ್ಕ ಪರಿಶೋಧನೆ ನಡೆಸುವಂತೆ ದೇವಾಲಯಗಳ ಅಧ್ಯಕ್ಷರು, ಟ್ರಸ್ಟಿಗಗಳಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ, ವರದಿ ಸಲ್ಲಿಸಬೇಕು ಎಂದು ಮೌಖಿಕ ವಾಗಿ ಅಧಿಕಾರಿಗಳು ಹೇಳಿದ್ದರೂ ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂಬುದು ಲಭ್ಯ ಮಾಹಿತಿಯಿಂದ ತಿಳಿದುಬಂದಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News