ಹರಿದ್ವಾರ ‘ಧರ್ಮ ಸಂಸತ್’: ಸಂಘ ಪರಿವಾರದಿಂದ ಮೋದಿಗೆ ಬೆದರಿಕೆ?
ಯತಿ ನರಸಿಂಗಾನಂದ್ ಮತ್ತು ಇತರರು ಸಂಘಟಿಸಿರುವ ಹರಿದ್ವಾರ ‘ಧರ್ಮ ಸಂಸತ್’ ಭಾರತದ ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಬೆದರಿಕೆಯೊಡ್ಡಿದೆ. ಇಂತಹ ಸಮಾವೇಶವೊಂದು ಉತ್ತರಾಖಂಡ ಸರಕಾರದ ಅನುಮತಿಯಿಲ್ಲದೆ ನಡೆಯುವ ಸಾಧ್ಯತೆ ತೀರಾ ಕಡಿಮೆ. ಇಲ್ಲಿರುವ ಪ್ರಶ್ನೆಯೆಂದರೆ: ಈ ‘ಧರ್ಮ ಸಂಸತ್’ನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕನಿಷ್ಠ ಒಂದು ವರ್ಗದ ಉನ್ನತ ನಾಯಕರ ಅನುಮೋದನೆಯಾದರೂ ಇಲ್ಲದೆ ಅಥವಾ ಅವರಿಗೆ ಮಾಹಿತಿ ಇಲ್ಲದೆಯೇ ಸಂಘಟಿಸಲಾಯಿತೇ ಎನ್ನುವುದು. ಮುಸ್ಲಿಮರನ್ನು ಕೊಲ್ಲುವಂತೆ ಅಲ್ಲಿನ ಭಾಷಣಕಾರರು ಬಹಿರಂಗವಾಗಿ ಕರೆ ನೀಡಿರುವುದು, ಅಲ್ಪಸಂಖ್ಯಾತ ಸಮುದಾಯದ ಅಸ್ತಿತ್ವದ ಪ್ರಶ್ನೆಯಾಗಿಯಷ್ಟೇ ಉಳಿದಿಲ್ಲ. ಅವರು ನಾಥೂರಾಮ್ ಗೋಡ್ಸೆಯ ಹೆಸರನ್ನು ಹಲವು ಬಾರಿ ಹೇಳಿದರು ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೇಲೆ ವಾಗ್ದಾಳಿ ನಡೆಸಿದರು. ಇದು ನರೇಂದ್ರ ಮೋದಿಯ ಅಧಿಕಾರಕ್ಕೆ ಯಾವುದೇ ಹಿಂಜರಿಕೆಯಿಲ್ಲದೆ ಅವರು ಒಡ್ಡಿರುವ ಬೆದರಿಕೆಯಾಗಿದೆ.
ಈ ದೇಶದಿಂದ ಮುಸ್ಲಿಮರನ್ನು ಅಳಿಸಲು ತಮಗೆ ಸಾಧ್ಯವಿಲ್ಲ ಎನ್ನುವುದು ಸಂಘಟಕರಿಗೆ ತಿಳಿದಿದೆ. ಯಾಕೆಂದರೆ ಭಾರತೀಯ ಮುಸ್ಲಿಮರು ಇಲ್ಲಿ ಪ್ರತ್ಯೇಕಿತ ಸಮುದಾಯವಾಗಿ ಬದುಕುತ್ತಿಲ್ಲ. ಇಸ್ಲಾಮಿಕ್ ಜಗತ್ತು ಅತ್ಯಂತ ವಿಸ್ತಾರವಾದುದು. ಅದನ್ನು ಆರೆಸ್ಸೆಸ್/ಭಾರತೀಯ ಜನತಾ ಪಕ್ಷದ ಅಧಿಕಾರವನ್ನು ಬಳಸಿಯೂ ಈ ಶಕ್ತಿಗಳಿಗೆ ನಿಭಾಯಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ, ‘ಸಾಧು ಸಮಾಜ’ವು ರಾಷ್ಟ್ರೀಯ ವಿಷಯಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುತ್ತಿದೆ. ಆದರೆ ಜಾತಿ ಸಿದ್ಧಾಂತದ ವಿಷಯಕ್ಕೆ ಬಂದಾಗ ಅವರದು ಬ್ರಾಹ್ಮಣ್ಯವಾದ. ಈವರೆಗೆ, ತಾವು ಹಿಂದೂ ಧರ್ಮದ ಭಾಗ ಎಂಬುದಾಗಿ ನಂಬಿರುವ ಹೆಚ್ಚಿನ ಶೂದ್ರರು ಸಾಧುಗಳಾಗಿಲ್ಲ. ಇತಿಹಾಸವನ್ನು ಗಮನಿಸಿದಾಗ, ಅವರಿಗೆ ಸಾಧುಗಳಾಗಲು ಅವಕಾಶ ನೀಡಲಾಗಿಲ್ಲ.
ನರೇಂದ್ರ ಮೋದಿ ಓರ್ವ ಸ್ವಘೋಷಿತ ಇತರ ಹಿಂದುಳಿದ ವರ್ಗ (ಒಬಿಸಿ)ದ ಪ್ರಧಾನಿ. 2019ರ ಲೋಕಸಭಾ ಚುನಾವಣೆಯ ಬಳಿಕ ಪರಿಸ್ಥಿತಿ ಅವರ ಕೈಮೀರಿದಂತೆ ಕಾಣುತ್ತಿದೆ. ಆರೆಸ್ಸೆಸ್ ತನ್ನ ಕಾರ್ಯಸೂಚಿಗಳನ್ನು ಅವರ ಸರಕಾರದ ಮೂಲಕ ಕಾರ್ಯಗತಗೊಳಿಸಲು ಆರಂಭಿಸಿದೆ. ‘ಪ್ರಬಲ ಪ್ರಧಾನಿ’ ಎಂಬ ಅವರ ಹೆಗ್ಗಳಿಕೆಯು ಪ್ರಥಮ ಅವಧಿಗೆ ಮಾತ್ರ ಸೀಮಿತವಾಗಿದ್ದಂತೆ ಕಾಣುತ್ತಿದೆ. ಎರಡನೇ ಅವಧಿಯಲ್ಲಿ, ಕೆಲವೊಂದು ವಲಯಗಳಲ್ಲಿ ತನ್ನ ಆ ಹೆಗ್ಗಳಿಕೆಯನ್ನು ಮರುಸ್ಥಾಪಿಸಲು ಅವರು ಮಾಡಿರುವ ಪ್ರಯತ್ನಗಳು ಪ್ರತಿರೋಧವನ್ನು ಎದುರಿಸುತ್ತಿವೆ. ಇದರ ವಿರುದ್ಧ ಸಂಘದಲ್ಲಿರುವ ಅವರ ಎದುರಾಳಿಗಳು ಚಟುವಟಿಕೆಗಳನ್ನು ಆರಂಭಿಸಿದ್ದಾರೆ.
ಶೂದ್ರ/ಒಬಿಸಿಯನ್ನು ಹೊರಗಿಟ್ಟ ಆರೆಸ್ಸೆಸ್
ಆರೆಸ್ಸೆಸ್‌ನ ಕಾರ್ಯಸೂಚಿಯಲ್ಲಿರುವುದು ಹಲವು ಮುಸ್ಲಿಮ್ ಸಂಬಂಧಿ ವಿಷಯಗಳು. ಮೋದಿಯ ಮೊದಲ ಐದು ವರ್ಷಗಳ ಅವಧಿಯಲ್ಲಿ ಅವುಗಳನ್ನು ಸಂಪೂರ್ಣವಾಗಿ ಹೊರಗಿಡಲಾಗಿತ್ತು. ದಿಲ್ಲಿಗೆ ಹೊಸಬರಾಗಿರುವ ಹೊರತಾಗಿಯೂ ಕೇಂದ್ರ ಸರಕಾರದ ಮೇಲೆ ಸಂಪೂರ್ಣ ಹಿಡಿತವನ್ನು ಅವರು ಹೊಂದಿದ್ದಾರೆ ಎಂಬುದಾಗಿ ತಿಳಿಯಲಾಗಿತ್ತು.
ಬಿಜೆಪಿಯು 2019ರ ಚುನಾವಣೆಯನ್ನು, 2014ರಂತಲ್ಲದೆ, ಪಾಕಿಸ್ತಾನ ವಿರೋಧಿ ಮತ್ತು ಮುಸ್ಲಿಮ್ ವಿರೋಧಿ ಉನ್ಮಾದವನ್ನು ಸೃಷ್ಟಿಸಿ ಗೆದ್ದಿತು. ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ, ಅಮಿತ್ ಶಾ ಭವಿಷ್ಯದ ಮಾರ್ಗನಕ್ಷೆಯನ್ನು ಪ್ರಕಟಿಸಿದರು. ಒಂದರ ನಂತರ ಒಂದರಂತೆ ಕಾರ್ಯಸೂಚಿಯ ಅಂಶಗಳು ಹೊರಬಂದವು- ಸಂವಿಧಾನದ 370ನೇ ವಿಧಿ ರದ್ದತಿ (ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್), ತ್ರಿವಳಿ ತಲಾಖ್ ಕಾನೂನು, ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎಲ್ಲ ಸರಕಾರಿ ಸಂಸ್ಥೆಗಳಲ್ಲಿ ಮುಸ್ಲಿಮರ ಉಪಸ್ಥಿತಿಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು. ಈ ಪೈಕಿ ಕೆಲವು ವಿಷಯಗಳಿಗೆ ಶೂದ್ರ/ಒಬಿಸಿಗಳ ಒಂದು ವರ್ಗದ ಬೆಂಬಲವಿತ್ತು. ಯಾಕೆಂದರೆ, ಇದರಿಂದ ತಮಗೆ ಲಾಭವಾಗಬಹುದು ಎಂಬುದಾಗಿ ಅವರು ಭಾವಿಸಿದ್ದರು.
ಆದರೆ, ಶೂದ್ರ/ದಲಿತ/ಆದಿವಾಸಿಗಳನ್ನು ಪದೇ ಪದೇ ‘ಹಿಂದೂ’ ಎಂಬುದಾಗಿ ಕರೆದಿರುವುದನ್ನು ಹೊರತುಪಡಿಸಿ ಅವರಿಗೆ ಸಂಬಂಧಿಸಿ ಯಾವುದೇ ಕಾರ್ಯಸೂಚಿಯನ್ನು ರೂಪಿಸಲಿಲ್ಲ. ಸಂಘ ವ್ಯವಸ್ಥೆಯಲ್ಲೇ ಆದರೂ ಯಾವುದೇ ಶೂದ್ರ/ಒಬಿಸಿಗೆ ಚಿಂತಕನ ಸ್ಥಾನಮಾನ ನೀಡಲಿಲ್ಲ. ಮೀಸಲಾತಿಯಾಗಲಿ, ರಾಜಕೀಯ ಅಧಿಕಾರ ಹಂಚಿಕೆಯಾಗಲಿ, ಶಿಕ್ಷಣವಾಗಲಿ ಶೂದ್ರ/ಒಬಿಸಿಗಳಿಗೆ ಸಂಬಂಧಿಸಿದ ಹೆಚ್ಚಿನ ಸಾಮಾಜಿಕ ಮತ್ತು ರಾಜಕೀಯ ಕಾರ್ಯಸೂಚಿಗಳು ಸಂಘ ವ್ಯವಸ್ಥೆಯಿಂದ ಹೊರಗೆ ರೂಪುಗೊಂಡವುಗಳು. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅಧಿಕಾರದಲ್ಲಿದ್ದಾಗ ಶೂದ್ರ/ಒಬಿಸಿಗಳಿಗೆ ಸಂಬಂಧಿಸಿದ ಒಂದೇ ಒಂದು ವಿಷಯವನ್ನು ಆರೆಸ್ಸೆಸ್ ಪ್ರಸ್ತಾಪಿಸಲಿಲ್ಲ ಹಾಗೂ ಅದನ್ನು ಸಾಧಿಸಲು ರಾಷ್ಟ್ರ ಅಥವಾ ರಾಜ್ಯ ಮಟ್ಟದಲ್ಲಿ ಹೋರಾಡಲಿಲ್ಲ.
ಇದು ಆರೆಸ್ಸೆಸ್‌ಗೆ ಇತಿಹಾಸದುದ್ದಕ್ಕೂ ಒಂದು ಸವಾಲಾಗಿತ್ತು. ಶೂದ್ರ/ಒಬಿಸಿಗಳು ಮುಖ್ಯವಾಗಿ ರೈತರಾಗಿದ್ದಾರೆ. ಕೃಷಿ ಕಾನೂನುಗಳ ಜಾರಿ ಮೂಲಕ ಅವರ ಮೇಲೆ ಮೊದಲ ದಾಳಿ ನಡೆಸಲಾಯಿತು. ಅತ್ಯಂತ ಬೃಹತ್ ಸಂಘಟನಾ ಜಾಲವನ್ನು ಹೊಂದಿರುವ ಆರೆಸ್ಸೆಸ್ ರೈತರ ಪ್ರತಿಭಟನೆಯನ್ನು ನಿರೀಕ್ಷಿಸಲು ವಿಫಲವಾಗಿರುವುದನ್ನು ಊಹಿಸಲೂ ಸಾಧ್ಯವಿಲ್ಲ. ಅವರು ಶೂದ್ರ/ಒಬಿಸಿಗಳ ಮೇಲೆ ಸವಾರಿ ಮಾಡಲು ಹೊರಟರು. ಆದರೆ ಅದು ಯಶಸ್ವಿಯಾಗಲಿಲ್ಲ.
ಪ್ರಧಾನಿಯಾಗಿ ನಾನು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ನೀತಿಯನ್ನು ಅನುಸರಿಸುವೆ ಎಂಬುದಾಗಿ ಮೋದಿ ಹೇಳದಿದ್ದರೆ, ಶೂದ್ರ/ಒಬಿಸಿಗಳು ಅವರನ್ನು ನಂಬುತ್ತಿದ್ದರು ಎಂದು ನನಗೆ ಅನಿಸುವುದಿಲ್ಲ. ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್‌ರ ಭಾಷೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಕಲ್ಪನೆಯನ್ನು ಜಾರಿಗೊಳಿಸಲು ಅಥವಾ ಅದನ್ನು ಸಾಧಿಸುವುದಕ್ಕಾಗಿ ತಾನು ಅಥವಾ ತನ್ನ ಸಂಘಟನೆ ಕೆಲಸ ಮಾಡುವುದು ಎಂಬುದಾಗಿ ಅವರು ಯಾವತ್ತೂ ಹೇಳಲಿಲ್ಲ. ವಾಸ್ತವವಾಗಿ, 2014ರ ಚುನಾವಣಾ ಪ್ರಚಾರದುದ್ದಕ್ಕೂ ಭಾಗವತ್ ಸಂಪೂರ್ಣವಾಗಿ ಮೌನವಾಗಿದ್ದರು ಹಾಗೂ ಜನರ ಕಣ್ಣಿಗೂ ಬಿದ್ದಿರಲಿಲ್ಲ. ಆ ಚುನಾವಣೆಯ ಕಣದಲ್ಲಿ ಆರೆಸ್ಸೆಸ್ ಇರಲಿಲ್ಲ ಎಂಬಂತೆ ಅನಿಸುತ್ತದೆ.
ಮೋದಿಯ ಒಬಿಸಿ ಹಿನ್ನೆಲೆಯು ಸಾರ್ವಜನಿಕ ಬದುಕಿನಲ್ಲಿ ಹೆಚ್ಚೆಚ್ಚು ಬಲಗೊಳ್ಳುತ್ತಿದ್ದಂತೆಯೇ, ಭಾಗವತ್ ರಾಷ್ಟ್ರ ಮಟ್ಟದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು ಹಾಗೂ ವಿವಿಧ ವೇದಿಕೆಗಳಲ್ಲಿ ಮಾತನಾಡುತ್ತಾ ತನ್ನ ಮೀಸಲಾತಿ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿ ಕಾರ್ಯಸೂಚಿಗಳನ್ನು ಹರಿಯಬಿಟ್ಟರು. ಮೀಸಲಾತಿಯ ಬಗ್ಗೆ ಚರ್ಚೆಗೆ ಅವರು ಕರೆ ನೀಡಿರುವುದು ಮತ್ತು ಮದರ್ ತೆರೇಸಾ ಸಂಸ್ಥೆಗಳ ಮೇಲೆ ಅವರು ನಡೆಸಿದ ವಾಗ್ದಾಳಿಗಳನ್ನು ನಾವು ಗಮನಿಸಬೇಕಾಗಿದೆ. ‘‘ಏನು ಬೇಕೋ ಆ ಭರವಸೆಗಳನ್ನು ಮೋದಿ ನೀಡಲಿ ಹಾಗೂ ಮತ ಮತ್ತು ಅಧಿಕಾರ ಪಡೆಯಲಿ’’ ಎನ್ನುವುದು 2014ರಲ್ಲಿ ಆರೆಸ್ಸೆಸ್‌ನ ಚುನಾವಣಾ ತಂತ್ರವಾಗಿತ್ತು ಎನಿಸುತ್ತದೆ.
ಕೃಪೆ: theprint.in