ಲಸಿಕೆ ಪಡೆಯದವರಿಗೆ ಲೋಕಾಯುಕ್ತ ಕಚೇರಿಗೆ ಪ್ರವೇಶವಿಲ್ಲ!

Update: 2022-01-13 02:18 GMT

ಬೆಂಗಳೂರು, ಜ.12: ಕರ್ನಾಟಕ ಲೋಕಾಯುಕ್ತ ಕಚೇರಿಗೆ ದೂರು ನೀಡಲು ಮತ್ತು ವಿಚಾರಣೆಗೆ ಆಗಮಿಸುವ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಕೂಡ 2ನೇ ಡೋಸ್ ಕೋವಿಡ್ ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಎರಡನೇ ಡೋಸ್ ಪಡೆದಿರುವ ಪ್ರಮಾಣಪತ್ರವನ್ನು ಪರಿಶೀಲಿಸದೆಯೇ ಲೋಕಾಯುಕ್ತ ಕಚೇರಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂದು ನಿರ್ಬಂಧ ವಿಧಿಸಿದೆ.

ಮಾಲ್, ಹೋಟೆಲ್, ಈಜುಕೊಳ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಎರಡು ಡೋಸ್ ಲಸಿಕೆ ಪಡೆದಿರುವ ಕುರಿತು ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಬಿಬಿಎಂಪಿ ಕಡ್ಡಾಯ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆಯು ಸಹ ಎರಡನೇ ಡೋಸ್ ಪಡೆದಿರುವ ಕುರಿತು ಪ್ರಮಾಣಪತ್ರವನ್ನು ಕಡ್ಡಾಯ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ, ಕೋವಿಡ್ ಲಸಿಕೆ ಕಡ್ಡಾಯಗೊಳಿಸಿರುವುದು ಮೂಲಭೂತ ಹಕ್ಕು ಮತ್ತು ಖಾಸಗಿತನ ಹಕ್ಕನ್ನು ಉಲ್ಲಂಘಿಸಿದಂತಾಗಿದೆ ಎಂದು ಸುಪ್ರೀಂ ಕೋರ್ಟ್ ಮತ್ತು ಮೇಘಾಲಯ ಸೇರಿದಂತೆ ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ತೀರ್ಪು ನೀಡಿದ್ದರೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ತನ್ನ ಕಚೇರಿಗೆ ಪ್ರವೇಶಿಸುವ ಸಾರ್ವಜನಿಕ, ಅಧಿಕಾರಿ, ನೌಕರರಿಂದ ಕಡ್ಡಾಯ ಲಸಿಕೆ ಪ್ರಮಾಣ ಪತ್ರ ಹೊಂದುವುದನ್ನು ಕಡ್ಡಾಯಗೊಳಿಸಿರುವುದು ಈ ಎಲ್ಲಾ ನ್ಯಾಯಾಲಯಗಳ ತೀರ್ಪುನ್ನು ಉಲ್ಲಂಘಿಸಿದಂತಾಗಿದೆ.

ಎರಡನೇ ಡೋಸ್ ಲಸಿಕೆ ಪಡೆದಿರುವ ಪ್ರಮಾಣಪತ್ರ ಪರಿಶೀಲನೆ ಮತ್ತು ಈ ಸಂಬಂಧ ಖಚಿತಪಡಿಸಿಕೊಳ್ಳದೇ ಕಚೇರಿಗೆ ಪ್ರವೇಶಿಸಲು ಅನುಮತಿ ನೀಡುವ ಸಂಬಂಧ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು 2022ರ ಜನವರಿ 5ರಂದು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಪ್ರತಿ ‘the-file.in’ಗೆ ಲಭ್ಯವಾಗಿದೆ.

ಕೋವಿಡ್-19 ರೂಪಾಂತರಿ ವೈರಸ್ ಒಮೈಕ್ರಾನ್ ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯ ಸರಕಾರ ಮಾರ್ಗಸೂಚಿಗಳನ್ನು ಪಾಲಿಸಲು ಮುಂದಾಗಿರುವ ಲೋಕಾಯುಕ್ತ ಸಂಸ್ಥೆಯು ಹೊರಡಿಸಿರುವ ಸುತ್ತೋಲೆಯಲ್ಲಿ ಲಸಿಕೆ ಪ್ರಮಾಣಪತ್ರ ಪರಿಶೀಲನೆ ಇಲ್ಲದೆಯೇ ಕಚೇರಿಯ ಸ್ವಾಗತಕಾರರು ಸಾರ್ವಜನಿಕರನ್ನು ಅನುಮತಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದೆ. ಅದೇ ರೀತಿ ಈ ಕಚೇರಿಗೆ ಆಗಮಿಸುವ ಪ್ರತಿಯೊಬ್ಬ ಅಧಿಕಾರಿ/ಸಿಬ್ಬಂದಿ ಹಾಗೂ ಸಾರ್ವಜನಿಕರು 2ನೇ ಡೋಸ್ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಖಚಿತಪಡಿಸಿಕೊಂಡ ನಂತರವೇ ಕಚೇರಿಗೆ ಪ್ರವೇಶಿಸಲು ಕಚೇರಿಯ ಸ್ವಾಗತಕಾರರು ಅನುಮತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದೆ.

ಕೋವಿಡ್ ಭೀತಿಯ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಲು ಬರುತ್ತಿದ್ದಾರಾದರೂ ಅವರ ಬಳಿ ಎರಡನೇ ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವಿಲ್ಲದ ಕಾರಣ ದೂರು ಸಲ್ಲಿಸಲು ಅನನುಕೂಲವಾಗುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಂದ ಬಂದಿರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಕೋವಿಡ್ ಎರಡನೇ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದದೇ ಇದ್ದರೆ ಲೋಕಾಯುಕ್ತ ಕಚೇರಿಗೆ ಪ್ರವೇಶ ನೀಡದಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ಕಾಮನ್ ಕಾಸಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣ (2018) 5ಎಸ್ಸಿಸಿ 1 ಒಬ್ಬ ವ್ಯಕ್ತಿಯು ವೈದ್ಯಕೀಯ ಚಿಕಿತ್ಸೆ, ಔಷಧಿ ಅಥವಾ ಮದ್ದುಗಳನ್ನು ತೆಗೆದುಕೊಳ್ಳಬೇಕೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕನ್ನು ಒಬ್ಬ ವ್ಯಕ್ತಿಗೆ ನೀಡಲಾಗಿದೆ ಹಾಗೂ ಅದನ್ನು ಉಲ್ಲಂಘಿಸುವಂತಿಲ್ಲ. ಆದರೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೂ ಆಗಿರುವ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರು ಕೋವಿಡ್ 2ನೇ ಡೋಸ್ ಲಸಿಕೆ ಪಡೆಯದೇ ಇರುವ ಯಾರೊಬ್ಬರನ್ನೂ ಕಚೇರಿಗೆ ಪ್ರವೇಶಿಸಲು ಅನುಮತಿ ನೀಡಬಾರದು ಎಂಬ ಸುತ್ತೋಲೆ ಹೊರಡಿಸಲು ನಿರ್ದೇಶನ ನೀಡಿರುವುದು ಸರಿಯಲ್ಲ ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಅಯ್ಯರ್.

ಅದೇ ರೀತಿ ಜಸ್ಟೀಸ್ ಕೆ.ಎಸ್. ಪುಟ್ಟಸ್ವಾಮಿ(ನಿವೃತ್ತ) ಮತ್ತು ಇನ್ನೊಬ್ಬರು ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಪ್ರಕರಣ (2017) 10 ಎಸ್‌ಸಿಸಿ 1ರಲ್ಲಿ ಸುಪ್ರೀಂಕೋರ್ಟ್ 9 ಮಂದಿ ನ್ಯಾಯಾಧೀಶರ ಒಳಗೊಂಡ ಸಾಂವಿಧಾನಿಕ ಪೀಠವು 2017ರ ಆಗಸ್ಟ್ 24ರಂದು ನೀಡಿದ್ದ ತೀರ್ಪಿನ ಪ್ರಕಾರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದ್ದ ಪಕ್ಷದಲ್ಲಿ ಸಂವಿಧಾನದ ಅನುಚ್ಛೇದ 21ರ ಪ್ರಕಾರ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದೂ ಆದರ್ಶ ಅಯ್ಯರ್ ಅವರು ಉದಾಹರಿಸುತ್ತಾರೆ.

ಕೋವಿಡ್ ಲಸಿಕೆ ಕಡ್ಡಾಯಗೊಳಿಸಿರುವುದು ತಪ್ಪು ಮತ್ತು ಅದು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ ಎಂದು ಮೇಘಾಲಯ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ವರ್ಸಸ್ ಮೇಘಾಲಯ ರಾಜ್ಯ ಸರಕಾರದ ಪ್ರಕರಣದಲ್ಲಿ (ಪಿಐಎಲ್ ನಂ 6/2021- 23.06.2021) ಇತ್ತೀಚೆಗಷ್ಟೇ ತೀರ್ಪು ಪ್ರಕಟಗೊಂಡಿತ್ತು. ಕೇಂದ್ರ ಸರಕಾರವು ಸಹ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯವಲ್ಲ, ಬದಲಿಗೆ ಸ್ವಇಚ್ಛೆ ಎಂದು ಇತ್ತೀಚೆಗಷ್ಟೆ ತಿಳಿಸಿತ್ತು. ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ. ನಿಯಮಿತ ಕಡ್ಡಾಯ ಕೋವಿಡ್ ಸ್ಕ್ರೀನಿಂಗ್ ಜೊತೆಗೆ ಅವರು ಪ್ರವೇಶದ ಮೊದಲು ವ್ಯಾಕ್ಸಿನ್ ಪ್ರಮಾಣ ಪತ್ರ ತೋರಿಸಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರುಪೇರಾಗುತ್ತಿದ್ದು, ಹೊಸ ರೂಪುರೇಷೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನುತ್ತಾರೆ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಯೊಬ್ಬರು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News